ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆ ಮೇಲೆ ಜಗದ ಮಾಯೆ ಮತ್ತೆ ಬಂತು ಸಿನಿಮೋತ್ಸವ

ಫೆ.21ರಿಂದ 28ರವರೆಗೆ * 11 ಸ್ಕ್ರೀನ್‌ಗಳ ಮೇಲೆ ವಿಶ್ವ ಸಿನಿಮಾ
Last Updated 30 ಜನವರಿ 2019, 20:00 IST
ಅಕ್ಷರ ಗಾತ್ರ

ಅರವತ್ತು ದೇಶಗಳ ವಿಭಿನ್ನ 200 ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಬೆಂಗಳೂರು ಸಿನಿರಸಿಕರಿಗೆ ಮತ್ತೆ ಒದಗಿ ಬರುತ್ತಿದೆ. ರಾಜಾಜಿನಗರದ ‘ಒರಾಯನ್‌ ಮಾಲ್‌’ನಲ್ಲಿ ಫೆಬ್ರುವರಿ 21 ರಿಂದ 28ರವರೆಗೆ ಒಂದು ವಾರ ಕಾಲ ನಡೆಯಲಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ (BIFFES) ಸುಮಾರು ಹನ್ನೊಂದು ಪರದೆಗಳ (ಸ್ಕ್ರೀನ್ಸ್‌) ಮೇಲೆ ವೈವಿಧ್ಯಮಯ ಸಿನಿ ಜಗತ್ತು ಜೀವ ತಳೆಯಲಿದೆ.

ಜಗದ ಸಿನಿ ಜೀವಿಗಳು, ವಿಮರ್ಶಕರು, ಸಿನಿ ಪತ್ರಕರ್ತರು ಮತ್ತು ಮುಖ್ಯವಾಗಿ ಸಾವಿರಾರು ಸಿನಿಮಾ ರಸಿಕರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಇರಾನ್‌, ಪೊಲೆಂಡ್‌, ಜರ್ಮನಿ ಮತ್ತು ಲ್ಯಾಟಿನ್‌ ಅಮೆರಿಕ ಚಿತ್ರಗಳು ಈ ಸಲದ ಪ್ರಮುಖ ಆಕರ್ಷಣೆಗಳಾಗಿವೆ.

ಟರ್ಕಿಯ ನೂರಿ ಬಿಲ್ಗ್‌ ಸೈಲನ್‌, ಲೆಬನಾನ್‌ನ ನದೀನ್‌ ಲಬಾಕಿ, ಪೋಲೆಂಡ್‌ನ ಪವ್ಲಿಕೊಸ್ಕಿ, ಚೀನಾದ ಜಿಯಾ ಝೇಂಗ್‌, ಜಪಾನ್‌ನ ಹಿರೊಕಜು ಕೊರೆ–ಎಡ, ಫಿನ್‌ಲ್ಯಾಂಡ್‌ನ ಆಕಿ ಕರಿಸ್ಮಾಕಿ, ಮೆಕ್ಸಿಕೊದ ಅಲ್ಫೋನ್ಸೊ ಕೊರೆನ್‌, ಇರಾನ್‌ನ ಜಾಫರ್‌ ಪನಾಹಿ ಸೇರಿದಂತೆ ವಿಶ್ವದ ಖ್ಯಾತನಾಮ ನಿರ್ದೇಶಕರ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಏಷ್ಯಾ ಮತ್ತು ವಿಶ್ವ ಸಿನಿಮಾ ವಿಭಾಗಗಳಿಗೆ ಆಯ್ಕೆಯಾಗಿರುವ ಚಿತ್ರಗಳು ಬರ್ಲಿನ್‌, ಕಾನ್‌, ಟೊರೊಂಟೊ, ಗೋವಾ, ಮುಂಬೈ, ಕೇರಳ ಸೇರಿದಂತೆ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿವೆ.

ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ (ಎಫ್‌ಐಪಿಆರ್‌ ಇಎಸ್‌ಸಿಐ) ಪ್ರಶಸ್ತಿ ವಿಜೇತ ಹಾಗೂ ಏಷ್ಯಾಚಲನಚಿತ್ರ ಪ್ರಚಾರ ಜಾಲ (ಎನ್‌ಇಟಿಪಿಎಸಿ) ಪ್ರಶಸ್ತಿ ವಿಜೇತ ಆಯ್ದ ಚಿತ್ರಗಳ ಪ್ರದರ್ಶನ ಈ ಉತ್ಸವದ ವಿಶೇಷತೆ.

ನಾಡಿನ ಹೆಸರಾಂತ ಛಾಯಾಗ್ರಾಹಕ ಜಿ.ಎಸ್‌. ಭಾಸ್ಕರ್‌ ಅವರ ಸಲಹೆಯೊಂದಿಗೆ ಬೆಂಗಳೂರು ಮೂಲದ ಸಾಕ್ಷ್ಯಚಿತ್ರ ನಿರ್ಮಾತೃ ವಿನೋದ್‌ರಾಜ್‌, ಉತ್ಸವದ ’ಪ್ರಾಕೃತಿಕ ವಿಕೋಪ‘ ವಿಷಯ ಕುರಿತಂತೆ ಸಂಗ್ರಹಿಸಿದ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನಿರ್ಮಾಣಗೊಂಡ ಚಿತ್ರಗಳ ವಿಶೇಷ ವಿಭಾಗವೊಂದು ಈ ಸಲದ ಉತ್ಸವಕ್ಕೆ ವೈವಿಧ್ಯತೆಯ ಮೆರುಗು ನೀಡಲಿದೆ. ಬಂಜಾರ, ಬ್ಯಾರಿ, ಶೆರುಡುಕ್‌ಪೆನ್‌, ಜಸರಿ, ಖಾಸಿ, ಗಾರೊ ಮುಂತಾದ ಭಾಷೆಗಳಲ್ಲಿ ನಿರ್ಮಾಣಗೊಂಡ ಸಿನಿಮಾಗಳು ಸಿನಿರಸಿಕರನ್ನು ರಂಜಿಸಲಿವೆ.

ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ನಟ ಅಂಬರೀಷ್‌, ಲೋಕನಾಥ್‌ ಮತ್ತು ಚಿತ್ರ ಸಾಹಿತಿ ಎಂ.ಎನ್‌. ವ್ಯಾಸರಾವ್‌ ಅವರನ್ನು ಸಿನಿಮೋತ್ಸವ ವಿಶೇಷವಾಗಿ ಸ್ಮರಿಸಿಕೊಳ್ಳಲಿದೆ. ಅಂಬರೀಷ್‌ ಅಭಿನಯದ ‘ನಾಗರಹಾವು’, ‘ಶುಭಮಂಗಳ’, ‘ಪಡುವಾರಹಳ್ಳಿ ಪಾಂಡವರು’, ‘ರಂಗನಾಯಕಿ’ ಮತ್ತು ’ಅಂತ‘ ಚಿತ್ರಗಳ ವಿಶೇಷ ಪ್ರದರ್ಶನ ಉತ್ಸವದ ಮತ್ತೊಂದು ವಿಶೇಷತೆ.

ಏಷ್ಯಾ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳ ಸ್ಪರ್ಧೆ ಮತ್ತು ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ.. ಒಟ್ಟು ನಾಲ್ಕು ವಿಭಾಗಗಳಲ್ಲಿ ಚಲನಚಿತ್ರ ಸ್ಪರ್ಧೆಗಳು ನಡೆಯಲಿವೆ.

‘ವೀಕ್ಷಣೆ, ಗ್ರಹಿಕೆ ಮತ್ತು ಕಲಿಕೆ ಹೀಗೆ ಮೂರು ವಿಭಿನ್ನ ನೆಲೆಗಳಿಂದ ಒಟ್ಟು ಸಿನಿಮಾ ರಸಸ್ವಾದ ಕಟ್ಟಿಕೊಡುವ ಯತ್ನ ಉತ್ಸವದ್ದು. ಆಸ್ಕರ್‌ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಾಮನಿರ್ದೇಶಿತ ಮತ್ತು ಈಗಾಗಲೇ ವಿಶ್ವ ಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ವಿಶ್ವ ಸಿನಿಮಾಗಳು, ಭಾರತದ ಇತರ ಪ್ರಾದೇಶಿಕ ಭಾಷೆಗಳ ಚಿತ್ರಗಳು, ಕನ್ನಡದ ಚಿತ್ರಗಳು ಉತ್ಸವದ ಆಕರ್ಷಣೆಯಾಗಿವೆ. ಸಂತೋಷ ಮತ್ತು ಸಂಭ್ರಮದಿಂದ ವಿಶ್ವ ಸಿನಿಮಾಗಳನ್ನು ಸವಿಯುವ ಅಪೂರ್ವ ಅವಕಾಶ ಇದಾಗಿದೆ. ದೇಶದ ಕೆಲವೇ ರಾಜ್ಯಗಳು ನಡೆಸುವ ಇಂಥ ಅಂತರರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿನಲ್ಲೂ ಸಂಘಟಿಸುವ ಮೂಲಕ ನಾಡಿನ ಜನತೆ, ಸರ್ಕಾರ ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ಹೆಮ್ಮೆಯ ವಿಷಯ’ಎಂದು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

‘ಏಷ್ಯಾ ವಿಭಾಗದ ಚಿತ್ರ ಸ್ಪರ್ಧೆ ವಿಭಾಗಕ್ಕೆ 67 ಚಿತ್ರಗಳು ಪ್ರವೇಶ ಪಡೆದಿದ್ದವು. ಅವುಗಳಲ್ಲಿ 15 ಚಿತ್ರಗಳನ್ನು ಅಂತಿಮ ಸ್ಪರ್ಧೆಗೆ ಆಯ್ದುಕೊಳ್ಳಲಾಗಿದೆ. ಪ್ರಶಸ್ತಿ ವಿಜೇತ ಚಿತ್ರಕ್ಕೆ ಹತ್ತು ಸಾವಿರ ಅಮೆರಿಕನ್‌ ಡಾಲರ್‌ ಮೌಲ್ಯದ ಪ್ರಶಸ್ತಿ ನೀಡಲಾಗುವುದು. ಭಾರತೀಯ ಚಿತ್ರಗಳ ಸ್ಪರ್ಧೆ ವಿಭಾಗಕ್ಕೆ 36 ಚಿತ್ರಗಳು ಪ್ರವೇಶ ಪಡೆದಿದ್ದವು. ಅವುಗಳಲ್ಲಿ 12 ಚಿತ್ರಗಳನ್ನು ಆಯ್ದುಕೊಳ್ಳಲಾಗಿದೆ.ಕನ್ನಡ ವಿಭಾಗದಲ್ಲಿ 68 ಚಿತ್ರಗಳು ಪ್ರವೇಶ ಪಡೆದಿದ್ದವು. ಅವುಗಳಲ್ಲಿ 16 ಚಿತ್ರಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಚಿತ್ರಗಳನ್ನು ಆಯ್ಕೆ ಮಾಡಲು ಪ್ರತ್ಯೇಕ ಆಯ್ಕೆ ಸಮಿತಿಗಳನ್ನು ರೂಪಿಸಲಾಗಿತ್ತು. ಅಲ್ಲದೇ ಅಂತರರಾಷ್ಟ್ರೀಯ, ರಾಷ್ಟ್ರೀಯ ಆಯ್ಕೆ ಸಮಿತಿ ಅಂತಿಮವಾಗಿ ಚಿತ್ರ ಪ್ರಶಸ್ತಿಗಳನ್ನು ನಿರ್ಧರಿಸಲಿವೆ‘ ಎಂದು ಉತ್ಸವದ ಕಲಾತ್ಮಕ ನಿರ್ದೇಶಕ ಎನ್‌. ವಿದ್ಯಾಶಂಕರ್‌ ವಿವರಿಸಿದರು.

ಇತ್ತೀಚೆಗೆ ತುಂಬ ಸದ್ದು ಮಾಡಿದ ‘ಕೆಜಿಎಫ್‌‘ ಕನ್ನಡ ಚಲನಚಿತ್ರದ ಯಶಸ್ಸು, ತಂತ್ರಜ್ಞಾನವನ್ನು ಅದು
ಬಳಸಿಕೊಂಡ ಬಗೆ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಗೋಷ್ಠಿಯೊಂದನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ. ಬಿ.ವಿ.ಕೆ. ಮೂರ್ತಿ ಸ್ಮಾರಕ ವಿಶೇಷ ಉಪನ್ಯಾಸ: ಮುಂಬೈ ಹೆಸರಾಂತ ಛಾಯಾಗ್ರಾಹಕ ರಫೀ ಮಹಮೂದ್‌.

ಚಿತ್ರಕಥೆ ರಚನಾ ಕಾರ್ಯಾಗಾರ (ಎರಡು ದಿನಗಳ ಕಾಲ): ಆಸ್ಟ್ರೇಲಿಯಾದ ಚಿತ್ರಕಥಾ ಸಲಹೆಗಾರ್ತಿ/ಸಂಕಲನಗಾರ್ತಿ ಕ್ಲೇರ್‌ ಡೊಬಿನ್‌, ಮೆಲ್ಬರ್ನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಯಮ ಮತ್ತು ಮಾರುಕಟ್ಟೆ ವಿಬಾಗದ ನಿರ್ದೇಶಕ ಮಾರ್ಕ್‌ ವುಡ್ಸ್‌. ಸಮನ್ವಯಕಾರ: ಚಿಲನಚಿತ್ರ ನಿರ್ದೇಶಕ ಎನ್‌.ಎಸ್. ಶಂಕರ್‌.

ಸಂವಾದ: ಹೆಸರಾಂತ ಹಿಂದಿ ಚಿತ್ರ ನಿರ್ಮಾತೃ ರಾಹುಲ್‌ ರವೈಲ್‌ ಅವರೊಂದಿಗೆ.

ಚರ್ಚೆ: ‘ಡಿಜಿಟಲ್‌ ಯುಗದಲ್ಲಿ ಸಹನಿರ್ಮಾಣ ಸಮಸ್ಯೆಗಳು ಮತ್ತು ಮಾರುಕಟ್ಟೆ ಸವಾಲುಗಳು’ ಎಂಬ ವಿಷಯದ ಮೇಲೆ ವಿಶೇಷ ಚರ್ಚೆ.

ಉಪನ್ಯಾಸ: ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜ್‌ ಸಹಯೋಗದೊಂದಿಗೆ ಸಿನಿಮಾ ತಾಂತ್ರಿಕತೆ ವರ್ಚುವೆಲ್‌ ರಿಯಾಲಿಟಿ ಕುರಿತು ಶೈಕ್ಷಣಿಕ ಉಪನ್ಯಾಸ.

ನಿರ್ದೇಶಕರೊಂದಿಗೆ ಸಂವಾದ: ಕ್ರಿಸ್ಟಾಫ್‌ ಜಾನುಸಿ.

ಲಿಂಗ ಸಂವೇದನೆ ಕುರಿತು ಸಂವಾದ: ಸಾಹಿತಿ ಮತ್ತು ಪತ್ರಕರ್ತರ ಬಳಗ ‘ಹಿತೈಷಿಣಿ’ ಆಯೋಜನೆ.

ಮಾಸ್ಟರ್‌ ಕ್ಲಾಸ್‌: ನೃತ್ಯಸಂಯೋಜನೆ ಮತ್ತು ಚಿತ್ರ ನಿರ್ಮಾಣ ಕುರಿತಂತೆ ಜರ್ಮನ್‌ ನಿರ್ದೇಶಕ ಮೈಕೆಲ್‌ ಮಾರಿಸೆನ್ಸ್‌ ಅವರಿಂದ.

ವಿಚಾರಸಂಕಿರಣ/ಪುಸ್ತಕ ಬಿಡುಗಡೆ: ವಿಶ್ವ ಚಲನಚಿತ್ರ ವಿಮರ್ಶಕರ ಸಂಘಟನೆ ನಡೆಸಿಕೊಡುವ ಚಲನಚಿತ್ರ ವಿಮರ್ಶೆ ಕುರಿತು ವಿಚಾರ ಸಂಕಿರಣ. ಹಿರಿಯ ಪತ್ರಕರ್ತ ಮುರಳೀಧರ್‌ ಖಜಾನೆ ಸೇರಿದಂತೆ ಕೆಲವು ಲೇಖಕರ ಕೃತಿಗಳ ಬಿಡುಗಡೆ.

ವಿಶೇಷ ಚರ್ಚೆ: ಡಿಜಿಟಲ್‌ ಚಿತ್ರನಿರ್ಮಾಣ ಸಂದರ್ಭದಲ್ಲಿ ಶಬ್ದ ವಿನ್ಯಾಸ. ಚಲನಚಿತ್ರದಲ್ಲಿ ಕಲೆ ಮತ್ತು ವಿನ್ಯಾಸ.

ಮುಕ್ತವೇದಿಕೆ: ಭಾರತೀಯ ಚಿತ್ರಸಮಾಜಗಳ ಒಕ್ಕೂಟದ ದಕ್ಷಿಣ ವಲಯ ನಡೆಸಿಕೊಡುವ ಕಾರ್ಯಕ್ರಮ.

ವಿಶೇಷ ಉಪನ್ಯಾಸ: ಮಹಾತ್ಮಾ ಗಾಂಧಿ 150

ಉದ್ಘಾಟನೆ

ಸಿನಿಮೋತ್ಸವದ ಉದ್ಘಾಟನಾ ಸಮಾರಂಭ ಫೆ.21ರಂದು ಸಂಜೆ 6ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ನಟ ನಟಿಯರು ಮತ್ತಿತರ ಗಣ್ಯರು ಭಾಗವಹಿಸುವರು. ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ರಾಜ್ಯಪಾಲ ವಜುಭಾಯ್‌ ವಾಲಾ ಅವರು ಏಷ್ಯನ್‌ ಮತ್ತು ಭಾರತೀಯ ಚಲನಚಿತ್ರ ಸ್ಫರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇಲ್ಲಿ ನೋಂದಾಯಿಸಿ:

ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಜ. 21ರಿಂದ ಆರಂಭವಾಗಿದೆ. ಈಗಾಗಲೇ 800 ಮಂದಿ ನೋಂದಾಯಿಸಿದ್ದಾರೆ.

ಫೆ.1ರಿಂದ ಜಾಲತಾಣ ಮಾತ್ರವಲ್ಲದೇ ಈ ಕೆಳಗಿನ ಜಾಗಗಳಲ್ಲಿ ನೋಂದಾಯಿಸಿಕೊಳ್ಳಬಹುದು.

ಚಲನಚಿತ್ರ ಅಕಾಡೆಮಿ ಕಾರ್ಯಾಲಯ

ಕನ್ನಡ ಚಲನಚಿತ್ರ ಅಮೃತೋತ್ಸವ ಭವನ

ವರ್ತುಲ ರಸ್ತೆ, ನಂದಿನಿ ಬಡಾವಣೆ, ಬೆಂಗಳೂರು

* ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ಇನ್‌ಫೆಂಟ್ರಿ ರಸ್ತೆ, ಬೆಂಗಳೂರು

* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,

ಕ್ರೆಸೆಂಟ್ ರಸ್ತೆ, ಹೈಗ್ರೌಂಡ್ಸ್‌, ಬೆಂಗಳೂರು

* ಸುಚಿತ್ರಾ ಫಿಲಂ ಸೊಸೈಟಿ

9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು

ಪ್ರತಿನಿಧಿ ಶುಲ್ಕ: ಸಾರ್ವಜನಿಕರಿಗೆ ₹ 800. ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಚಿತ್ರ ಸಮಾಜಗಳ ಸದಸ್ಯರಿಗೆ ₹ 400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT