ಬುಧವಾರ, ಡಿಸೆಂಬರ್ 11, 2019
27 °C

’ಬೆಲ್‌ ಬಾಟಂ’ ಪತ್ತೆದಾರಿ ಚಿತ್ರದ ಟೀಸರ್‌; ಕಂಡರು ಯೋಗರಾಜ್‌ ಭಟ್‌, ಶಿವಮಣಿ

Published:
Updated:

80ರ ದಶಕದ ಪತ್ತೇದಾರಿ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಜಯತೀರ್ಥ ಮತ್ತವರ ತಂಡದ ಪ್ರಯತ್ನ ’ಬೆಲ್ ಬಾಟಂ’ ಟೀಸರ್‌ನಲ್ಲಿ ವ್ಯಕ್ತವಾಗುತ್ತಿದೆ. 

ಇತ್ತೀಚೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಬೆಲ್‌ ಬಾಟಂ ಚಿತ್ರದ 1.20 ನಿಮಿಷಗಳ ಟೀಸರ್ ಬಿಡುಗಡೆ ಮಾಡಿದ್ದು, ಈಗಾಗಲೇ 1.43 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಡಾ.ರಾಜ್‌ ಕುಮಾರ್ ಅಭಿನಯದ ಗೋವಾದಲ್ಲಿ ಸಿಐಡಿ 999 ಚಿತ್ರದ ಪೋಸ್ಟ್‌ನೊಂದಿಗೆ ತೆರೆದುಕೊಳ್ಳುವ ದೃಶ್ಯ ಡಿಟೆಕ್ಟಿವ್‌ ದಿವಾಕರ್‌ನನ್ನು ಪರಿಚಯಿಸುತ್ತದೆ. 

ಟೋಪಿ, ಉದ್ದದ ಕೋಟು, ಕೈಗವಸು, ಕನ್ನಡಕ ಹಾಗೂ ಜಾವಾ ಬೈಕ್‌; ಇವಿಷ್ಟು ಡಿಟೆಕ್ಟಿವ್‌ ದಿವಾಕರನ ಪರಿಕರ ಮತ್ತು ವೇಷ. ಉಳಿದಂತೆ ಪೈಪ್‌ ಸೇದುವುದು, ಪುಸ್ತಕಗಳ ಅಧ್ಯಯನ, ಕೇಸ್‌ಸ್ಟಡಿ, ವೇಷ ಮರೆಸುವುದು, ಬದಲಿಸುವುದು...ಇತ್ಯಾದಿ,.. ಇತ್ಯಾದಿ... ಈ ಎಲ್ಲ ದೃಶ್ಯಗಳು ಈತನೇ ಚಿತ್ರದ ಪ್ರಮುಖ ಪಾತ್ರಧಾರಿ ಡಿಟೆಕ್ಟಿವ್‌ ಎಂಬುದನ್ನು ಸಾರಿ ಹೇಳುತ್ತವೆ. 

ಬೆಲ್‌ ಬಾಟಂ ಪ್ಯಾಂಟ್ ಧರಿಸುವ ರಿಷಭ್‌ ಶೆಟ್ಟಿ ಡಿಟೆಕ್ಟಿವ್‌ ದಿವಾಕರನಾಗಿ ಕಾಣಿಸಿಕೊಂಡಿದ್ದು, ಎಂಬತ್ತರ ದಶಕದ ಪ್ರೇಯಸಿಯಾಗಿ ಹರಿಪ್ರಿಯಾ ಇಲ್ಲಿ ಕಂಡು ಮರೆಯಾಗುತ್ತಾರೆ. ನಿರ್ದೇಶಕರಾದ ಯೋಗ್‌ರಾಜ್‌ ಭಟ್‌(ಬೀಡಿ ಸೇದುತ್ತ..) ಮತ್ತು ಶಿವಮಣಿ ಸಹ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ಟೀಸರ್‌ ಬಹಿರಂಗ ಪಡಿಸಿದೆ. 

ಟಿ.ಕೆ.ದಯಾನಂದ ಚಿತ್ರಕ್ಕೆ ಕಥೆ ಒದಗಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣ ಜವಾಬ್ದಾರಿ ವಹಿಸಿದ್ದಾರೆ. ಸಂರೋಷ್‌ ಕುಮಾರ್ ಬೆಲ್‌ ಬಾಟಂಗೆ ಹಣ ಹೂಡಿದ್ದು, 2019ರ ಜನವರಿಯಲ್ಲಿ ಚಿತ್ರ ತೆರೆಕಾಣಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು