ಒಳ್ಳೆಯ ಆಶಯದ ನೀರಸ ಸಿನಿಮಾ

7

ಒಳ್ಳೆಯ ಆಶಯದ ನೀರಸ ಸಿನಿಮಾ

Published:
Updated:
Prajavani

ನಿಸರ್ಗ ನಿಯಮಕ್ಕೆ ವಿರುದ್ಧವಾದ ಲೈಂಗಿಕ ಸಂಬಂಧ ಶಿಕ್ಷಾರ್ಹ ಎಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ಹೇಳಿದ್ದು, ಇದನ್ನು ಆಧರಿಸಿ ಸಲಿಂಗ ಪ್ರೇಮಿಗಳು ತಮ್ಮ ದೈಹಿಕ ಇಷ್ಟವನ್ನು ಬಹಿರಂಗವಾಗಿ ಹೇಳಿಕೊಳ್ಳದಂತೆ ಮಾಡಿದ್ದು, ನಂತರ ಸುಪ್ರೀಂ ಕೋರ್ಟ್‌ ಸಲಿಂಗ ಪ್ರೇಮವನ್ನು ಕಾನೂನು ಬದ್ಧಗೊಳಿಸಿದ್ದು... ಇವೆಲ್ಲ ಈಗ ಸಾರ್ವಜನಿಕರ ಅವಗಾಹನೆಗೆ ಲಭ್ಯವಿರುವ ಸಂಗತಿಗಳು.

ಸಲಿಂಗ ಸಂಬಂಧ ಕಾನೂನು ಸಮ್ಮತ ಎಂಬುದು ಸ್ಪಷ್ಟವಾದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಮಾಜ ಸಿದ್ಧವಿಲ್ಲದಿರುವುದು ‘ಬೆಸ್ಟ್‌ ಫ್ರೆಂಡ್ಸ್’ ಸಿನಿಮಾದ ಕಥಾವಸ್ತು.

ಕೆಲವು ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ಕಥೆ ಹೆಣೆಯಲಾಗಿದೆ ಎಂಬುದು ಸಿನಿಮಾ ತಂಡದ ಹೇಳಿಕೆ. ಸೃಷ್ಟಿ ಮತ್ತು ಆಕರ್ಷಿಣಿ ಒಂದೇ ಕಾಲೇಜಿನಲ್ಲಿ ಓದುವ ಸ್ನೇಹಿತೆಯರು. ಇಬ್ಬರೂ ಇರುವುದು ಒಂದೇ ಹಾಸ್ಟೆಲ್‌ನಲ್ಲಿ.

ಇಬ್ಬರು ಹೆಣ್ಣುಮಕ್ಕಳ ನಡುವೆ ಪ್ರೇಮ ಚಿಗುರುತ್ತದೆ. ಈ ರೀತಿಯ ಪ್ರೇಮವನ್ನು ಸಮಾಜ ಒಪ್ಪುವುದಿಲ್ಲ ಎಂಬುದು ಗೊತ್ತಿದ್ದರೂ, ಸೃಷ್ಟಿ ಮತ್ತು ಆಕರ್ಷಿಣಿ ಅವರಲ್ಲಿ ದೊಡ್ಡ ಅಳುಕೇನೂ ಇರುವುದಿಲ್ಲ. ‘ನಮ್ಮ ದೇಹ, ನಮ್ಮ ಇಷ್ಟ’ ಎಂಬ ಧೋರಣೆ ಅವರಲ್ಲಿ ಇರುತ್ತದೆ. ಹೆಣ್ಣು – ಹೆಣ್ಣಿನ ನಡುವಣ ಪ್ರೇಮವನ್ನು ಚಿತ್ರದ ಕಥೆಯ ವ್ಯಾಪ್ತಿಗೆ ತಂದಿದ್ದು ತುಸು ಧೈರ್ಯದ ನಡೆ ಎಂದೇ ಹೇಳಬೇಕು.

ಇವರ ಪ್ರೇಮ ಸುತ್ತಲಿನ ಎಲ್ಲರಿಗೂ ಗೊತ್ತಾದ ನಂತರ, ತೊಂದರೆಗಳು ಒಂದಾದ ನಂತರ ಒಂದರಂತೆ ಎದುರಾಗುತ್ತವೆ. ಮುಂದಿನದು ಸಿನಿಮಾ ಕಥೆಯ ಒಳತಿರುಳು.

ಸಲಿಂಗ ಪ್ರೇಮ ಎಂಬುದು ತೀರಾ ಸಹಜವಾಗಿರುವಂಥದ್ದು ಎಂಬುದನ್ನು ವೀಕ್ಷಕರಿಗೆ ತಿಳಿಸಲು ನಿರ್ದೇಶಕರು ಯತ್ನಿಸಿರುವಂತೆ ಅನಿಸುತ್ತದೆಯಾದರೂ, ಅವರ ಯತ್ನಕ್ಕೆ ಯಶಸ್ಸು ಸಿಕ್ಕಂತೆ ಕಾಣುವುದಿಲ್ಲ. ಸಂಭಾಷಣೆ ಹಾಗೂ ಬಿಡಿ ದೃಶ್ಯಗಳ ಜೋಡಣೆಯಲ್ಲಿ ಬಿಗಿ ಇಲ್ಲದಿರುವುದು ನಿರ್ದೇಶಕರ ಆಶಯವನ್ನು ಸೋಲಿಸಿವೆ.

ಸಿನಿಮಾ ಚಿತ್ರೀಕರಣ ನಡೆದಿರುವುದು ಮಲೆನಾಡು ಪ್ರದೇಶದಲ್ಲಿಯಾದರೂ, ಅಲ್ಲಿನ ಸುಂದರ ದೃಶ್ಯಗಳನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯಲು ಹೆಚ್ಚಿನ ಆಸ್ಥೆ ವಹಿಸಿದಂತಿಲ್ಲ. ಒಳ್ಳೆಯ ಆಶಯ ಇಟ್ಟುಕೊಂಡು ಮಾಡಿದ ನೀರಸ ಸಿನಿಮಾ ಇದು ಎನ್ನಲು ಅಡ್ಡಿಯಿಲ್ಲ.

==

ಸಿನಿಮಾ: ಬೆಸ್ಟ್‌ ಫ್ರೆಂಡ್ಸ್‌

ನಿರ್ಮಾಣ: ಎಸ್. ವೆಂಕಟೇಶ್

ತಾರಾಗಣ: ದ್ರವ್ಯಾ ಶೆಟ್ಟಿ, ಮೇಘನಾ, ಸುಮತಿ ಪಾಟೀಲ್

ನಿರ್ದೇಶನ: ಟೆಶಿ ವೆಂಕಟೇಶ್

ಸಂಗೀತ: ಆರವ್ ರಿಷಿಕ್

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !