ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಆಸೆ ಸಿನಿಮಾವಾದಾಗ.. ಚಿತ್ರ ನಿರ್ಮಾಣದ ಹಿಂದಿನ ಕಥೆ ತೆರೆದಿಟ್ಟ ನಿರ್ದೇಶಕರು

Last Updated 6 ಮಾರ್ಚ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾನುಭವ... ಕಂಡ ಘಟನೆಗಳು... ಕೌಟುಂಬಿಕ ಹಿನ್ನೆಲೆ ಇವು ಒಬ್ಬೊಬ್ಬ ನಿರ್ದೇಶಕರಿಗೆ ಸಿನಿಮಾ ಮಾಡಲು ಸ್ಫೂರ್ತಿ ಕೊಟ್ಟಿವೆ. 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾರ್ಚ್‌ 5ರಂದು ಪ್ರದರ್ಶನಗೊಂಡ ಕನ್ನಡ ಚಿತ್ರಗಳ ನಿರ್ದೇಶಕರು ಚಿತ್ರ ನಿರ್ಮಾಣದ ಹಿಂದಿನ ಕತೆಗಳನ್ನು ಪತ್ರಿಕಾಗೋಷ್ಠಿ ಸಹಿತ ಸಂವಾದದಲ್ಲಿ ತೆರೆದಿಟ್ಟರು.

‘ಮಗಳು ಹಾಗೂ ಅವಳ ಗೆಳತಿ ಸಿನಿಮಾ ನೋಡಲು ಹೋಗಿ ವಾಪ zಸಾಗುವಾಗ ತಡವಾದ ಘಟನೆಯೇ ‘ಸ್ಟಾಕರ್‌’ ಸಿನಿಮಾಕ್ಕೆ ಸ್ಫೂರ್ತಿಯಾಯಿತು’ ಎಂದು ನಿರ್ದೇಶಕ ಕಿಶೋರ್‌ ಭಾರ್ಗವ್‌ ಅನುಭವ ತೆರೆದಿಟ್ಟರು.

‘ಎಷ್ಟೋ ಹೆಣ್ಣುಮಕ್ಕಳು ಸ್ಟಾಕರ್‌ಗಳ ಕಾಟದ ಬಗ್ಗೆ ಹೇಳಿಕೊಳ್ಳಲಾಗದೆ ಕೆಲಸ ತೊರೆದ, ಊರು ಬಿಟ್ಟ ಘಟನೆಗಳು ನಡೆದಿವೆ. ಅವೆಲ್ಲವನ್ನೂ ಸಂಶೋಧಿಸಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಈ ಸಿನಿಮಾ ಮಾಡಿದ್ದೇನೆ. ಅಂದಹಾಗೆ ಈ ಮೂಲ ಕಲ್ಪನೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್‌ ಶಾಲೆಯ ವಿದ್ಯಾರ್ಥಿಯೊಬ್ಬರು ಹಂಚಿಕೊಂಡರು. ನಾನೇ ನಿರ್ದೇಶಿಸುವಂತೆ ಕೋರಿದರು’ ಎಂದು ನೆನಪನ್ನು ತೆರೆದಿಟ್ಟರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಜನ ತಮಗರಿವಿಲ್ಲದೇ ಹೋರಾಟದಲ್ಲಿ ತೊಡಗಿದ್ದರು. ಅವರ ಹೆಸರು ಬೆಳಕಿಗೆ ಬರಲೇ ಇಲ್ಲ. ಅಂಥ ಪಾತ್ರಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದೆ. ನನ್ನ ಬಳಿ ದೊಡ್ಡ ಬಜೆಟ್‌ ಕೂಡಾ ಇರಲಿಲ್ಲ. ಅದೇ ಈ ಸಿನಿಮಾ ನಿರ್ಮಾಣಕ್ಕೆ ಕಾರಣವಾಯಿತು’ ಎಂದರು ‘ಭುಗಿಲು’ ಸಿನಿಮಾ ನಿರ್ದೇಶಕ ಚಂದ್ರಕಾಂತ ಕೊಡಪಾಡಿ.

‘ತಾಯಿಯ ಕೊನೆಯ ಆಸೆಯಂತೆ ‘ಶ್ರೀ ಜಗನ್ನಾಥ ದಾಸರು’ ಚಿತ್ರ ನಿರ್ಮಿಸಿದೆ. ಚಿತ್ರ ಸೆಟ್ಟೇರುತ್ತಿದ್ದಂತೆಯೇ ಎಲ್ಲವೂ ಪವಾಡದಂತೆಯೇ ನಡೆದುಹೋಯಿತು. ಹಾಕಿದ ಬಂಡವಾಳವೂ ವಾಪಸ್‌ ಬಂದು ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ’ ಎಂದು ಸಂತೃಪ್ತಿ ವ್ಯಕ್ತಪಡಿಸಿದರು ನಿರ್ಮಾಪಕ ಮಧುಸೂದನ ಹವಾಲ್ದಾರ್‌.

‘ಜಗತ್ತಿನ ಸಂಕೀರ್ಣ ಸಮಸ್ಯೆಯತ್ತ ಬೆಳಕು ಚೆಲ್ಲಿದೆ ‘ಅಲೆಮಾರಿ’. ಆಧುನಿಕ ಕಾಲಘಟ್ಟದಲ್ಲಿಯೂ ಇದೇ ರೀತಿ ಅಲೆದಾಡುತ್ತಲೇ ಬದುಕಬೇಕೇ? ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಅದೆಷ್ಟೋ ಜನಾಂಗಗಳು ಹೀಗೇ ಬದುಕುತ್ತಿವೆ. ಹೆಸರು, ಊರೂ ಗೊತ್ತಿಲ್ಲದ ಜನರು ಅವರು. ಅವರ ಬದುಕಿನ ಚಿತ್ರವೇ ‘ಗಿಳಿಯು ಪಂಜರದೊಳಿಲ್ಲ’’ ಎಂದು ವಿವರಿಸಿದರು ನಿರ್ದೇಶಕ ಪಿ.ಆರ್‌. ರಾಮದಾಸ ನಾಯ್ಡು.

‘ಈ ಚಿತ್ರದಲ್ಲಿ ಗಿಳಿಶಾಸ್ತ್ರದವನನ್ನು ಮುಂದಿಟ್ಟುಕೊಂಡು ಕಥಾ ಹಂದರ ರೂಪಿಸಿದ್ದೇನೆ. ಈ ಗಿಳಿಶಾಸ್ತ್ರದವರು ಬಳಸುವ ಗಿಳಿಯ ಪ್ರಭೇದದ ಮೇಲೂ ಅವರ ಪಂಗಡವನ್ನು ಗುರುತಿಸುತ್ತಾರೆ. ಗಿಳಿಯನ್ನು ಶಾಸ್ತ್ರ ಹೇಳಲು ಬಳಸುವಂತಿಲ್ಲ. ಹಾಗೆ ಮಾಡಿದರೆ ಜೈಲು ಶಿಕ್ಷೆ ಇದೆ. ಹಾಗಿದ್ದೂ ಅವರು
ಈ ರೀತಿ ಏಕೆ ಬದುಕಬೇಕು? ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದಲ್ಲವೇ ಎಂಬುದನ್ನು ಚಿತ್ರದಲ್ಲಿ
ಹೇಳಲು ಪ್ರಯತ್ನಿಸಿದ್ದೇನೆ’ ಎಂದರು ನಾಯ್ಡು.

‘ಜಗತ್ತಿನಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಮ್ಮ ವ್ಯವಸ್ಥೆ ಅದನ್ನು ನಿರ್ಲಕ್ಷಿಸುತ್ತಲೇ ಇದೆ. ಇದು ಒಂದಿಡೀ ತಲೆಮಾರಿನ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್‌ ಕಾಲದಲ್ಲಂತೂ ಈ ಸಮಸ್ಯೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು. ಆದ್ದರಿಂದ ಈ ಸಂಕೀರ್ಣ ವಿಷಯದ ಮೇಲೆ ಬೆಳಕು ಚೆಲ್ಲುವ ಸಿನಿಮಾವೇ ‘ನಮ್ಮ ಚಿಲ್ಡ್ರನ್ಸ್‌ ಇಂಡಿಯಾ ಡಾಟ್‌ ಕಾಂ’ ಎಂದು ನಿರ್ದೇಶಕ ನಂಜುಂಡೇಗೌಡ ಎನ್‌.ಆರ್‌. ಅನುಭವ ಬಿಚ್ಚಿಟ್ಟರು.

ಚಿತ್ರೋತ್ಸವದಲ್ಲಿ ಇಂದು

lಒರಾಯನ್‌ ಮಾಲ್‌: ತೆರೆ ಸಂಖ್ಯೆ 4ರಲ್ಲಿ ಕನ್ನಡ ಚಿತ್ರಗಳು: ಬೆಳಿಗ್ಗೆ 10ಕ್ಕೆ ಮುನ್ನುಡಿ, ಮಧ್ಯಾಹ್ನ 1ಕ್ಕೆ ಕೇಕ್‌, 3.15ಕ್ಕೆ ಗವಿಸಿದ್ಧ 6.30ಕ್ಕೆ ಮಾನ

lತೆರೆ ಸಂಖ್ಯೆ 5ರಿಂದ 10: ವಿಶ್ವದ ವಿವಿಧ ಚಿತ್ರಗಳ ಪ್ರದರ್ಶನ

lತೆರೆ ಸಂಖ್ಯೆ 11ರ ಆಡಿಟೋರಿಯಂ: ಮಧ್ಯಾಹ್ನ 2ಕ್ಕೆ ಬಾಳೇ ಬಂಗಾರ– ಮೇಕಿಂಗ್‌ ಆಫ್‌ ಎ ಸೂಪರ್‌
ಸ್ಟಾರ್‌– ಭಾರತಿ ವಿಷ್ಣುವರ್ಧನ್‌ ಅವರೊಂದಿಗೆ ಮಾತುಕತೆ

lಸುಚಿತ್ರಾ ಅಕಾಡೆಮಿ, ಬನಶಂಕರಿ: ಬೆಳಿಗ್ಗೆ 10ಕ್ಕೆ ಜಿಹಾದ್‌ ಮಧ್ಯಾಹ್ನ 12.30ಕ್ಕೆ ರಕ್ತಗುಲಾಬಿ 3ಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಬಂಧಿಸಿದ ಚಿತ್ರ. ಸಂಜೆ 5ರಿಂದ ವಿಶ್ವ ಚಲನಚಿತ್ರ ಪ್ರದರ್ಶನ

lಡಾ.ರಾಜ್‌ಕುಮಾರ್‌ ಭವನ ಚಾಮರಾಜಪೇಟೆ – ಕನ್ನಡ ಚಿತ್ರಗಳು: ಮಧ್ಯಾಹ್ನ 1ಕ್ಕೆ ದಾರಿ ಯಾವುದಯ್ಯಾ ವೈಕುಂಠಕೆ, ಸಂಜೆ 4ಕ್ಕೆ ರತ್ನನ್‌ ಪ್ರಪಂಚ, 7ಕ್ಕೆ ರುಗ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT