ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಹೊಟ್ಟು ನಿವಾರಣೆಯ ಸೂತ್ರಗಳು

Last Updated 18 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಚರ್ಮ ಬಿರುಕುಬಿಟ್ಟಂತೆಯೇ ತಲೆಯ ಚರ್ಮವೂ ಶುಷ್ಕವಾಗುತ್ತದೆ. ಪರಿಣಾಮ ಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ. ಒಣ ಚರ್ಮದ ಸತ್ತ ಕೋಶಗಳು ಹೆಚ್ಚಾದಂತೆ, ತಲೆ ಹೊಟ್ಟು ಹೆಚ್ಚಾಗುತ್ತದೆ. ಜೊತೆಗೆ ಹಣೆಯ ಬಳಿ ಮೊಡವೆಗಳೂ ಕಾಣಿಸಿಕೊಳ್ಳುತ್ತವೆ. ತಲೆಹೊಟ್ಟು ನಿವಾರಣೆಗೆ ಮನೆಯ ಮದ್ದಿನ ಸಪ್ತ ಸೂತ್ರಗಳು ಇಲ್ಲಿವೆ.

ಕೊಬ್ಬರಿ ಎಣ್ಣೆ, ನಿಂಬೆರಸ ಮಿಶ್ರಣ: ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿಕೊಂಡು, ಸಮ ಪ್ರಮಾಣದಲ್ಲಿ ನಿಂಬೆರಸ ಬೆರೆಸಿ. ಈ ಮಿಶ್ರಣದಿಂದ ತಲೆಗೆ ಮಸಾಜ್‌ ಮಾಡಬೇಕು. ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ನಿಂಬೆ ಹಣ್ಣು ತಲೆಯ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ನಿರ್ಜೀವ ಚರ್ಮದ ಕಣವನ್ನು ನಿರ್ಮೂಲನೆ ಮಾಡುತ್ತದೆ. ಈ ಲೇಪನದ ಮಸಾಜ್‌ ಬಳಿಕ ಅರ್ಧಗಂಟೆಯ ನಂತರ ನಿಮ್ಮಿಷ್ಟದ ಶ್ಯಾಂಪೂ ಹಾಕಿ ತಲೆ ಸ್ನಾನ ಮಾಡಿ.

ಮೆಂತ್ಯ ಪೇಸ್ಟ್‌: ರಾತ್ರಿ ಮಲಗುವ ಮುಂಚೆ ಮೆಂತ್ಯಕಾಳನ್ನು ನೆನೆಸಿಡಿ. ಬೆಳಗ್ಗೆ ನೀರನ್ನೆಲ್ಲ ತೆಗೆದು, ಮೆಂತ್ಯಕಾಳನ್ನು ಮಿಕ್ಸರ್‌ನಲ್ಲಿ ಅರೆಯಿರಿ. ನುಣ್ಣನೆಯ ಪೇಸ್ಟ್‌ ಅನ್ನು ತಲೆಗೆ ಅಂಟಿಕೊಳ್ಳುವಂತೆ, ತಲೆಗೂದಲಿನ ಬುಡಕ್ಕೆಲ್ಲ ಈ ಲೇಪನ ಹಚ್ಚಿ. ಅರ್ಧಗಂಟೆಯ ನಂತರ ನಿಮ್ಮಿಷ್ಟದ ಶ್ಯಾಂಪೂ ಬಳಸಿ ಬಿಸಿನೀರಿನ ಸ್ನಾನ ಮಾಡಿ.

ಹುಳಿ ಮೊಸರು: ಮೆಂತ್ಯ ನೆನೆಸಿ, ರುಬ್ಬಿಡುವಷ್ಟು ಸಮಯ ಇಲ್ಲದಿದ್ದಲ್ಲಿ ಹುಳಿ ಮೊಸರಿನಿಂದ ತಲೆ ಚರ್ಮಕ್ಕೆ ತಾಕುವಂತೆ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ತಲೆಹೊಟ್ಟು ಕಡಿಮೆಯಾಗುವವರೆಗೂ ವಾರಕ್ಕೆ ಒಮ್ಮೆಯಾದರೂ ಹುಳಿಮೊಸರಿನ ಆರೈಕೆ ಅತ್ಯಗತ್ಯ.

ಮೆಹೆಂದಿ: ಮದರಂಗಿಗೆ ಮೊಟ್ಟೆಯ ಬಿಳಿಭಾಗ, ಲಿಂಬೆಹಣ್ಣಿನ ರಸ, ತಲೆಗೂದಲಿಗೆ ಕಂದು ಬಣ್ಣ ಬೇಕಿದ್ದರೆ ಬೀಟ್‌ರೂಟ್‌ ರಸ, ಟೀ ಅಥವಾ ಕಾಫಿ ಡಿಕಾಕ್ಷನ್‌ ಬೆರೆಸಿ, ಮೆಹೆಂದಿ ಕಲಿಸಿಡಿ. ಇದನ್ನು ತಲೆಗೆ ಹಚ್ಚಿಕೊಂಡು ಒಂದು ಒಂದೂವರೆ ಗಂಟೆಯ ನಂತರ ತಲೆ ಸ್ನಾನ ಮಾಡಿ. ಕೂದಲಿಗೆ ಪೋಷಣೆ ಸಿಗುತ್ತದೆ.

ಅಡುಗೆ ಸೋಡಾ: ತಲೆಯನ್ನು ಒದ್ದೆ ಮಾಡಿಕೊಳ್ಳಿ. ಬೇಕಿಂಗ್‌ ಸೋಡಾದಿಂದ ಮಸಾಜ್‌ ಮಾಡಿ, ಮೂರು ನಿಮಿಷಗಳ ನಂತರ ಸ್ವಚ್ಛವಾಗಿ ತಲೆಯನ್ನು ತೊಳೆದುಕೊಳ್ಳಿ.

ಬೇವಿನೆಣ್ಣೆ: ತಲೆಗೆ ಬೇವಿನೆಣ್ಣೆ ಅಥವಾ ಬೇವಿನೆಲೆ ಸಿಕ್ಕರೆ ಅದನ್ನು ಪೇಸ್ಟ್‌ ಮಾಡಿ, ತಲೆಗೆ ಹಚ್ಚಿಕೊಳ್ಳಬೇಕು. ಒಂದರ್ಧ ಗಂಟೆಯ ನಂತರ ತಲೆಸ್ನಾನ ಮಾಡಬೇಕು. ಸ್ನಾನ ಮಾಡುವಾಗ ಕಹಿಯ ಅನುಭವವಾಗುತ್ತದೆ. ಆದರೆ ಅದು ಚರ್ಮಕ್ಕೂ ತಲೆಹೊಟ್ಟಿನ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT