ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BIFFES: ಬಾಂಧವ್ಯದ ಸೇತುವೆ ಕಳಕೊಂಡ ಹುಡುಗಿಯ ದಿಟ್ಟ ಕಥನ ‘ಬ್ರಿಜ್‌’

ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಸಿನಿಪ್ರಿಯರ ಗಮನ ಸೆಳೆದ ಚಿತ್ರ
Last Updated 6 ಮಾರ್ಚ್ 2022, 20:17 IST
ಅಕ್ಷರ ಗಾತ್ರ

ಬೆಂಗಳೂರು: ಧುತ್ತೆಂದು ಎದುರಾಗುವ ಸಂಕಷ್ಟಗಳೆಲ್ಲವನ್ನೂ ಅವುಡುಕಚ್ಚಿಕೊಂಡು ದಿಟ್ಟವಾಗಿ ಎದುರಿಸುವ ಅಸ್ಸಾಮಿನ ಹದಿಹರೆಯದ ಹುಡುಗಿ ಯಹೋರಾಟದ ಬದುಕಿನ ಕಥನವೇ ‘ಬ್ರಿಜ್‌’ ಸಿನಿಮಾ. ಸ್ಮಾರ್ಟ್‌ಪೋನ್‌ ಯುಗದಲ್ಲೂ ಹಳ್ಳಿಯ ಹೆಣ್ಣು ಮಕ್ಕಳ ಬದುಕು ಎಷ್ಟು ಸಂಕೀರ್ಣ ಎಂಬುದನ್ನು ನಿರ್ದೇಶಕ ಕೃಪಾಲ್‌ ಕಲಿಟ ಅವರು ಈ ಅಸ್ಸಾಮಿ ಸಿನಿಮಾದಲ್ಲಿ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಭಾನುವಾರ ಪ್ರದರ್ಶನಗೊಂಡ ಈ ಭಾರತೀಯ ಸಿನಿಮಾ ಸಿನಿಪ್ರಿಯರ ಗಮನ ಸೆಳೆಯಿತು.

ತಂದೆ, ತಾಯಿ, ಬಾಲ್ಯದ ಖುಷಿ, ಮದುವೆ.... ಹೀಗೆ ಬದುಕಿನ ಸರ್ವಸ್ವವನ್ನು ಕಳೆದುಕೊಂಡರೂ ಛಲ ಬಿಡದೆ, ಸ್ವಾಭಿಮಾನ ತೊರೆಯದೆ ಬದುಕು ಕಟ್ಟಿಕೊಳ್ಳುವ ಗಟ್ಟಿಗಿತ್ತಿ ಹೆಣ್ಣು ಕಥಾನಾಯಕಿ ಜೋನಾಕಿ. ಜಗತ್ತು ಎಷ್ಟೇ ಮುಂದುವರಿದರೂ ಕನಿಷ್ಠ ಪಕ್ಷ ಸೇತುವೆಯ ಸಂಪರ್ಕವನ್ನೂ ಪಡೆಯಲು ಸಾಧ್ಯವಾಗದೇ ‘ದ್ವೀಪ’ವಾಗಿಯೇ ಉಳಿ ದ ಅಸ್ಸಾಮಿನ ಹಳ್ಳಿಯೊಂದರ ಗೋಳಿನ ಕತೆಯ ಜೊತೆ ಹೆಣ್ಣನ್ನು ಎಡೆಬಿಡದೆ ‘ಕಾಡುವ’ ವ್ಯವಸ್ಥೆಯ ವಿವಿಧ ಆಯಾಮಗಳನ್ನು ಜೋಡಿಸಿ ಅವರು ಕತೆ ಹೇಳಿದ ಪರಿ ಮನಮುಟ್ಟುವಂತಿದೆ.

ಬಣ್ಣದ ಕನಸುಗಳನ್ನು ಕಾಣುವ ವಯಸ್ಸಿನಲ್ಲಿ ಪ್ರವಾಹದಲ್ಲಿ ಅಪ್ಪನನ್ನು ಕಳೆದುಕೊಳ್ಳುವ ಜೋನಾಕಿ ಕುಟುಂಬದ ನೊಗ ಹೆಗಲೇರಿಸಿಕೊಳ್ಳಬೇಕಾಗುತ್ತದೆ. ಅಪಸ್ಮಾರದಿಂದ ಬಳಲುವ ತಾಯಿ ಪುತುಳಿಯನ್ನು ಹಾಗೂ ಪ್ರಾಥ ಮಿಕ ಶಾಲೆಯಲ್ಲಿ ಕಲಿಯುವ ತಮ್ಮ ಬಾಪುಕಾನ್‌ ಸಾಕುವ ಹೊಣೆ ಹೊತ್ತ ಬಳಿಕ ಆಕೆಯ ಕನಸುಗಳಲ್ಲೆ ಕಮರುತ್ತವೆ.

ದ್ವೀಪದಲ್ಲಿರುವ ಊರನ್ನು ಸಂಪ ರ್ಕಿಸಲು ಇದ್ದ ಬಿದಿರಿನ ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ. ಬಾಳೆದಿಂಡಿನ ತೆಪ್ಪವನ್ನೇ ನದಿ ದಾಟಲು ಆಶ್ರಯಿಸಬೇಕಾಗುತ್ತದೆ. ಸಂಪರ್ಕ ಕಡಿದುಕೊಂಡ ಈ ದ್ವೀಪದ ಯುವತಿಯರನ್ನು ಮದುವೆಯಾಗಲು ಪರವೂರಿನವರು ಹಿಂದೇಟು ಹಾಕು ತ್ತಾರೆ. ಹೊಲ ಊಳುತ್ತಾ ಬೇಸಾಯ ಮಾಡುತ್ತಾ ಬದುಕುತ್ತಿರುವ ಜೋನಾ ಕಿಯ ದಿಟ್ಟತನದ ಕತೆಯನ್ನೇ ಜಗತ್ತಿನೆ ದುರು ತೆರೆದಿಡುವ ಪತ್ರಕರ್ತನೇ ಆಕೆಯನ್ನು ಮದುವೆಯಾಗಲು ಮುಂ ದಾಗುವ ಮೂಲಕ ಆಕೆಯಲ್ಲಿ ಮತ್ತೆ ಆಸೆಗಳನ್ನು ತುಂಬುತ್ತಾನೆ. ಊರಿಗೆ ಸೇತುವೆ ಇಲ್ಲದಿರುವುದರಿಂದ ಆಕೆಯ ಆ ಕನಸಿಗೂ ಕಲ್ಲು ಬೀಳುತ್ತದೆ.

ಈ ನಡುವೆ ಊರಿನ ಶ್ರೀಮಂತ ಕುಟುಂಬದ ಯುವಕನಿಂದ ಲೈಂಗಿಕ ಕಿರುಕುಳವನ್ನೂ ಎದುರಿಸುವ ಜೊನಾಕಿ, ತಾನು ಮಾಡದ ತಪ್ಪಿಗೆ ಪಂಚಾಯಿತಿಗೆ ₹ 20 ಸಾವಿರ ದಂಡವನ್ನು ತೆರಬೇಕಾಗುತ್ತದೆ. ಇದಕ್ಕಾಗಿ ಎತ್ತುಗಳನ್ನೂ ಮಾರಬೇಕಾಗುತ್ತದೆ.

ಸೇತುವೆ ಕಳೆದುಕೊಂಡ ಊರಿ ನಂತೆಯೇ, ತಂದೆ ತಾಯಿಯನ್ನು ಕಳೆ ದುಕೊಳ್ಳುವ ಜೊನಾಕಿ ಬದುಕೂ ದ್ವೀಪದಂತಾಗುತ್ತದೆ. ಧುತ್ತೆಂದು ಎದುರಾಗುವ ಪ್ರವಾಹ ಇಡೀ ಊರನ್ನೇ ಸರ್ವನಾಶ ಮಾಡುತ್ತದೆ. ಅಂತೆಯೇ, ತನ್ನ ಬದುಕಿನಲ್ಲಿ ಪದೇ ಪದೇ ಎದುರಾಗುವ ಭೀಕರ ಪ್ರವಾಹಗಳನ್ನು ಜೊನಾಕಿ ಹೇಗೆ ದಿಟ್ಟವಾಗಿ ಎದುರಿಸುತ್ತಾಳೆ ಎಂಬುದೇ ಈ ಸಿನಿಮಾದ ಕಥಾ ಹಂದರ. ಆಕೆಯ ಛಲ, ಹತಾಶೆ, ತಳಮಳ, ಧೃಡ ಮನಸ್ಸಿನ ಛಾಯೆಗಳೇ ಕ್ವಾನ್ವಾಸನ್ನು ಆವರಿಸಿವೆ.

ಇದು ಕೃಪಾಲ್‌ ಅವರ ಚೊಚ್ಚಲ ಸಿನಿಮಾ ಎಂದೆನಿಸುವುದೇ ಇಲ್ಲ. ಚೌಕಟ್ಟಿನೊಳಗಿನ ಪ್ರತಿಯೊಂದು ಚಿತ್ರಣವೂ ಒಂದೊಂದು ಕತೆ ಹೇಳುತ್ತದೆ. ಛಾಯಾಗ್ರಹಣವೂ ಚೆನ್ನಾಗಿದೆ. ಶಿವರಾಣಿ ಕಲಿಟ ನಿರ್ವಹಿಸಿದ ಜೊನಾಕಿ ಪಾತ್ರವನ್ನೂ ಬಹುಕಾಲ ಕಾಡುತ್ತದೆ. ಆಕೆಯ ತಾಯಿಯ (ಪುಟುಲಿ) ಪಾತ್ರಕ್ಕೆ ಅನಿಂದಿತಾ ದಾಸ್‌, ಆಕೆಯ ತಮ್ಮನ (ಬಾಪುಕಿನ್‌) ಪಾತ್ರಕ್ಕೆ ಬಾಲನಟ ಪಾರ್ಥ ಪ್ರೋತಿಮ್‌ ಬೋರಾ ಜೀವ ತುಂಬಿದ್ದಾರೆ.

‘ಬ್ರಹ್ಮಪುತ್ರಾ ಮಹಾನದಿಯ ಉಪನದಿ ಚಾರುಕುರಿಯ ಪ್ರತಿವರ್ಷವೂ ಪ್ರವಾಹವನ್ನು ಸೃಷ್ಟಿಸುತ್ತದೆ. ಪ್ರವಾಹದಿಂದ ಜನರ ಬದುಕುಗಳು ಛಿದ್ರಗೊಂಡ ಪ್ರತ್ಯೇಕ ಘಟನೆಗಳನ್ನು ಪೋಣಿಸಿ ಕತೆ ಹಣೆದಿದ್ದೇನೆ. ‘ಬ್ರಿಜ್‌’ ನೈಜ ಘಟನೆ ಆಧರಿತ ಸಿನಿಮಾ’ ಎಂದು ಕೃಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿನಿಮಾ ಬಜೆಟ್‌ ಕೇವಲ ₹ 30 ಲಕ್ಷ’

‘ಈ ಸಿನಿಮಾ ಕೇವಲ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಾ ಣಗೊಂಡಿದೆ. ಈ ಚಿತ್ರೀಕರಣಕ್ಕೆ 14 ತಿಂಗಳು ಬೇಕಾಯಿತು. ಅಸ್ಸಾಮಿನಲ್ಲಿ ಒಟ್ಟು ಆರು ಋತುಗಳನ್ನು ಗುರುತಿಸುತ್ತೇವೆ. ಪ್ರತಿಯೊಂದು ಋತುವನ್ನೂ ಸಹಜ ವಾತಾವರಣದಲ್ಲೇ ಚಿತ್ರೀಕರಿಸಿದ್ದೇವೆ. ಈ ಚಿತ್ರವನ್ನು 2022ರ ಅಕ್ಟೋಬರ್‌ನಲ್ಲಿ ದುರ್ಗಾಪೂಜೆ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ಕೃಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. 7ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT