ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಮೊದಲ ಟ್ರಯಾಲಜಿ!

Last Updated 18 ಜನವರಿ 2019, 7:04 IST
ಅಕ್ಷರ ಗಾತ್ರ

ಕನ್ನಡದ ಮೊದಲ ಟ್ರಯಾಲಜಿ (ಮೂರು ಸಿನಿಮಾಗಳ ಸರಣಿ) ಶುಕ್ರವಾರದಿಂದ (ಜನವರಿ 18) ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ‘ಇದು ಕನ್ನಡದ ಮೊದಲ ಟ್ರಯಾಲಜಿ’ ಎಂದು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.

ಚಿತ್ರದ ನಿರ್ದೇಶನ ಹಾಗೂ ನಾಯಕನ ಪಾತ್ರ ನಿಭಾಯಿಸುವ ಹೊಣೆ ಹೊತ್ತವರು ಎಂ.ಜಿ. ಶ್ರೀನಿವಾಸ್. ಹಿಂದೆ ಕೆಲವು ರೊಮ್ಯಾಂಟಿಕ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಈ ಬಾರಿ ವಕೀಲನ ಪಾತ್ರ ಆವಾಹನೆ ಮಾಡಿಕೊಂಡಿದ್ದಾರೆ. ಬೀರಬಲ್ಲನ ಬಗ್ಗೆ ಅವರ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ‘ಬೀರಬಲ್’ ಸಿನಿಮಾ ಕಥೆ ಎನು?

ಇದು ಕನ್ನಡ ಸಿನಿಮಾ ರಂಗದ ಮೊದಲ ಟ್ರಯಾಲಜಿ. ಅಂದರೆ ಮೂರು ಭಾಗಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಮೊದಲ ಭಾಗದಲ್ಲಿ ಕ್ರೈಂ ಥ್ರಿಲ್ಲರ್ ಕಥೆ ಇದೆ. ಮೊದಲ ಭಾಗದ ಹೆಸರು ‘ಕೇಸ್ 1: ಫೈಂಡಿಂಗ್ ವಜ್ರಮುನಿ’. ಮೂರೂ ಸಿನಿಮಾಗಳ ಹೆಸರು ‘ಬೀರಬಲ್’ ಎಂದೇ ಇರಲಿದೆ. ಆದರೆ ಅವುಗಳನ್ನು ‘ಕೇಸ್ 1’, ‘ಕೇಸ್ 2’, ‘ಕೇಸ್ 3’ ಎಂದು ಗುರುತಿಸಲಾಗುತ್ತದೆ.

ಎರಡನೆಯ ಭಾಗದ ಹೆಸರು ‘ಅವರನ್‌ ಬಿಟ್ ಇವರನ್ ಬಿಟ್ ಇವರ್ಯಾರು’. ಮೂರನೆಯ ಭಾಗಕ್ಕೆ ‘ತುರೇಮಣೆ’ ಎಂಬ ಹೆಸರು ನೀಡಿದ್ದೇವೆ.

* ಮೊದಲ ಭಾಗದ ಕಥೆಯ ಎಳೆ ಏನು?

ಮೊದಲ ಭಾಗದಲ್ಲಿ ನಾಯಕ ವಕೀಲನಾಗಿರುತ್ತಾನೆ. ಹಳೆಯ ಪ್ರಕರಣವೊಂದನ್ನು ಹೇಗೆ ಬಗೆಹರಿಸಲಾಗುತ್ತದೆ ಎಂಬುದೇ ಕಥೆ. ಈ ಚಿತ್ರದಲ್ಲಿ ಸಾಕಷ್ಟು ವೈಶಿಷ್ಟ್ಯಗಳು ಇವೆ. ಚಿತ್ರದ ಪೋಸ್ಟರ್‌ಗಳನ್ನು ಆಸ್ಟ್ರೇಲಿಯಾದಲ್ಲಿ ವಿನ್ಯಾಸ ಮಾಡಿಸಿದ್ದೇವೆ. ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಅಮೆರಿಕ ಹಾಗೂ ಕೆನಡಾದಲ್ಲಿ ಆಗಿವೆ.

* ಕನ್ನಡದಲ್ಲಿ ಟ್ರಯಾಲಜಿ ಮಾಡಬೇಕು ಎಂದು ಅನಿಸಿದ್ದು ಏಕೆ?

ನಾನು ಮಾಡಿದ ಕೊನೆಯ ಸಿನಿಮಾ ‘ಶ್ರೀನಿವಾಸ ಕಲ್ಯಾಣ’. ಆ ಸಿನಿಮಾ ತೆರೆಗೆ ಬಂದ ನಂತರ ನನಗೆ ಸಾಕಷ್ಟು ಚಿತ್ರಕಥೆಗಳು ಬಂದವು. ಆದರೆ ಅವೆಲ್ಲ ರೊಮ್ಯಾನ್ಸ್ ಹಾಗೂ ಹಾಸ್ಯ ಇರುವಂಥವೇ ಆಗಿದ್ದವು. ನಾನು ಯಾವುದಕ್ಕೂ ಬ್ರ್ಯಾಂಡ್ ಆಗುವುದು ಬೇಡ, ಹೊಸದೇನಾದರೂ ಮಾಡೋಣ ಎಂದು ಆಲೋಚಿಸಿ, ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೆ. ಆಗ ಕ್ರೈಂ ಥ್ರಿಲ್ಲರ್ ಸಿನಿಮಾ ಆಲೋಚನೆ ಮನಸ್ಸಿಗೆ ಬಂತು.

ಬೇರೆ ಬೇರೆ ಭಾಷೆಗಳಲ್ಲಿ ಪಾತ್ರ ಆಧಾರಿತ ಸಿನಿಮಾಗಳು ಹೆಚ್ಚೆಚ್ಚು ಬಂದಿವೆ. ಇದಕ್ಕೆ ಉದಾಹರಣೆಯಾಗಿ ಶೆರ್ಲಾಕ್ ಹೋಮ್ಸ್ ಪಾತ್ರವನ್ನು ಉಲ್ಲೇಖಿಸಬಹುದು. ಬೇರೆ ಭಾಷೆಗಳಲ್ಲಿ ಒಂದು ಪಾತ್ರವನ್ನು ಕೇಂದ್ರವಾಗಿ ಇರಿಸಿಕೊಂಡು ನಾಲ್ಕೈದು ಸಿನಿಮಾಗಳು ಬಂದಿದ್ದಿದೆ. ನಾವೇಕೆ ಅಂತಹ ಪ್ರಯತ್ನವನ್ನು ಕನ್ನಡದಲ್ಲೂ ಮಾಡಬಾರದು ಅನಿಸಿತು. ನಮ್ಮಲ್ಲಿ ಅಂತಹ ಸಿನಿಮಾಗಳು ಬಹಳ ಕಡಿಮೆ. ಹಾಗಾಗಿ, ಮೊದಲ ಹೆಜ್ಜೆಯಾಗಿ ಒಂದು ಪಾತ್ರವನ್ನು ಜನರ ಮನಸ್ಸಿನಲ್ಲಿ ಕೂರಿಸಬೇಕು. ಆ ಉದ್ದೇಶದಿಂದ ಮಾಡಿದ್ದು ಬೀರಬಲ್ ಸಿನಿಮಾ.

* ಟ್ರಯಾಲಜಿ ಸಿನಿಮಾಗಳನ್ನು ಕನ್ನಡದಲ್ಲಿ ಜನ ಎಷ್ಟರಮಟ್ಟಿಗೆ ಸ್ವೀಕಾರ ಮಾಡುತ್ತಾರೆ ಎಂಬುದು ಇನ್ನೂ ಪರೀಕ್ಷೆ ಆಗಿಲ್ಲ. ಹೀಗಿರುವಾಗ ಇಂಥ ಸಿನಿಮಾ ಮಾಡುವ ಆಸೆ ಬಂದಿದ್ದೇಕೆ?

ನಮ್ಮ ಆಲೋಚನೆಗಳು ಅನನ್ಯವಾಗಿಯೂ ಎಲ್ಲರಿಗೂ ಇಷ್ಟವಾಗುವಂತೆಯೂ ಇದ್ದರೆ ಸಿನಿಮಾ ಯಶಸ್ಸು ಕಾಣುತ್ತದೆ ಎಂಬುದನ್ನು ನಾನು ನಂಬುತ್ತೇನೆ. ಬೇರೆಯವರು ಟ್ರಯಾಲಜಿ ಮಾಡಲಿ, ಅದನ್ನು ಜನ ಎಷ್ಟರಮಟ್ಟಿಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ಪರಿಶೀಲಿಸಿ ನಾನು ಟ್ರಯಾಲಜಿ ಸಿನಿಮಾ ಮಾಡುವೆ ಎಂದು ಕಾಯಲು ಸಾಧ್ಯವಿಲ್ಲ. ಹೊಸ ಹೊಸ ಪ್ರಯೋಗಗಳು ನಡೆಯಬೇಕು. ಪ್ರಯೋಗಗಳನ್ನು ಯಾರೂ ಮಾಡದಿದ್ದರೆ ಹೇಗೆ? ಹಾಗಾಗಿ, ಇಂಥದ್ದೊಂದು ಪ್ರಯೋಗವನ್ನು ನಾನು ಮೊದಲು ಮಾಡಬೇಕು ಅನಿಸಿತು. ನಾನು ಸಿನಿಮಾ ಮಾಡಿದ್ದೇನೆ. ಅದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ನಾವು ಪ್ರಯತ್ನವನ್ನೇ ಮಾಡದಿದ್ದರೆ ಅದೇ ಒಂದು ವೈಫಲ್ಯ.

* ಬೀರಬಲ್ ಚಿತ್ರೀಕರಣ ಎಲ್ಲಿ ನಡೆದಿದೆ?

ಬೆಂಗಳೂರು, ಮೈಸೂರು ಮತ್ತು ಮುಂಬೈನಲ್ಲಿ ನಡದಿದೆ. ಇದು ಮೊದಲ ಭಾಗದ ಚಿತ್ರೀಕರಣ. ಎರಡನೆಯ ಹಾಗೂ ಮೂರನೆಯ ಭಾಗ ವರ್ಷ ಬಿಟ್ಟು ವರ್ಷಕ್ಕೆ ಒಂದರಂತೆ ಬರುತ್ತವೆ. ಮೊದಲ ಭಾಗ ಜನರಿಗೆ ಎಷ್ಟು ಇಷ್ಟವಾಗುತ್ತದೆ ಎಂಬುದನ್ನು ಆಧರಿಸಿ, ಮುಂದಿನ ಸಿನಿಮಾಗಳನ್ನು ಯಾವ ಮಟ್ಟದಲ್ಲಿ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಎರಡನೆಯ ಹಾಗೂ ಮೂರನೆಯ ಭಾಗದ ಕಥೆ, ಚಿತ್ರಕಥೆ ಸಿದ್ಧವಾಗಿದೆ.

ಅಂದಹಾಗೆ, ನಾವು ಚಿತ್ರಕಥೆಯ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೆವು. ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಬಗ್ಗೆ ಅವರಿಂದ ಸಲಹೆ ಪಡೆದಿದ್ದೆವು. ಕಾನೂನಿನ ಅಂಶಗಳನ್ನು ಸಿನಿಮಾ ಭಾಷೆಯಲ್ಲಿ ಹೇಗೆ ಹೇಳಬೇಕು ಎಂಬುದನ್ನು ಅವರಿಂದ ಕೇಳಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT