ಬುಧವಾರ, ಆಗಸ್ಟ್ 21, 2019
28 °C

ಬಾಲ್ಯವಿವಾಹದ ವಿರುದ್ಧ ‘ಭಾಗ್ಯಶ್ರೀ’

Published:
Updated:
Prajavani

ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಹಾಗೂ ಹೆಣ್ಣುಮಕ್ಕಳ ಶೋಷಣೆಯ ಕಥಾವಸ್ತು ಇರುವ ಚಿತ್ರ ‘ಭಾಗ್ಯಶ್ರೀ’. ಇದರ ನಿರ್ದೇಶನಕ್ಕೆ ಮುಂದಾಗಿದ್ದಾರೆ ಎಸ್. ಮಲ್ಲೇಶ್.

ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿತಂಡ ಸುದ್ದಿಗೋಷ್ಠಿ ಕರೆದಿತ್ತು. ಇದು ಮಲ್ಲೇಶ್ ಅವರೇ ಈ ಹಿಂದೆ ಬರೆದಿದ್ದ ‘ಭಾಗ್ಯ’ ಎನ್ನುವ ಕಿರು ಕಾದಂಬರಿ ಆಧರಿಸಿದ ಚಿತ್ರ. ‘ಬಡವರ ಮನೆಯಲ್ಲಿ ಜನಿಸುವ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ, ಬಾಲ್ಯವಿವಾಹ ಪಿಡುಗಿನ ಕಾರಣದಿಂದಾಗಿ ಅವರು ಎದುರಿಸುವ ಸಂಕಷ್ಟವನ್ನು ಇದರಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ’ ಎಂದು ಸಿನಿತಂಡ ಹೇಳಿಕೊಂಡಿದೆ.

ಶೋಷಣೆಯ ವಿರುದ್ಧ ಮಕ್ಕಳೇ ಹೋರಾಟ ನಡೆಸಿ, ಎಲ್ಲರಿಗೂ ಬುದ್ಧಿ ಕಲಿಸುವ ಸನ್ನಿವೇಶಗಳು ಕೂಡ ಈ ಚಿತ್ರದ ಭಾಗವಾಗಿರಲಿವೆ.

‘ಈ ಕಥೆಯ ಹಿಂದೆ ಎಂಟರಿಂದ ಹತ್ತು ವರ್ಷಗಳ ಶ್ರಮ ಇದೆ. ನಾನೇ ಬರೆದ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತರುತ್ತಿದ್ದೇನೆ’ ಎಂದರು ಮಲ್ಲೇಶ್. ಸಿನಿಮಾ ಚಿತ್ರೀಕರಣವು ಕಿತ್ತೂರು, ಬಾಗಲಕೋಟೆ ಜಿಲ್ಲೆಯ ಬಿಳಗಿ ಮತ್ತು ಬೆಂಗಳೂರಿನಲ್ಲಿ ನಡೆದಿದೆ.

ಚಿತ್ರಕ್ಕೆ ಸಂಗೀತ ನೀಡಿರುವವರು ಕಾರ್ತಿಕ್ ವೆಂಕಟೇಶ್. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎರಡು ಹಾಡುಗಳಿಗೆ ಸಾಹಿತ್ಯ ಒದಗಿಸಿರುವವರು ಸಾಹಿತಿ ದೊಡ್ಡರಂಗೇಗೌಡ.

‘ಬಾಲ್ಯವಿವಾಹದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಅಪಾರ ಪ್ರಮಾಣದ ಮಾಹಿತಿಯನ್ನು ಮಲ್ಲೇಶ್ ಸಂಗ್ರಹಿಸಿದ್ದರು. ಅದನ್ನು ಒಮ್ಮೆ ನನ್ನ ಬಳಿ ತಂದಿದ್ದರು. ಇಷ್ಟೆಲ್ಲ ಮಾಹಿತಿ ಇಟ್ಟುಕೊಂಡು ಒಂದು ಕಾದಂಬರಿ ಬರೆಯಿರಿ ಎಂದು ನಾನು ಅವರಿಗೆ ಹೇಳಿದ್ದೆ. ಅದರ ಪರಿಣಾಮವಾಗಿ ಈ ಕಾದಂಬರಿ ರೂಪುಗೊಂಡಿತು’ ಎಂದರು ದೊಡ್ಡರಂಗೇಗೌಡ.

ಬಾಲ್ಯವಿವಾಹದ ವಿರುದ್ಧ ಹೋರಾಟ ನಡೆಸುವ ದಿಟ್ಟ ಹೆಣ್ಣುಮಗಳ ಪಾತ್ರವನ್ನು ಬೇಬಿ ಹೀರಾ ನಿಭಾಯಿಸಿದ್ದಾರೆ. ‘ಖುಷಿಯಿಂದ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವು ನಾಡಿನ ಪ್ರತಿ ಗಲ್ಲಿಯನ್ನೂ ತಲುಪಬೇಕು ಎಂಬುದು ನನ್ನ ಆಸೆ’ ಎಂದರು ಹೀರಾ.

‘ನನ್ನ ಅಪ್ಪ ನನಗೆ ಓದಲು ಅವಕಾಶ ಕೊಡದೆ, ಮದುವೆ ಮಾಡಲು ಮುಂದಾಗುತ್ತಾನೆ. ಮುಂದೆ ಏನಾಗುತ್ತದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಿರಿ’ ಎಂದರು ಏಳನೆಯ ತರಗತಿಯಲ್ಲಿ ಓದುತ್ತಿರುವ ಹೀರಾ.

Post Comments (+)