ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾಲಿ’ ಖ್ಯಾತಿಯ ಧನಂಜಯ್‌ಗೆ ಇಂದು ಜನ್ಮದಿನದ ಸಂಭ್ರಮ

Last Updated 23 ಆಗಸ್ಟ್ 2020, 8:16 IST
ಅಕ್ಷರ ಗಾತ್ರ

‘ಡಾಲಿ’ ಖ್ಯಾತಿಯ ನಟ ಧನಂಜಯ್ ನಾಯಕನಾಗಿ ನಟಿಸಿದ ಪ್ರಥಮ ಚಿತ್ರ ‘ಡೈರೆಕ್ಟರ್‌ ಸ್ಪೆಷಲ್’. ಇದಾದ ಬಳಿಕ ಒಂದು ದಶಕದ ಅವಧಿಯಲ್ಲಿ ಅವರು ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಆದರೆ, ಯಶಸ್ಸು ಎಂಬುದು ಅವರ ‍ಪಾಲಿಗೆ ಮರೀಚಿಕೆಯಾಗಿತ್ತು. 2018ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ದುನಿಯಾ ಸೂರಿ’ ನಿರ್ದೇಶನದ ‘ಟಗರು’ ಚಿತ್ರದಲ್ಲಿ ಧನಂಜಯ್‌ ನಟಿಸಿದ ‘ಡಾಲಿ’ ಪಾತ್ರ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು.

‘ಟಗರು’ ಬಳಿಕ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇಂದು ಧನಂಜಯ್‌ ಅವರ ಜನ್ಮದಿನವೂ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಅವರು ನಟಿಸುತ್ತಿರುವ ಸಿನಿಮಾಗಳ ಹೊಸ ಪೋಸ್ಟರ್‌ಗಳು ರಾರಾಜಿಸುತ್ತಿವೆ. ‘ಯುವರತ್ನ’, ‘ಸಲಗ’, ‘ರತ್ನನ್‌ ಪ್ರಪಂಚ’, ‘ಹೆಡ್‌ ಬುಷ್‌’ ಸೇರಿದಂತೆ ಹಲವು ಸಿನಿಮಾ ತಂಡಗಳು ವಿಭಿನ್ನ ‍ಪೋಸ್ಟರ್‌ಗಳ ಮೂಲಕ ‘ಡಾಲಿ’ಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.

ಪುನೀತ್ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರದಲ್ಲಿ ಧನಂಜಯ್‌ ‘ಆ್ಯಂಟನಿ ಜೋಸೆಫ್‌’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಆಳುತ್ತಿರುವವರನ್ನು ಪ್ರತಿನಿಧಿಸುವ ಪಾತ್ರವಿದು. ‘ದುನಿಯಾ’ ವಿಜಯ್‌ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ‘ಸಲಗ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಕ್ಕೂ ಧನಂಜಯ್‌ ಅವರೇ ವಿಲನ್‌. ಜಗ್ಗೇಶ್‌ ಜೊತೆಗೆ ‘ತೋತಾಪುರಿ’ ಚಿತ್ರದಲ್ಲೂ ನಟಿಸಿದ್ದಾರೆ.ಈ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಧನಂಜಯ್ ‘ಡಾಲಿ ಪಿಕ್ಚರ್‌’ ಎಂಬ ಸ್ವಂತ ಬ್ಯಾನರ್‌ ಸ್ಥಾಪಿಸಿದ್ದು, ಇದರಡಿ ‘ಡಾಲಿ’ ಮತ್ತು ‘ಬಡವ ರಾಸ್ಕಲ್’ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರು ಭೂಗತ ಲೋಕದ ದೊರೆ ಎಂ.ಪಿ. ಜಯರಾಜ್‌ ಪಾತ್ರದಲ್ಲಿ ಧನಂಜಯ್‌ ನಟಿಸುತ್ತಿರುವ ‘ಹೆಡ್‌ ಬುಷ್‌’ ಸಿನಿಮಾ ಕೂಡ ಕುತೂಹಲ ಹುಟ್ಟಿಸಿದೆ. ಇದಲ್ಲದೆ ‘ರತ್ನನ್‌ ಪ್ರಪಂಚ’ ಎಂಬ ಹೊಸ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದರ ಪೋಸ್ಟರ್‌ ಬಿಡುಗಡೆಯಾಗಿದ್ದು, ಇನ್ನೂ ಶೂಟಿಂಗ್ ಶುರುವಾಗಿಲ್ಲ.

ನಟ ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾದಲ್ಲೂ ಧನಂಜಯ್‌ ನಟಿಸುವುದು ಪಕ್ಕಾ ಆಗಿದೆ. ಆದರೆ, ಇನ್ನೂ ಇದರ ಟೈಟಲ್‌ ಬಿಡುಗಡೆಯಾಗಿಲ್ಲ. ‘ಭೈರವ ಗೀತ’ ಸಿನಿಮಾ ಬಳಿಕ ಅವರು ತೆಲುಗಿನಲ್ಲಿ ಕಾಣಿಸಿಕೊಳ್ಳುವ ಎರಡನೇ ಚಿತ್ರ ‘ಪುಷ್ಪ’. ಅಲ್ಲು ಅರ್ಜುನ್ ನಟನೆಯ ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ಧನಂಜಯ್‌ ಕಾಣಿಸಿಕೊಳ್ಳುತ್ತಿದ್ದಾರಂತೆ.

ನಟರಾದ ದರ್ಶನ್‌, ‘ದುನಿಯಾ’ ವಿಜಯ್ ಸೇರಿದಂತೆ ಚಿತ್ರರಂಗದ ಹಲವರು ಧನಂಜಯ್‌ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT