ಸೋಮವಾರ, ಮಾರ್ಚ್ 8, 2021
26 °C

‘ಬಿಂದಾಸ್‌ ಗೂಗ್ಲಿ’ ಕಥೆ, ನಿರೂಪಣೆ ನೀರಸ; ಗಟ್ಟಿತನ ಮಾಯ

ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

Deccan Herald

ಚಿತ್ರ: ಬಿಂದಾಸ್‌ ಗೂಗ್ಲಿ

ನಿರ್ಮಾಣ: ವಿಜಯ್‌ ಸದಾನಂದ್‌ ಅಣ್ವೇಕರ್

ನಿರ್ದೇಶನ: ಸಂತೋಷ್‌ ಕುಮಾರ್

ತಾರಾಗಣ: ಆಕಾಶ್‌, ಧರ್ಮ ಕೀರ್ತಿರಾಜ್, ಶಿಲ್ಪಾ, ನಿಮಿಕಾ ರತ್ನಾಕರ್, ಮಮತಾ ರಾವತ್, ರಾಮಕೃಷ್ಣ, ಮುತ್ತುರಾಜ್

ಮನೆಯ ಮುಂಭಾಗ ಗೃಹಿಣಿಯೊಬ್ಬರು ರಂಗೋಲಿ ಬಿಡಿಸುತ್ತಿರುತ್ತಾರೆ. ಕಳ್ಳನೊಬ್ಬ ಬೈಸಿಕಲ್‌ ಏರಿ ಅದೇ ರಸ್ತೆಯಲ್ಲಿ ಬರುತ್ತಾನೆ. ಒಮ್ಮೆಲೆ ಆಕೆಯ ಚಿನ್ನದ ಸರ ಕಿತ್ತುಕೊಂಡು ಬೈಸಿಕಲ್‌ನಲ್ಲೇ ಪರಾರಿಯಾಗುತ್ತಾನೆ. ವಾಯುವಿಹಾರ ಮಾಡುತ್ತಿದ್ದ ನಾಯಕನಿಗೆ ಹೆಂಗಳೆಯರ ಚೀರಾಟ ಕೇಳಿಸುತ್ತದೆ. ಆತನೂ ಬೈಸಿಕಲ್‌ನಲ್ಲಿಯೇ ಕಳ್ಳನನ್ನು ಬೆನ್ನಟ್ಟುತ್ತಾನೆ. ಕಳ್ಳನಿಗೆ ಥಳಿಸಿ ಗೃಹಿಣಿಗೆ ಸರವನ್ನು ಮರಳಿಸುತ್ತಾನೆ.

ನಾಯಕನ ಪ್ರವೇಶಕ್ಕೆ ಬಿಲ್ಡಪ್‌ ನೀಡಲು ನಿರ್ದೇಶಕರು ಬಳಸಿರುವ ಈ ತಂತ್ರಗಾರಿಕೆ ನೋಡಿದ ಪ್ರೇಕ್ಷಕರು ಕ್ಷಣಕಾಲ ತಬ್ಬಿಬ್ಬುಗೊಳ್ಳುತ್ತಾರೆ. ಆಭಾಸಕ್ಕೆ ಎಡೆಮಾಡಿಕೊಡುವ ದೃಶ್ಯಗಳು ‘ಬಿಂದಾಸ್‌ ಗೂಗ್ಲಿ’ ಚಿತ್ರದಲ್ಲಿ ಸಾಕಷ್ಟಿವೆ. ಡಾನ್ಸರ್‌ ಆಗಲು ಹೊರಟ ಹುಡುಗನೊಬ್ಬನ ಕಥೆಯನ್ನು ನೋಡುಗರ ಮನಸ್ಸಿಗೆ ದಾಟಿಸುವಲ್ಲಿ ನಿರ್ದೇಶಕ ಸಂತೋಷ್‌ಕುಮಾರ್‌ ಎಡವಿದ್ದಾರೆ.

ಗುರುಕುಲ ಶಾಲೆಯಲ್ಲಿ ಶಿಕ್ಷಣದ ಹೊರತಾಗಿ ಪಠ್ಯೇತರ ಚಟುವಟಿಕೆಗಳು ಕಡಿಮೆ. ಈ ನಡುವೆಯೇ ನೃತ್ಯಪಟುಗಳಾಗಬೇಕೆಂಬುದು ಆಕಾಶ್‌ ಮತ್ತು ಅವನ ಸ್ನೇಹಿತರ ಮಹದಾಸೆ. ಆದರೆ, ಪ್ರಾಂಶುಪಾಲರಿಗೆ ಡಾನ್ಸ್‌ ಎಂದರೆ ಅಲರ್ಜಿ. ಸ್ಪರ್ಧೆಗೆ ತೆರಳುವ ಆಸೆಯಿಂದ ಸ್ನೇಹಿತರ ಗುಂಪು ನಿರ್ಮಿಸುವ ನೃತ್ಯದ ವಿಡಿಯೊ ವೈರಲ್‌ ಆಗುತ್ತದೆ. ಇದಕ್ಕೆ ಪ್ರಾಂಶುಪಾಲರು, ಪೋಷಕರಿಂದ ತೀವ್ರ ವಿರೋಧ.

ಈ ಸ್ನೇಹಿತರ ಗುಂಪನ್ನು ಬಳಸಿಕೊಂಡು ರಾಷ್ಟ್ರಮಟ್ಟದ ಡಾನ್ಸ್‌ ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬುದು ಡಾನ್ಸ್ ತರಬೇತುದಾರ ಗಗನ್‌ (ಧರ್ಮ ಕೀರ್ತಿರಾಜ್) ಗುರಿ. ಗುರುಕುಲಕ್ಕೆ ತರಬೇತುದಾರನಾಗಿ ಬರುವ ಆತ ಹಲವು ತೊಂದರೆಗೆ ಸಿಲುಕುತ್ತಾನೆ. ಸ್ನೇಹಿತರ ತಂಡ ಹೇಗೆ ಸ್ಪರ್ಧೆಯಲ್ಲಿ ಜಯಗಳಿಸುತ್ತದೆ ಎನ್ನುವ ಸುತ್ತ ಕಥೆ ಸಾಗುತ್ತದೆ.

ಮೊದಲಾರ್ಧದಲ್ಲಿ ಕಾಲೇಜಿನ ಪುಂಡ ಹುಡುಗರ ಕಿರುಕುಳ, ಇದಕ್ಕೆ ಪ್ರಾಂಶುಪಾಲರ ಆಕ್ರೋಶ... ಹೀಗೆ ಹಲವು ಚಿತ್ರಗಳಲ್ಲಿ ಬಂದು ಹಳತಾಗಿರುವ ದೃಶ್ಯಗಳೇ ತೆರೆಯ ಮೇಲೆ ಪ್ರತ್ಯಕ್ಷವಾಗಿ ಪ್ರೇಕ್ಷಕರ ತಾಳ್ಮೆಗೆ ಸವಾಲೊಡ್ಡುತ್ತವೆ. ದ್ವಿತೀಯಾರ್ಧದಲ್ಲಿಯೂ ಕಥೆಗೊಂದು ಗಟ್ಟಿತನ ಒದಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿಲ್ಲ. ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನೃತ್ಯಕ್ಕೆ ತಲೆಯಾಡಿಸಿ ಹೊಗಳುವ ತೀರ್ಪುಗಾರರು ಈ ಚಿತ್ರದಲ್ಲಿಯೂ ಕಾಣುಸಿಗುತ್ತಾರೆ. ಕೊನೆಗೆ, ಅಬ್ಬರದ ನೃತ್ಯನೊಂದಿಗೆ ಚಿತ್ರ ಮುಗಿದುಹೋಗುತ್ತದೆ. ನೀರಸ ನಿರೂಪಣೆ, ಸಂಭಾಷಣೆಯಲ್ಲಿ ಗಟ್ಟಿತನ ಇಲ್ಲದೆ ಚಿತ್ರ ಸೊರಗಿದೆ.

ಆಕಾಶ್, ಶಿಲ್ಪಾ ನಟನೆಯಲ್ಲಿ ಸಾಕಷ್ಟು ಪಳಗಬೇಕಿದೆ. ವಿನು ಮನಸು ಸಂಗೀತ ಸಂಯೋಜನೆಯ ಯಾವುದೇ ಹಾಡು ಮನಸ್ಸಿನಲ್ಲಿ ಉಳಿಯುವುದಿಲ್ಲ. ಮ್ಯಾಥ್ಯೂ ರಾಜನ್‌ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.