ಬುಧವಾರ, ನವೆಂಬರ್ 20, 2019
27 °C
ಬಣ್ಣ ಹಚ್ಚಿದ ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಅಜಯ್ ಕುಮಾರ್ ಸಿಂಗ್

'ಬೇರು ಮರಳಿ ಬಂದಾಗ' ಸ್ಯಾಂಡಲ್ ವುಡ್ ನ ಕೃಷಿ ಪ್ರಧಾನ ಚಿತ್ರ

Published:
Updated:
Prajavani

ಬರುಡು ನೆಲದಲ್ಲಿ ಬಂಗಾರದ ಬೆಳೆ ತೆಗೆಯುವ ಪದವೀಧರನೊಬ್ಬ ಪ್ರಗತಿಪರ ಕೃಷಿಕನಾಗುವ ಸಾಧಾರಣ ಕಥೆ ಹೊಂದಿದ್ದ ‘ಬಂಗಾರದ ಮನುಷ್ಯ’ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ನಿರ್ಮಿಸಿದ ಸಿನಿಮಾ. ಕೃಷಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಬಂದ ಸಿನಿಮಾಗಳಲ್ಲಿಯೇ ಇದು ಭಿನ್ನವಾಗಿ ನಿಲ್ಲುವ ಚಿತ್ರ. ಸಿದ್ದಲಿಂಗಯ್ಯನವರು ನಿರ್ದೇಶಿಸಿದ ಈ ಚಿತ್ರ ನೋಡಿ ಎಷ್ಟೋ ಪದವೀಧರರು ಹಳ್ಳಿಗೆ ಹಿಂದಿರುಗಿ ಕೃಷಿಯಲ್ಲಿ ತೊಡಗಿದ್ದು ಇತಿಹಾಸ. ಅಷ್ಟರ ಮಟ್ಟಿಗೆ ಈ ಸಿನಿಮಾ ಪ್ರಭಾವ ಬೀರಿತ್ತು. ಅದಾದ ನಂತರ ಕೃಷಿ ಪ್ರಧಾನ ಚಿತ್ರಗಳು ಬಂದಿದ್ದು, ಬಂದರೂ ಯಶಸ್ವಿಯಾಗಿದ್ದು ಕಡಿಮೆ. 

ಎಷ್ಟೋ ವರ್ಷಗಳ ನಂತರ ಕೃಷಿ ಪ್ರಧಾನ ಚಿತ್ರ ‘ಬೇರು ಮರಳಿ ಬಂದಾಗ’ ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೆ ಸೆಟ್ಟೇರಿದೆ. ಚಿತ್ರದ ಹೆಸರೇ ಹೇಳುವಂತೆ ಇದು ಸಾಂಪ್ರದಾಯಿಕ ಮತ್ತು ಹೊಸ ಕೃಷಿ ಪದ್ಧತಿ ಸುತ್ತ ಹೆಣೆದ ಕತೆ.  

ಕವಿ, ಸಾಹಿತಿ ಮತ್ತು ಲೇಖಕರಾಗಿ ಗುರುತಿಸಿಕೊಂಡಿರುವ ನಿವೃತ್ತ ಡಿಜಿಪಿ ಅಜಯ್‌ ಕುಮಾರ್‌ ಸಿಂಗ್‌ ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರದೇ ಪ್ರಮುಖ ಪಾತ್ರ. ಅಜಯ್ ಕುಮಾರ್‌ ಸಿಂಗ್‌ ಮತ್ತು ನಟಿ ನಾಗಶ್ರೀ ರಾಮಮೂರ್ತಿ ಅವರು ತಂದೆ, ಮಗಳ ಪಾತ್ರದಲ್ಲಿ ನಟಿಸಿದ್ದಾರೆ. 

ಬೆಂಗಳೂರಿನ ನಾಗಶ್ರೀ ಎಂಜಿನಿಯರಿಂಗ್‌ ಪದವೀಧರೆ. ಅಮೆಜಾನ್‌ ಸಂಸ್ಥೆಯ ಉದ್ಯೋಗಿ. ಅಭಿನಯ, ಮಾಡೆಲಿಂಗ್‌ ಅವರ ನೆಚ್ಚಿನ ಹವ್ಯಾಸ. ರಿಲಯನ್ಸ್‌ ಜುವೆಲ್ಸ್‌ ಮಿಸ್‌ ಸೌತ್‌ ಇಂಡಿಯಾ–2017 ಸ್ಪರ್ಧೆಯ ವಿಜೇತೆ. ಆಕಾಶವಾಣಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಆ್ಯಂಕರಿಂಗ್‌ ಮಾಡುತ್ತಿದ್ದಾರೆ. ಅಲೆನ್‌ ಸೋಲಿ, ಟೈಟಾನ್, ಡೇನಿಯಲ್‌ ವೆಲ್ಲಿಂಗ್ಟನ್‌, ವೆರೊ ಮೊಡಾ ಬ್ರ್ಯಾಂಡ್‌ಗಳ ಜತೆ ಕೆಲಸ ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್‌ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು.     

ಆಕೃತಿ ವರ್ಲ್ಡ್ಸ್‌ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ ಚಿತ್ರದ ಪಾತ್ರವರ್ಗ, ಚಿತ್ರಕತೆ, ನಿರ್ಮಾಣ, ನಿರ್ದೇಶನ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಹೊಸ ತಂಡವಿದೆ. ಅಶೋಕ್‌ ಕತೆಗೆ ದಯಾನಂದ ಸ್ವಾಮಿ ನಿರ್ದೇಶನವಿದೆ. ನಗರದ ಪಂಚಮುಖಿ ಗಣೇಶ ಮತ್ತು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ಆಕೃತಿ ಅಗ್ರೊ ಟೆಕ್‌ ಸಿಇಒ ಕ್ಲಾಪ್‌ ಮಾಡಿದರು. ಮೊದಲ ಬಾರಿಗೆ ಅಜಯ್‌ ಕುಮಾರ್ ಸಿಂಗ್‌ ಮತ್ತು ನಾಗಶ್ರೀ ಕ್ಯಾಮೆರಾ ಎದುರಿಸಿದರು.

ಬೇಸಾಯದ ಕಷ್ಟ ಕಾರ್ಪಣ್ಯಗಳು, ಕೃಷಿಯಲ್ಲಾದ ಹೊಸ ತಾಂತ್ರಿಕ ಬೆಳವಣಿಗೆಗಳು, ಮಹಿಳೆಯರ ಪಾತ್ರ, ಕೃಷಿಯ ವಾಣಿಜ್ಯ ಮುಖಗಳನ್ನು ನಗರವಾಸಿಗಳಿಗೆ ಮತ್ತು ಕೃಷಿಕರಿಗೆ ತಿಳಿಸುವ ಉದ್ದೇಶ ಈ ಚಿತ್ರತಂಡಕ್ಕಿದೆ. ತುಮಕೂರು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣಕ್ಕಾಗಿ ತಂಡ ವಿದೇಶಕ್ಕೂ ಹಾರುವ ಯೋಚನೆಯಲ್ಲಿದೆ. ಎಲ್ಲವೂ ಚಿತ್ರತಂಡ ಅಂದುಕೊಂಡಂತೆ ನಡೆದರೆ ಮುಂದಿನ ಏಪ್ರಿಲ್‌ ವೇಳೆಗೆ ‘ಬೇರು ಮರಳಿ ಬಂದಾಗ’ ಬೆಳ್ಳಿ ತೆರೆಯಲ್ಲಿ ಮೂಡಲಿದೆ.

ಪ್ರತಿಕ್ರಿಯಿಸಿ (+)