ಬ್ಲೂವೇಲ್‌ನ ‘ಮನಸ್ಸಿನಾಟ’

ಗುರುವಾರ , ಏಪ್ರಿಲ್ 25, 2019
29 °C

ಬ್ಲೂವೇಲ್‌ನ ‘ಮನಸ್ಸಿನಾಟ’

Published:
Updated:

ಕಂಪ್ಯೂಟರ್‌ ಗೇಮ್‌ ಮಕ್ಕಳ ಮನಸ್ಸಿಗೆ ತಾತ್ಕಾಲಿಕ ರಂಜನೆಯಷ್ಟೇ. ನಿರಂತರವಾಗಿ ಆಟ ಆಡುತ್ತಾ ಹೋದರೆ ಆನ್‌ಲೈನ್‌ ಗೇಮ್ ಅವರ ಪ್ರಾಣಕ್ಕೆ ಕಂಟಕ ತರುವುದರಲ್ಲಿ ಅನುಮಾನವಿಲ್ಲ. ಚಿಣ್ಣರ ಜೀವಕ್ಕೆ ಮಾರಣಾಂತಿಕವಾಗಿದ್ದ ಬ್ಲೂವೇಲ್‌ ಗೇಮ್‌ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ಮಕ್ಕಳ ಭವಿಷ್ಯಕ್ಕೆ ಮುಳುವಾಗಿದ್ದ ಈ ಗೇಮ್‌ ಇಟ್ಟುಕೊಂಡೇ ‘ಮನಸ್ಸಿನಾಟ’ ಚಿತ್ರ ಕಟ್ಟಿದ್ದಾರೆ ನಿರ್ದೇಶಕ ಆರ್‌. ರವೀಂದ್ರ.

ಏಪ್ರಿಲ್‌ 19ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದೊಂದಿಗೆ ಅವರು ಹಾಜರಾಗಿದ್ದರು. ‘ಇದು ಮಕ್ಕಳ ಚಿತ್ರ. ಹಾಗೆಂದು ಅವರಿಗಷ್ಟೇ ಸೀಮಿತವಾಗಿಲ್ಲ. ಕುಟುಂಬದ ಸದಸ್ಯರು ನೋಡುವಂತಹ ಚಿತ್ರ ಇದು’ ಎಂದು ಸ್ಪಷ್ಟನೆಯನ್ನೂ ನೀಡಿದರು.

ತಂತ್ರಜ್ಞಾನದ ಸಕಾರಾತ್ಮಕ ಬಳಕೆ ಮತ್ತು ದುರ್ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಿನಿಮಾ ಆಶಯವಂತೆ. 

ಪೋಷಕರ ಪ್ರೀತಿಯಿಂದ ಬೆಳೆದ ಹರ್ಷಿತ್‌ ಮತ್ತು ತಂದೆ– ತಾಯಿಯ ಪ್ರೀತಿ ವಂಚಿತನಾಗಿ ಬೆಳೆದ ಸಂತೋಷ್‌ ಎಂಬ ಬಾಲಕರ ನಡುವಿನ ಕಥನ ಇದು. ಸಂತೋಷ್‌ಗೆ ಮೊಬೈಲ್‌ ಎಂದರೆ ಜೀವ. ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದುಕೊಳ್ಳುತ್ತಾನೆ. ಸ್ನೇಹಿತನ ಸಾವು ಹರ್ಷಿತ್‌ಗೆ ಸಂಶಯಾಸ್ಪದವಾಗಿ ಕಾಣುತ್ತದೆ. ಮೊಬೈಲ್‌ ಗೇಮ್‌ನಿಂದ ಎಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಎನ್ನುವುದನ್ನು ಮನರಂಜನೆ ಮತ್ತು ಭಾವನಾತ್ಮಕವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. 

ಹಿರಿಯ ನಟ ದತ್ತಣ್ಣ ಚಿತ್ರದ ಮುಖ್ಯಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ಇದರಲ್ಲಿ ನಟಿಸುವುದಕ್ಕೂ ಮೊದಲು ಅವರಿಗೂ ಚಿಣ್ಣರ ಬದುಕಿಗೆ ಆಪತ್ತು ತರುತ್ತಿರುವ ಕಂಪ್ಯೂಟರ್‌ ಗೇಮ್‌ಗಳ ಬಗ್ಗೆ ಅರಿವು ಇರಲಿಲ್ಲವಂತೆ. ‘ರಾಜ್ಯದ ಎಲ್ಲ ಮಕ್ಕಳು ನೋಡಲೇಬೇಕಾದ ಸಿನಿಮಾ ಇದು. ನಾವು ಬಾಲ್ಯದಲ್ಲಿ ಗೋಲಿ, ಚಿನ್ನಿದಾಂಡು ಆಡುತ್ತಿದ್ದೆವು. ಈಗ ಮಕ್ಕಳು ಮೊಬೈಲ್‌ ಮಾಯೆಗೆ ಸಿಲುಕಿದ್ದಾರೆ’ ಎನ್ನುವ ನೋವು ದತ್ತಣ್ಣ ಅವರಲ್ಲಿತ್ತು.

ಡಿ. ಮಂಜುನಾಥ್‌ ಮತ್ತು ಹನುಮೇಶ್‌ ಪಾಟೀಲ್‌ ಬಂಡವಾಳ ಹೂಡಿದ್ದಾರೆ. ಸಚಿನ್‌ ಮತ್ತು ಹನುಮೇಶ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮಂಜುನಾಥ್ ಬಿ. ನಾಯಕ್ ಅವರದ್ದು. ಯಮುನಾ ಶ್ರೀನಿಧಿ, ರಾಮಸ್ವಾಮಿ, ಚಂದನ್‌, ಮಂಜುನಾಥ್‌ ಹೆಗಡೆ, ರಮೇಶ್ ಪಂಡಿತ್, ಹನುಮೇಶ್‌ ಪಾಟೀಲ್, ಡಿ. ಮಂಜುನಾಥ್‌, ಪ್ರೀತಿಕಾ, ಸ್ವಪ್ನಾ, ಮಾಸ್ಟರ್‌ ಹರ್ಷಿತ್, ಮಾಸ್ಟರ್ ಮಂಜು ತಾರಾಗಣದಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !