ಭಾನುವಾರ, ಡಿಸೆಂಬರ್ 8, 2019
19 °C

ಇದು ಬಯಸದೇ ಬಂದ ಭಾಗ್ಯ!

Published:
Updated:
Deccan Herald

ಐವತ್ತು ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಭಾರ್ಗವ ಅವರಿಗೆ ಕರ್ನಾಟಕ ಸರ್ಕಾರ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಜತೆಗೆ ನಡೆಸಿದ ಚುಟುಕು ಮಾತುಕತೆ ಇಲ್ಲಿದೆ.

* ಈ ಸಂದರ್ಭದಲ್ಲಿ ವೃತ್ತಿಬದುಕನ್ನೊಮ್ಮೆ ಹೊರಳಿ ನೋಡಿದರೆ ಏನನಿಸುತ್ತದೆ?

ನನಗೆ ಈ ಪ್ರಶಸ್ತಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾನು ಯಾವ ಪ್ರಶಸ್ತಿಗಳೂ ಬರಲಿ ಎಂದು ಆಸೆಪಟ್ಟವನಲ್ಲ. ಬಯಸದೆಯೇ ನನ್ನ ಬದುಕಿನಲ್ಲಿ ಎಲ್ಲವೂ ಬಂದಿದೆ. ಯಾವುದಕ್ಕೂ ಲಾಬಿ ಮಾಡಿದವನಲ್ಲ. ಸಹಾಯಕ ನಿರ್ದೇಶಕನಾಗಿರುವಾಗಿನಿಂದ ಹಿಡಿದೂ ಇಂದಿನವರೆಗೂ ನಾನು ಯಾವತ್ತೂ ಯಾರ ಬಳಿಯೂ ಕೆಲಸ ಕೇಳಿಲ್ಲ. ಕೆಲಸಗಳೇ ನನ್ನನ್ನು ಅರಸಿಕೊಂಡು ಬಂದಿವೆ. ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ. ರಾಜ್ಯ ನಾವು ಮಾಡಿರುವ ಕೆಲಸವನ್ನು ಗಣನೆಗೆ ತೆಗೆದುಕೊಂಡು ಗೌರವಿಸುತ್ತಿದೆಯಲ್ಲ. ಇದುವರೆಗೂ ಅವರಿಗೆ ಕೊಟ್ಟಿದೆ, ಇವರಿಗೆ ಕೊಟ್ಟಿದೆ, ನನಗೆ ಕೊಟ್ಟಿಲ್ಲವಲ್ಲ ಎಂದು ಕೊಂಚ ದುಗುಡ ಇತ್ತು. ಇಂದು ಅದೂ ಹೊರಹೋಯ್ತು.

* ಈ ಸಮಯದಲ್ಲಿ ಮುಖ್ಯವಾಗಿ ಯಾರನ್ನು ನೆನೆಸಿಕೊಳ್ಳುತ್ತೀರಿ?

ಇಂದು ನಾನು ಏನಾಗಿದ್ದೇನೋ ಅದಕ್ಕೆ ಮುಖ್ಯ ಕಾರಣಕರ್ತರು ಹುಣಸೂರು ಕೃಷ್ಣಮೂರ್ತಿಗಳು. ಅವರೇ ನನಗೆ ಮೊದಲು ಓದಿಸಿ ನಂತರ ಮದುವೆ ಮಾಡಿಸಿ, ಸಿನಿಮಾಕ್ಷೇತ್ರದಲ್ಲಿ ಅಡಿಪಾಯ ಹಾಕಿಕೊಟ್ಟ ಗುರುಗಳು. ನಂತರ ಸಿದ್ಧಲಿಂಗಯ್ಯ ಅವರ ಜತೆ ಏಳು ಸಿನಿಮಾ ಕೆಲಸ ಮಾಡಿದೆ. ಇದುವರೆಗೂ ಐವರು ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ. ವಿಜಯಾರೆಡ್ಡಿ, ಹುಣಸೂರು, ಗೀತಪ್ರಿಯ, ಕೆ.ಎಸ್.ಆರ್. ದಾಸ್ ಅವರ ಬಳಿಯಲ್ಲಿಯೂ ಸಾಕಷ್ಟು ಕಲಿತಿದ್ದೇನೆ. ಹಾಗೆಯೇ ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಮುಖ್ಯವಾಗಿ ನೆನಪಿಸಿಕೊಳ್ಳುತ್ತೇನೆ.

* ನಿಮ್ಮ ಸಿನಿಮಾಗಳಲ್ಲಿ ನಿಮಗೆ ಅತ್ಯಂತ ಇಷ್ಟವಾದ ಸಿನಿಮಾಗಳು ಯಾವವು?

ಐವತ್ತೂ ಸಿನಿಮಾ ನನ್ನ ಸಿನಿಮಾಗಳೇ. ಆದ್ದರಿಂದ ಯಾವುದು ಚೆನ್ನಾಗಿದೆ ಯಾವುದು ಚೆನ್ನಾಗಿದೆ ಎಂದು ಹೇಳುವುದು ಕಷ್ಟ. ಚೆನ್ನಾಗಿ ಓಡದೇ ಇರುವುದೂ ನನ್ನ ಪಾಲಿಗೆ ಬಂದಿರುವುದೇ. ಯಾಕೆಂದರೆ ಎಲ್ಲ ಸಿನಿಮಾಗಳನ್ನೂ ಚೆನ್ನಾಗಿ ಓಡಲಿ ಎಂದೇ ಮಾಡ್ತೀವಿ. ಆದರೆ ಅದನ್ನು ನಿರ್ಧರಿಸುವುದು ಜನರು. ನನ್ನ ಐವತ್ತು ಸಿನಿಮಾಗಳಲ್ಲಿ 49 ಕನ್ನಡ ಸಿನಿಮಾಗಳು. ಒಂದು ತೆಲುಗು ಸಿನಿಮಾ.

* ಈಗಲೂ ಸಿನಿಮಾ ನಿರ್ದೇಶನ ಮಾಡುವ ಉತ್ಸಾಹ ಇದೆಯಾ?

ಯಾವುದನ್ನೂ ನಾನು ಯೋಚಿಸುವುದಕ್ಕೇ ಹೋಗುವುದಿಲ್ಲ. ಪಾಲಿಗೆ ಬಂದಿದ್ದನ್ನು ತೆಗೆದುಕೊಳ್ಳುವುದು. ಬಂದಿಲ್ಲ ಎಂದರೆ ಯೋಚನೆ ಇಲ್ಲ. ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ಸಾಕಿದೆ. ನೆಮ್ಮದಿಯ ಬದುಕನ್ನು ಕೊಟ್ಟಿದೆ. ಸುಖವಾದ ಸಂಸಾರ ಕೊಟ್ಟಿದೆ. ಹಾಗಾಗಿ ಚಿತ್ರರಂಗವನ್ನು ಇನ್ನೂ ಕೊಡು ಕೊಡು ಎಂದು ಕೇಳುವುದು ಚೆನ್ನಾಗಿರುವುದಿಲ್ಲ. ಕೊಟ್ಟರೆ ಬೊಗಸೆಯಿಂದ ತೆಗೆದುಕೊಳ್ಳುತ್ತೀನಿ. ಬರಲಿಲ್ಲವೆಂದರೂ ಬೇಸರ ಇಲ್ಲ.

* ಇಂದಿನ ಹೊಸ ಪೀಳಿಗೆಯ ಸಿನಿಮಾರಂಗಕ್ಕೆ ಏನು ಹೇಳಲು ಬಯಸುತ್ತೀರಿ?

ಇಂದೂ ಒಳ್ಳೆಯ ಚಿತ್ರಗಳು ಬರುತ್ತಲೇ ಇವೆ. ನಾವು ಮಾಡಿದ್ದರಲ್ಲಿಯೂ ಸೋಲು ಗೆಲುವು ಇದ್ದೇ ಇತ್ತು; ಈಗಲೂ ಇವೆ. ಇಂದು ನಿರ್ಮಾಣ ವೆಚ್ಚ ಜಾಸ್ತಿ ಆಗಿದೆ. ಹಾಗಿದ್ದರೂ ಕಮ್ಮಿ ಕರ್ಚಿನಲ್ಲಿ ಬಂದಿರುವ ಸಿನಿಮಾಗಳೂ ಮಿಂಚುತ್ತಿವೆ. ಹೊಸದೇನಾದ್ರೂ ಹೇಳಿದ್ರೆ ಚೆನ್ನಾಗಿರುತ್ತದೆ. ಹಾಡಿದ್ದೇ ಹಾಡೋ ಕಿಸಬಾಯಿದಾಸ ಅಂದರೆ ಜನ ನೋಡುವುದಿಲ್ಲ ಅಷ್ಟೆ.⇒v

ಪ್ರತಿಕ್ರಿಯಿಸಿ (+)