ಸೋಮವಾರ, ಏಪ್ರಿಲ್ 6, 2020
19 °C

ಪುಟ್ಟ ದೇಶಗಳ ದೊಡ್ಡ ಸಿನಿಮಾ!

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

ಪುಟ್ಟ ಪುಟ್ಟ ದೇಶಗಳಲ್ಲಿ ನಿರ್ಮಾಣವಾಗುವ ಸಿನಿಮಾಗಳೆಲ್ಲ ಜಗತ್ತಿನಾದ್ಯಂತ ದೊಡ್ಡ ಸುದ್ದಿ ಮಾಡುತ್ತಿವೆ. ಎಸ್ಟೋನಿಯ ಎನ್ನುವ ದೇಶದ ಹೆಸರು ಕೇಳಿದವರೇ ವಿರಳ. 17462 ಚದರ ಮೈಲಿ ವಿಸ್ತೀರ್ಣದ ಪುಟ್ಟ ದೇಶವದು. ದೇಶ ಎಂದರೆ  ಒಂದು ಮುಖ್ಯಪ್ರದೇಶ ಮತ್ತು 22 ದ್ವೀಪಗಳು! ಉತ್ತರ ಯೂರೋಪಿನ ಬಾಲ್ಟಿಕ್‌ ಕಡಲತೀರದಲ್ಲಿರುವ ಈ ದೇಶದ ಜನಸಂಖ್ಯೆ ಕೇವಲ 13 ಲಕ್ಷ! ‘ಎಲ್ಲಿದೆ ಸ್ವಾಮೀ.. ಈ ದೇಶ’ ಎಂದು ಹುಡುಕುವವರಿಗೆ ಸುಲಭದ ಗುರುತೆಂದರೆ, ಈ ದೇಶ ದಾಟಿದ ಬಳಿಕ ಫಿನ್ಲೆಂಡ್‌ ಸಿಗುತ್ತದೆ ಎನ್ನುವುದು. ಫಿನ್ಲೆಂಡಿಗೆ ಕನ್ನಡಿಗರು ಹೋಗಿಬರುವುದಿದೆ. 1920ರಲ್ಲಿ ರಷ್ಯಾದಿಂದ ವಿಮೋಚನೆ ಹೊಂದಿದ ದೇಶವಿದು.

ಎಸ್ಟೋನಿಯನ್‌ ಭಾಷೆಯ ಸಿನಿಮಾ ‘ಟ್ರುಥ್‌ ಅಂಡ್‌ ಜಸ್ಟಿಸ್‌.’ ಕೃಷಿಕರ ಗೋಳು ಎಲ್ಲ ದೇಶಗಳಲ್ಲೂ ಒಂದೇ ಎನ್ನುವಂತಿದೆ. ಕೃಷಿ ಕುಟುಂಬಗಳ ನಡುವಣ ವೈರ, ಜಗಳ ಮತ್ತು ಮಾನವೀಯತೆಯ ಕಥೆಯಿದು. ಟಾನೆಲ್ ಟೂಮ್‌ ನಿರ್ದೇಶನದ ಈ ಚಿತ್ರ ಬೆಂಗಳೂರು ಚಿತ್ರೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

ಇನ್ನೊಂದು ದೇಶ ಕೊಸೊವೊ. ಆಗ್ನೇಯ ಯೂರೋಪಿನ ಈ ಪುಟ್ಟ ದೇಶ 1991ರಲ್ಲಿ, ಸೆರ್ಬಿಯಾದ ಆಳ್ವಿಕೆಯಿಂದ ಕಳಚಿಕೊಂಡು, ತನ್ನನ್ನು ತಾನು ಸ್ವತಂತ್ರ ಎಂದು ಘೋಷಿಕೊಂಡಿದೆ. ಆದರೆ ಅಲ್ಲಿರುವುದು ದೇಶಭ್ರಷ್ಟ ಸರ್ಕಾರ. 4200 ಚದರಮೈಲಿ ವಿಸ್ತೀರ್ಣದ ದೇಶದ ಜನಸಂಖ್ಯೆ ಕೇವಲ 18 ಲಕ್ಷ. ‘ಝನಾ’ ಎನ್ನುವ ಅಲ್ಲಿಯ ಸಿನಿಮಾ ಈ ಸಲ ಬೆಂಗಳೂರು ಉತ್ಸವದ ಇನ್ನೊಂದು ಆಕರ್ಷಣೆ. ಪುಟ್ಟ ದೇಶವಾದರೂ ಭಾಷೆಗಳು ಹಲವಿವೆ. ಅಲ್ಬೇನಿಯನ್‌, ಸೆರ್ಬಿಯನ್‌, ಬೋಸ್ನಿಯನ್‌, ಟರ್ಕಿಶ್‌, ರೊಮಾನಿ.. ಹೀಗೆ. ಆಲ್ಬೇನಿಯನ್‌ ಭಾಷೆಯ ಈ ಸಿನಿಮಾದಲ್ಲಿ ಹೆರಿಗೆಯ ನೋವಿನ ಸ್ವಂತ ಕಥೆಯನ್ನು ಹೇಳಿದ್ದಾರೆ ನಿರ್ದೇಶಕಿ ಆ್ಯಂಟೊನೆಟಾ ಕಸ್ಟ್ರಾಟಿ.

ಮೊದಲ ದಿನ ಉತ್ಸವದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣಲಿವೆ. ಅದರಲ್ಲಿ ಮುಖ್ಯವಾಗಿ ಗಮನಿಸಲೇಬೇಕಾದ ಚಿತ್ರಗಳೆಂದರೆ, ಪೋಲಂಡಿನ ‘ಕೋರ್ಪಸ್‌ ಕ್ರಿಸ್ಟಿ’ (ನಿ: ಜಾನ್‌ ಕೊಮಸಾ), ಇರಾನಿನ ‘ವೆನ್‌ ದಿ ಮೂನ್‌ ವಾಸ್‌ ಫುಲ್‌’ (ನಿ: ನರ್ಗಿಸ್‌ ಅಭ್ಯಾರ್‌), ಮಂಗೋಲಿಯಾದ ‘ದಿ ಸ್ಟೀಡ್‌’ (ನಿ: ಎರ್ಡೆನೆಬಿಲೆಗ್‌ ಗ್ಯಾನ್‌ಬೋಲ್ಡ್‌), ರಷ್ಯಾದ ‘ಬೀನ್‌ಪೋಲ್‌’ (ನಿ: ಕೆಂಟೆಮಿರ್‌ ಬಲಗೊವ್‌), ಫ್ರಾನ್ಸ್‌ನ ‘ಲೆಸ್‌ ಮಿಸರೆಬಲ್ಸ್‌’ (ನಿ:ಲಾಡ್‌ಜ್ಲೀ) ಮತ್ತು ‘ಪೋರ್ಟ್‌ರೈಟ್‌ ಆಫ್ ಎ ಲೇಡಿ ಆನ್‌ ಫೈರ್‌’ (ನಿ: ಸೆಲಿನ್‌ ಸಿಯೆಮ್ಮಾ).

ಮೊದಲ ದಿನ ಕನ್ನಡದ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. ಅದರಲ್ಲಿ ಮುಖ್ಯವಾಗಿ ‘ಕಲ್ಟ್‌’ ಎಂದೇ ಪರಿಗಣಿತವಾದ ಯಶಸ್ವೀ ಸಿನಿಮಾಗಳನ್ನು ನೋಡಬೇಕೆಂದರೆ ಶಂಕರ್‌ನಾಗ್‌ ನಿರ್ದೇಶನದ ‘ಮಿಂಚಿನ ಓಟ’ ಮತ್ತು ತೆಲುಗಿನ ಕೆ.ವಿಶ್ವನಾಥ್‌ ನಿರ್ದೇಶನದ ‘ಶಂಕರಾಭರಣಂ’ ಗಮನಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು