ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಗದ ಮೂಲ

Last Updated 7 ನವೆಂಬರ್ 2018, 19:34 IST
ಅಕ್ಷರ ಗಾತ್ರ

ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |
ಮುಗಿವ ತರಣಿಯ ರಕ್ತ ಹಿತವೆನಿಸದೇಕೋ ! ||
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |
ಬಗೆವೆನ್ನ ಮನಸಿನೊಳೊ ? – ಮಂಕುತಿಮ್ಮ || 52 ||

ಪದ-ಅರ್ಥ: ಗಗನನೀಲಿಮೆಯೆನ್ನ=ಗಗನ+ನೀಲಿಮೆ(ನೀಲಿ ಬಣ್ಣ)+ಎನ್ನ ಮುಗಿವ=ಮುಳುಗುತ್ತಿರುವ, ತರಣಿ=ಸೂರ್ಯ, ಬಗೆವೆನ್ನ=ಬಗೆವ+ಎನ್ನ

ವಾಚ್ಯಾರ್ಥ: ಗಗನ ನೀಲಿ ಬಣ್ಣ ನನ್ನ ಕಣ್ಣಿಗೆ ಮುದವನ್ನು ಕೊಡುವಂತೆ ಮುಳುಗುವ ಸೂರ್ಯನ ರಕ್ತವರ್ಣ ನನಗೇಕೆ ಹಿತವನ್ನುಂಟುಮಾಡುವುದಿಲ್ಲ? ಈ ಸೊಗಸಿನ ಮೂಲ ಎಲ್ಲಿದೆ? ನೀಲಿ ಬಣ್ಣದೊಳಗೋ, ಕೆಂಪುವರ್ಣದಲ್ಲೋ ಅಥವಾ ಹಾಗೆ ಭಾವಿಸುವ ನನ್ನ ಮನಸ್ಸಿನೊಳಗೋ?

ವಿವರಣೆ: ಈ ಕಗ್ಗದಲ್ಲಿ ಹೇಳಿರುವುದನ್ನು ಕಂಡು ಯಾರೂ ಡಿ.ವಿ.ಜಿ ಯವರಿಗೆ ನೀಲಿ ಬಣ್ಣ ಬಹು ಇಷ್ಟವಾಗಿತ್ತು, ಕೆಂಪು ಬಣ್ಣವನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಭಾವಿಸಲಾರರು. ಅವರು ನೀಡಿದ್ದು ಒಂದು ಉದಾಹರಣೆ. ಕೆಲವರಿಗೆ ಕೆಲವು ಬಣ್ಣಗಳು ಇಷ್ಟ. ಮತ್ತೆ ಕೆಲವರಿಗೆ ಬೇರೆ ಬೇರೆ ಬಣ್ಣಗಳು ಇಷ್ಟ. ಅಷ್ಟಲ್ಲದೆ ಬಟ್ಟೆಯ ಅಂಗಡಿಗೆ ಹೋದಾಗ ಕಾಣುವ ಬಣ್ಣ ವೈವಿಧ್ಯತೆ ಸಾಧ್ಯವಾಗುತ್ತಿತ್ತೇ? ಸೀರೆಯ ಅಂಗಡಿಗೆ ಹೋದರೆ ತಲೆ ತಿರುಗಿ ಬೀಳುವಂತಾಗುತ್ತದೆ. ಅಲ್ಲಿ ಒಂದು ಕೆಂಪು ಬಣ್ಣ ಇಲ್ಲ. ಆ ಕೆಂಪಿನಲ್ಲೇ ನೂರಾರು ಛಾಯೆಗಳು! ಇಷ್ಟಾದರೂ ಇನ್ನೂ ಸಾಕಷ್ಟು ವರೈಟಿ ಇಲ್ಲ ಎನ್ನುವ ಹೆಣ್ಣುಮಕ್ಕಳು! ಅಂದರೆ ಅವರ ಮನಸ್ಸಿನಲ್ಲಿರುವ ಕೆಂಪಿನ ಛಾಯೆಯೇ ಬೇರೆ. ಯಾಕೆ ಎಲ್ಲರಿಗೂ ಒಂದೇ ಬಣ್ಣ ಇಷ್ಟವಾಗುವುದಿಲ್ಲ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಬಣ್ಣ ಇಷ್ಟವಾಗುವುದು ಏಕೆ? ಇನ್ನೊಂದು ವಿಷಯವನ್ನು ಗಮನಿಸಿದ್ದೀರಾ? ನಮ್ಮ ನಮ್ಮ ಬದುಕಿನಲ್ಲೇ ಬಾಲ್ಯದಲ್ಲಿ ಅತಿಯಾಗಿ ಪ್ರೀತಿಸಿದ್ದ ಬಣ್ಣ ತಾರುಣ್ಯದಲ್ಲಿ ಬದಲಾಗಿದೆ, ವಯಸ್ಸು ಮಾಗಿದ ಮೇಲೆ ತಾರುಣ್ಯದಲ್ಲಿ ಸೊಗಸಿದ್ದ ಬಣ್ಣ ಈಗ ಹಿತ ನೀಡುವುದಿಲ್ಲ. ಹಿರಿಯರು ಮಾತನಾಡಿದ್ದನ್ನು ಕೇಳಿಲ್ಲವೇ? ‘ನಮ್ಮ ವಯಸ್ಸಿಗೆ ಈ ಬಣ್ಣ ಸರಿಯಲ್ಲ. ಅದೆಲ್ಲ ನಿಮ್ಮಂತಹ ಹುಡುಗರಿಗೆ’. ಅಂದರೆ ಬಣ್ಣದ ಇಷ್ಟಾನಿಷ್ಟಗಳು ವ್ಯಕ್ತಿ-ವ್ಯಕ್ತಿಗಳಿಂದ ಬದಲಾಗುವುದಲ್ಲದೇ ವ್ಯಕ್ತಿಯ ಬದುಕಿನ ವಿವಿಧ ಹಂತಗಳಲ್ಲೂ ಬದಲಾಗುತ್ತವೆ ಎಂದ ಹಾಗಾಯಿತು. ಹಾಗಾದರೆ ನಮ್ಮ ಇಷ್ಟ ಯಾವುದರ ಮೇಲೆ ಅವಲಂಬಿತವಾಗಿದೆ? ಮನುಷ್ಯ ಹೃದಯದಲ್ಲಿ ಸಂತೋಷವನ್ನುಂಟು ಮಾಡುವುದು ವಸ್ತುವಿನ ಸೌಂದರ್ಯ. ಈ ಸೌಂದರ್ಯದ ಮೂಲ ಯಾವುದು? ಇದನ್ನು ಸ್ಥಾಪಿಸುವಂತೆ ಒಂದು ಇಂಗ್ಲೀಷ್ ಮಾತಿದೆ. ‘Beauty is in the eye of the beholder’ ‌‘ನೋಡುವವನ ಕಣ್ಣಿನಲ್ಲಿ ಸೌಂದರ್ಯವಿದೆ’. ಹಾಗೆಂದರೆ ಏನಾಯಿತು? ಸೌಂದರ್ಯ ವಸ್ತುವಿನಲ್ಲಿಲ್ಲ, ಅದು ನೋಡುವವನ ದೃಷ್ಟಿಯಲ್ಲಿದೆ. ಮತ್ತೊಬ್ಬರ ಹಾಕಿಕೊಂಡ ಬಟ್ಟೆಯನ್ನು ಕಂಡು ನೀವು, ‘ಅಯ್ಯೋ ಅದೇನು ಬಣ್ಣ ಎಂದು ಆರಿಸಿದ್ದಾರೋ, ಕಣ್ಣಿಗೆ ರಾಚುತ್ತಿದೆ’ ಎಂದಿಲ್ಲವೇ? ಅವರಿಗೆ ಅದು ಸುಂದರವೆನ್ನಿಸದಿದ್ದರೆ ಅವರೇಕೆ ಅದನ್ನು ಆರಿಸುತ್ತಿದ್ದರು? ಕಂಪನಿಯವರು ಆ ಬಣ್ಣದ ಬಟ್ಟೆಯನ್ನು ಏಕೆ ಸಿದ್ಧಪಡಿಸುತ್ತಿದ್ದರು?

ನಮ್ಮ ನಮ್ಮ ಮನಸ್ಸುಗಳೇ ನಮ್ಮ ಆಯ್ಕೆಗಳಿಗೆ ಕಾರಣ. ಇದು ಕೇವಲ ಬಣ್ಣಗಳಿಗೆ ಮಾತ್ರ ಸೀಮಿತವಾದದ್ದಲ್ಲ. ನಮ್ಮ ಚಿಂತನೆಗಳಿಗೆ, ಪ್ರತಿಕ್ರಿಯೆಗಳಿಗೆ, ಕಾರ್ಯಗಳಿಗೆ, ಜೀವನ ಪದ್ಧತಿಗೆ ಮತ್ತು ಪರಸ್ಪರ ವ್ಯಕ್ತಿಗತ ಸಂಬಂಧಗಳಿಗೂ ಈ ಮನಸ್ಸೇ ನಿರ್ಣಾಯಕವಾದದ್ದು. ಅದಕ್ಕೇ ಅದನ್ನು ಆಗಾಗ ಶುದ್ಧಗೊಳಿಸುತ್ತಿರುವುದು ನಮ್ಮ ಬದುಕಿಗೆ ಅಗತ್ಯವಾದದ್ದು, ಅನಿವಾರ್ಯವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT