ಬಜಾರ್‌ನಲ್ಲಿ ಪಾರಿವಾಳ

7

ಬಜಾರ್‌ನಲ್ಲಿ ಪಾರಿವಾಳ

Published:
Updated:
Deccan Herald

ಆ ಸಭಾಂಗಣದೊಳಗೆ ಸಣ್ಣದೊಂದು ಬಜಾರ್‌ ಸೃಷ್ಟಿಯಾಗಿತ್ತು. ಅಲ್ಲಿ ಹೂವು, ಹಣ್ಣು, ತರಕಾರಿ, ಮಟನ್‌, ಚಿಕನ್‌ಗಳೇನೂ ಮಾರಾಟಕ್ಕಿರಲಿಲ್ಲ. ಆದರೆ ಒಂದಿಷ್ಟು ಹಾಡುಗಳು, ಜತೆಗೆ ಡಾನ್ಸ್‌, ಸೆಲೆಬ್ರಿಟಿಗಳ ಮಾತು, ಚಪ್ಪಾಳೆ ಸದ್ದು, ಸಿಡಿದ ಬಣ್ಣದ ಹಾಳೆಗಳು, ವೇದಿಕೆಯ ಮೇಲಿನ ತೆರೆಯ ಮೇಲೆ ರೆಕ್ಕೆ ಬಡಿಯುತ್ತಿರುವ ಪಾರಿವಾಳ ಇದ್ದವು.

ಅದು ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಸಭಾಂಗಣದ ತುಂಬ ಜನರು ತುಂಬಿದ್ದರು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ನಟ ದರ್ಶನ್‌ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದವರು. ‘ಡಿ ಬಾಸ್‌.. ಡಿ ಬಾಸ್‌’ ಎಂಬ ಕೂಗೇ ಅದಕ್ಕೆ ಸಾಕ್ಷಿಯಾಗಿತ್ತು. ಆದರೆ ದರ್ಶನ್‌ ಅವರ ದರ್ಶನ ಸಿಕ್ಕಿದ್ದು ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ. ಗದ್ದಲದ ನಡುವೆಯೇ ಹಾಡುಗಳನ್ನು ಬಿಡುಗಡೆ ಮಾಡಿದ ದರ್ಶನ್‌, ‘ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ತುಂಬ ಚೆನ್ನಾಗಿ ಮೂಡಿಬಂದಿದೆ. ನಾಯಕ ಧನವೀರ್‌ ಅವರು ಸಾಕಷ್ಟು ಶ್ರಮ ಪಟ್ಟಿರುವುದು ತೆರೆಯ ಮೇಲೂ ಕಾಣಿಸುತ್ತದೆ. ನಿರ್ದೇಶಕ ಸುನಿ ಯಾವಾಗಲೂ ಸಮುದ್ರಕ್ಕೆ ಎದುರಾಗಿಯೇ ಈಜುವವರು. ಎಲ್ಲರೂ ಒಂದು ಟ್ರೆಂಡ್‌ನಲ್ಲಿ ಹೋಗುತ್ತಿದ್ದರೆ ಅವರು ಆ ಟ್ರೆಂಡ್‌ಗೆ ವಿರುದ್ಧ ದಿಕ್ಕಿನಲ್ಲಿ ಸಿನಿಮಾಗಳನ್ನು ಮಾಡುತ್ತ ಬಂದಿದ್ದಾರೆ. ಅವರಿಗೆ ಒಳಿತಾಗಲಿ’ ಎಂದರು.

ಧನವೀರ್‌ ಈ ಚಿತ್ರಕ್ಕಾಗಿಯೇ ದೇಹವನ್ನು ದಂಡಿಸಿ ಏಯ್ಟ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ. ‘ಇದು ನನ್ನ ಮೊದಲ ಚಿತ್ರ. ಹಾಗೆಯೇ ಮರೆಯಲಾರದ ಅನುಭವವನ್ನೂ ಕೊಟ್ಟಿರುವ ಚಿತ್ರ. ಫೈಟ್‌, ಡಾನ್ಸ್‌ ಎಲ್ಲವನ್ನೂ ಕಲಿತುಕೊಂಡಿದ್ದೇನೆ’ ಎಂದ ಅವರು, ‘ನಾನು ಪರದೆಯ ಮೇಲೆ ಮಾಸ್‌ ಹುಡುಗ, ಪರದೆಯ ಹಿಂದೆ ಕ್ಯೂಟ್‌ ಹುಡುಗ’ ಎಂದೂ ಹೇಳಿಕೊಂಡರು.

‘ಮುಂದಿನ ಚಿತ್ರಗಳಲ್ಲಿ ನನ್ನನ್ನು ನಾನು ಇನ್ನೂ ಹೆಚ್ಚು ಹೆಚ್ಚು ತೋರಿಸ್ತೀನಿ’ ಎಂದು ಹೇಳಿದ ಧನವೀರ್‌ಗೆ ‘ಈ ಚಿತ್ರದಲ್ಲಿ ಷರ್ಟ್‌ ಬಿಚ್ಚಿದ್ದೀರಾ, ಹಂಗಾದ್ರೆ ಮುಂದಿನ ಚಿತ್ರದಲ್ಲಿ..?’ ಎಂದು ಕಾಲೆಳೆದರು. ಹೊಸ ಹುಡುಗನನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸುನಿ ಅವರಿಗೆ ಎಂದೂ ಕಷ್ಟ ಅನಿಸಲೇ ಇಲ್ಲವಂತೆ. 

‘ಹೊಸಬರರೊಂದಿಗೆ ನಾನೂ ಹೊಸಬನಾಗ್ತೀನಿ. ಆದ್ದರಿಂದ ಕಷ್ಟ ಎನಿಸುವುದಿಲ್ಲ. ಧನವೀರ್‌ ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬಂದವನು. ಕಷ್ಟ ಎಂದರೇ ಏನೆಂದು ಗೊತ್ತಿಲ್ಲದ ಹಾಗೆ ಅವನ ಪಾಲಕರು ಬೆಳೆಸಿದ್ದಾರೆ. ಅವನ ಬದುಕಿನಲ್ಲಿ ಕಷ್ಟ ಅಂತ ಯಾರಾದರೂ ಕೊಟ್ಟಿದ್ದರೆ ಅದು ನಾನೇ. ಆದರೆ ಆಗ ಅನುಭವಿಸಿದ ಕಷ್ಟದ ಫಲ ತೆರೆಯ ಮೇಲೆ ಕಾಣುತ್ತದೆ’ ಎಂದು ಹೇಳಿದರು ಸುನಿ. ಪಾರಿವಾಳಗಳ ಹಾರಾಟದ ರೇಸ್‌ ಸುತ್ತಲೂ ಈ ಚಿತ್ರದ ಕಥೆಯನ್ನು ಹೆಣೆದಿದ್ದಾರಂತೆ.

ಅದಿತಿ ಪ್ರಭುದೇವ ಈ ಚಿತ್ರದ ನಾಯಕಿ. ‘ಇಡೀ ತಂಡ ತುಂಬ ಚೆನ್ನಾಗಿತ್ತು. ಇಂಥ ತಂಡದ ಜತೆ ಕೆಲಸ ಮಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ’ ಎಂದ ಅವರು ವೇದಿಕೆಯ ಮೇಲೆ ಒಂದು ಹಾಡಿಗೆ ಹೆಜ್ಜೆಯನ್ನೂ ಹಾಕಿದರು. 

ಧನವೀರ್‌ ತಂದೆ ತಿಮ್ಮೇಗೌಡ ಅವರೇ ಈ ‘ಬಜಾರ್‌’ಗೆ ಹಣ ಹೂಡಿದ್ದಾರೆ. ‘ನನ್ನ ಮಗನಲ್ಲಿ ಹುಟ್ಟಿನಿಂದಲೇ ನಟನೆಯ ಪ್ರತಿಭೆ ಇದೆ. ಅದಕ್ಕೆ ನಾನು ಪ್ರೋತ್ಸಾಹ ಕೊಡುತ್ತಿದ್ದೇನೆ’ ಎಂದರು. 

ಶಿವಧ್ವಜ್‌ ಈ ಚಿತ್ರದಕ್ಕ ಪ್ರೊಡಕ್ಷನ್‌ ಡಿಸೈನರ್‌ ಆಗಿ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !