ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಲೆ ಹುಡುಗಿಗೆ ಮಾನ್ಯತೆ ಸಿಕ್ಕಿದ್ದು...

Last Updated 21 ಮಾರ್ಚ್ 2019, 19:45 IST
ಅಕ್ಷರ ಗಾತ್ರ

‘ದಿ ಶೋಲೆ ಗರ್ಲ್‌’ ಹೆಸರಿನಲ್ಲಿ ಮೂಡಿಬಂದಿರುವ ವೆಬ್‌ ಸಿನಿಮಾದಲ್ಲಿ ನಟಿಸಿರುವ ಬಿದಿತಾ ಬಾಗ್‌ ಅವರಿಗೆ ವೆಬ್‌ ಆಧಾರಿತ ತಂತ್ರಜ್ಞಾನದ ಶಕ್ತಿ ಅರಿವಿಗೆ ಬಂದಿದೆ. ‘ಡಿಜಿಟಲ್‌ ವೇದಿಕೆಗಳು ನಮಗೆ ವಿಶ್ವದ ಎಲ್ಲೆಡೆಗಳಿಂದ ಜನರ ಪ್ರೀತಿ ಮತ್ತು ಜನಮನ್ನಣೆ ತಂದುಕೊಡುತ್ತವೆ’ ಎನ್ನುತ್ತಿದ್ದಾರೆ ಬಿದಿತಾ.

ಜೀ ಸಮೂಹಕ್ಕೆ ಸೇರಿದ ‘ಜೀ5’ ಡಿಜಿಟಲ್ ವೇದಿಕೆಯು ವೆಬ್‌ಗಾಗಿಯೇ ಸಿನಿಮಾ ನಿರ್ಮಾಣ ಮಾಡುತ್ತಿದೆ. ಅಂತಹ ಸಿನಿಮಾಗಳಲ್ಲಿ ಒಂದು ‘ದಿ ಶೋಲೆ ಗರ್ಲ್’. ಇದು ಬಾಲಿವುಡ್‌ನ ಮೊದಲ ಸ್ಟಂಟ್‌ ಮಹಿಳೆ ರೇಶ್ಮಾ ಪಠಾಣ್ ಅವರ ಜೀವನಗಾಥೆ. ಇದನ್ನು ನಿರ್ದೇಶಿಸಿದ್ದು ಆದಿತ್ಯ ಸರ್ಪೋತದಾರ್‌.

‘ವೆಬ್‌ ಸಿನಿಮಾಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇದೆ. ಯಾವುದೇ ಗುಂಪುಗಳಿಗೆ ಸೇರಿರದ, ಅಭಿಮಾನಿಗಳ ‍ಪಡೆ ಹೊಂದಿರದ ಹಾಗೂ ದೊಡ್ಡ ಸ್ಟಾರ್‌ ಕೂಡ ಅಲ್ಲದ ನನ್ನಂಥವರಿಗೆ ವೆಬ್‌ ವೇದಿಕೆಗಳು ನೆರವಾಗುತ್ತವೆ. ಈಗ ನಮ್ಮನ್ನು ವಿಶ್ವದ ಎಲ್ಲೆಡೆ ಗುರುತಿಸುತ್ತಿದ್ದಾರೆ. ಈ ಸಿನಿಮಾ (ದಿ ಶೋಲೆ ಗರ್ಲ್) ಮಾಮೂಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದಿದ್ದರೆ, ಅಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರಲಿಲ್ಲ. ಆದರೆ, ಡಿಜಿಟಲ್‌ ವೇದಿಕೆಯಲ್ಲಿ ಇದು ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಬೇರೆ ಬೇರೆ ದೇಶಗಳ ಸಿನಿಮಾ ಅಭಿಮಾನಿಗಳನ್ನು ಇದು ತಲುಪಿದೆ’ ಎಂದು ಬಿದಿತಾ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಅಂದಹಾಗೆ, ಬಿದಿತಾ ಅವರು ಸಿನಿಮಾ ಪ್ರಿಯರ ಕಣ್ಣಿಗೆ ಕಂಡಿದ್ದು, ಅವರಲ್ಲಿನ ಅಭಿನಯ ಸಾಮರ್ಥ್ಯ ಗೊತ್ತಾಗಿದ್ದು ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬಾಬುಮೊಷಾಯ್ ಬಂದೂಕ್‌ಬಾಜ್‌’ ಸಿನಿಮಾ ಮೂಲಕ. ಮನರಂಜನಾ ಉದ್ದಿಮೆಯಲ್ಲಿ ಒಂದು ಹೆಸರು ಸಂಪಾದಿಸಲು ಇಂದಿಗೂ ಒದ್ದಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ ಬಿದಿತಾ.

‘ಹಲವು ಬಾರಿ ನಾನು ತಿರಸ್ಕೃತಗೊಂಡಿದ್ದೇನೆ. ಅದರ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿದ್ದೆ. ಆದರೆ, ಕೊನೆಯಲ್ಲಿ ನನ್ನ ಕೆಲಸಗಳ ಮೇಲೆ ಗಮನ ನೀಡಲು ತೀರ್ಮಾನಿಸಿದೆ. ನನಗೆ ಎದುರಾದ ತಿರಸ್ಕಾರಗಳನ್ನೆಲ್ಲ ಸಕಾರಾತ್ಮಕವಾಗಿ ತೆಗೆದುಕೊಂಡೆ. ನನ್ನಂಥ ನಟಿಯರು ಹಣಕಾಸಿನ ವಿಚಾರದಲ್ಲಿ, ವೃತ್ತಿಯ ವಿಚಾರದಲ್ಲಿ ಸಾಕಷ್ಟು ಹೆಣಗಬೇಕಾಗುತ್ತದೆ’ ಎಂದು ಸಣ್ಣ ಬೇಸರವೊಂದನ್ನು ಹೊರಹಾಕಿದ್ದಾರೆ.

‘ದಿ ಶೋಲೆ ಗರ್ಲ್‌’ ಸಿನಿಮಾದಲ್ಲಿ ನಟಿಸುವ ಮೊದಲು ಬಿದಿತಾ ಅವರಿಗೆ ರೇಶ್ಮಾ ಪಠಾಣ್ ಅವರ ಬಗ್ಗೆ ಗೊತ್ತಿರಲಿಲ್ಲವಂತೆ. ಆದರೆ, ಸಿನಿಮಾ ಕೆಲಸ ಸಾಗಿದಂತೆಲ್ಲ ಈ ಹೆಣ್ಣಿನ ಹೋರಾಟಗಳ ಬಗ್ಗೆ ಗೊತ್ತಾಯಿತಂತೆ. ಸಿನಿಮಾದಲ್ಲಿ ನಟನೆ ಚೆನ್ನಾಗಿ ಆಗಬೇಕು ಎಂಬ ಕಾರಣಕ್ಕೆ ಬಿದಿತಾ ಅವರು ರೇಶ್ಮಾ ಅವರನ್ನು ಭೇಟಿ ಮಾಡಿದ್ದರು, ಅವರ ಬಗ್ಗೆ ಪ್ರಕಟವಾಗಿದ್ದ ಲೇಖನಗಳನ್ನು ಓದಿದ್ದರು, ಅವರ ಸಂದರ್ಶನಗಳನ್ನು ವೀಕ್ಷಿಸಿದ್ದರು. 1970ರಲ್ಲಿ ಸಿನಿಮಾ ಲೋಕ ಪ್ರವೇಶಿಸಿದ ರೇಶ್ಮಾ, ಭಾರತದ ಮೊದಲ ಸ್ಟಂಟ್‌ ಕಲಾವಿದೆ ಎಂಬ ಖ್ಯಾತಿ ಹೊತ್ತಿದ್ದಾರೆ.

‘ರೇಶ್ಮಾ ಅವರ ಬಗ್ಗೆ ತಿಳಿದು ನಾನು ಮೂಕವಿಸ್ಮಿತಳಾದೆ. ಆಕೆ ಬಹಳ ಗಟ್ಟಿಗಿತ್ತಿ. ವೃತ್ತಿಯಲ್ಲಿ ಎತ್ತರಕ್ಕೆ ಏರಲು ಅವರು ಧೈರ್ಯ ಸಂಪಾದಿಸಿದ್ದು ತಾವು ಅನುಭವಿಸಿದ ಬಡತನದ ಮೂಲಕ. ಅವರು ಹಲವು ಸಿನಿಮಾಗಳಲ್ಲಿ ಸ್ಟಂಟ್‌ ಮಾಡಿದ್ದರೂ, ಶೋಲೆ ಚಿತ್ರಕ್ಕೆ ಮಾಡಿದ್ದು ಸ್ಮರಣಾರ್ಹ. ಹಾಗಾಗಿಯೇ ನಾನು ಅಭಿನಯಿಸಿದ ಚಿತ್ರಕ್ಕೆ ಆ ಹೆಸರು ಇಡಲಾಗಿದೆ’ ಎಂದು ತಮ್ಮ ಸಿನಿಮಾ ಬಗ್ಗೆ ತುಸು ಹೇಳಿಕೊಂಡರು. ಬಿದಿತಾ ಅವರು ಈಗ ‘ತೀನ್ ದೊ ಪಾಂಚ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT