ಭಾನುವಾರ, ಮೇ 29, 2022
21 °C
2018ರ ನೋಟ

ಬಿ ಟೌನ್‌ನಲ್ಲಿ ಹೊಸಬರ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆರಳೆಣಿಕೆಯ ದಿನಗಳನ್ನು ಕಳೆದರೆ 2019ರ ಕ್ಯಾಲೆಂಡರ್‌ನ ದಿನಎಣಿಕೆ ಶುರುವಾಗುತ್ತದೆ. ಕೊನೆಯ ಹೆಜ್ಜೆಯನ್ನೆತ್ತಿ ಇಡುವ ಮುನ್ನ, ಸಾಗಿಬಂದ ಹಾದಿಯತ್ತ ಸಿಂಹಾವಲೋಕನ ಮಾಡುವುದು ಒಂದು ಸುಂದರ ಅನುಭವ. ಬಾಲಿವುಡ್‌ನ ಆಗುಹೋಗುಗಳನ್ನು ಪುನರಾವಲೋಕನ ಮಾಡಿದರೆ 2018ರಲ್ಲಿ ಒಂದಷ್ಟು ಹೊಸ ಮುಖಗಳ ಏಳುಬೀಳು ಕಾಣುತ್ತದೆ.

ಕುಟುಂಬದ ತಾರಾ ವರ್ಚಸ್ಸನ್ನು ಬಗಲಲ್ಲಿಟ್ಟುಕೊಂಡೇ ಎಂಟ್ರಿ ಕೊಟ್ಟವರು ಕೆಲವರಾದರೆ ಬೇರೆ ಭಾಷೆಗಳಲ್ಲಿ ಬೆಳಗಿ  ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಬಂದವರೂ ಈ ಪಟ್ಟಿಯಲ್ಲಿ ಇದ್ದಾರೆ. ಚಿತ್ರರಂಗದ ಆಕರ್ಷಣೆಯಿಂದ ಹೆಜ್ಜೆಯಿಟ್ಟವರೂ ಇದ್ದಾರೆ. ಆಯ್ದ 10 ಮಂದಿಯನ್ನು ಪಟ್ಟಿ ಮಾಡುವುದಾದರೆ ಸಾರಾ ಅಲಿ ಖಾನ್‌, ರಾಧಿಕಾ ಮದನ್‌, ಜಾಹ್ನವಿ ಕಪೂರ್‌, ಇಷಾನ್‌ ಖತ್ತರ್‌, ಆಯುಷ್‌ ಶರ್ಮಾ, ವಾರಿನಾ ಹುಸೇನ್‌, ದುಲ್ಕರ್‌ ಸಲ್ಮಾನ್‌, ಬನಿತಾ ಸಂಡು, ಮೌನಿ ರಾಯ್‌, ರೋಹನ್‌ ಮೆಹ್ರಾ ಅವರನ್ನು ಹೆಸರಿಸಬಹುದು.

ಹಾಗೆ ನೋಡಿದರೆ 2018ರಲ್ಲಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಈ 10 ಮಂದಿ ಯುವ ನಟರಲ್ಲಿ ಬಹುತೇಕರು ಪ್ರತಿಭಾವಂತರೇ. ಸ್ವಜನಪಕ್ಷಪಾತದ ಆರೋಪ ಪ್ರತ್ಯಾರೋಪಗಳ ನಡುವೆಯೂ ನಟನಾ ಕೌಶಲದಿಂದಲೇ ಬೆಳಗಿದ್ದಾರೆ.  ಸಾರಾ ಅಲಿ ಖಾನ್‌, ಜಾಹ್ನವಿ ಕಪೂರ್‌ ಮತ್ತು ಇಷಾನ್‌ ಖತ್ತರ್‌ ತಾರಾ ವರ್ಚಸ್ಸು ಇಟ್ಟುಕೊಂಡೇ ಬಂದರೂ ಪ್ರತಿಭಾವಂತರೂ ಹೌದು. ದುಲ್ಕರ್‌ ಸಲ್ಮಾನ್‌ ದಕ್ಷಿಣ ಭಾರತದ ಚಿತ್ರರಂಗದಿಂದ ಉತ್ತರಕ್ಕೆ ವಲಸೆ ಬಂದರೆ, ಮೌನಿ ರಾಯ್‌ ಮತ್ತು ರಾಧಿಕಾ ಮದನ್‌ ಕಿರುತೆರೆಯ ಮೂಲಕ ಮನೆ ಮಾತಾಗಿದ್ದವರು.

‘ಧಡಕ್‌’ ಗೆಲ್ಲಿಸಿದ ಹುಡುಗರು

‘ಧಡಕ್‌’ ಸಿನೆಮಾದಲ್ಲಿ ಜಾಹ್ನವಿ ಕಪೂರ್‌ ಮತ್ತು ಇಷಾನ್‌ ಖತ್ತರ್‌ ನಟನೆ ಬಾಲಿವುಡ್‌ ಗಮನ ಸೆಳೆಯಿತು. ಜಾಹ್ನವಿಯನ್ನು ತೆರೆ ಮೇಲೆ ಕಾಣಬೇಕೆಂಬ ತಾಯಿ ಶ್ರೀದೇವಿ ಆಸೆ ಕೈಗೂಡದೇ ಇದ್ದರೂ ಜಾನೂ ಗೆದ್ದರು.

ಸೌಂದರ್ಯದ ಖನಿಯೇ ಆಗಿರುವ ಜಾಹ್ನವಿಯನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಶ್ರೀದೇವಿ ಮಗಳಾಗಿ ಕಂಡಿದ್ದು ಸುಳ್ಳಲ್ಲ. ದುಃಖ ಮತ್ತು ಆತಂಕದ ಸನ್ನಿವೇಶಗಳಲ್ಲಿ ಇನ್ನಷ್ಟು ಭಾವಪೂರ್ಣವಾಗಿ ಅಭಿನಯಿಸಿದರೆ ಶ್ರೀದೇವಿಗೆ ಸಾಟಿಯಾಗಬಲ್ಲರು ಎಂದು ವಿಮರ್ಶಕರು ಜಾಹ್ನವಿಯನ್ನು ಕೊಂಡಾಡಿದರು. 

‘ಧಡಕ್‌’ ಸೂಪರ್‌ ಹಿಟ್‌ ಆಗಲು ಮತ್ತೊಂದು ಕಾರಣ ಇಷಾನ್‌ ಖತ್ತರ್. ಜಾಹ್ನವಿಗೆ ಸಡ್ಡು ಹೊಡೆದು ನಟಿಸಿದರು. ಶಾಹೀದ್‌ ಕಪೂರ್‌ ಸಹೋದರ ಮತ್ತು ನೀಲಿಮಾ ಅಜೀಮ್‌ ಮಗ ಎಂಬ ಹಣೆಪಟ್ಟಿ ಇಷಾನ್‌ಗಿದೆ. ಆದರೆ ಅಭಿಮಾನಿಗಳು ಮೆಚ್ಚಿದ್ದು ಈ ಹುಡುಗನ ಪಕ್ವ ನಟನೆಯನ್ನು. ‘ಧಡಕ್‌’ 70 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಯಿತು.

ಸಾರಾ ಅಲಿ ಖಾನ್‌

‘ಕೇದಾರನಾಥ್‌’ ಚಲನಚಿತ್ರಕ್ಕೆ ಯುವ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದ ಸೂಜಿಗಲ್ಲು ಈ ಸಾರಾ ಅಲಿ ಖಾನ್‌.

ತಾಯಿ ಅಮೃತಾ ಸಿಂಗ್ ಹೋಲಿಕೆ, ತಂದೆ ಸೈಫ್‌ ಅಲಿ ಖಾನ್‌ ಕರೀನಾ ಕಪೂರ್‌ ಅವರನ್ನು ಮದುವೆಯಾದರೂ ಈಕೆ ಗಾಂಭೀರ್ಯದಿಂದ ನಡೆದುಕೊಂಡ ರೀತಿ, ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡ ಬಗೆ, ಇವೆಲ್ಲವನ್ನೂ ಮೀರಿಸುವಂತಹ ನಟನೆಯಿಂದ ‘ಕೇದಾರನಾಥ್‌’ನ ಶಕ್ತಿಯಾದರು ಸಾರಾ.

ಬರೀ 10 ದಿನಗಳಲ್ಲಿ 50 ಕೋಟಿ ರೂಪಾಯಿ ಬಾಚಿದ ಹೆಗ್ಗಳಿಕೆ ಈ ಸಿನೆಮಾದ್ದು. ಅಷ್ಟು ಸಾಲದು ಎಂಬಂತೆ ಬಾಲಿವುಡ್‌ನ ಪ್ರಭಾವಿ ನಾಯಕ ನಟರಲ್ಲೊಬ್ಬರಾದ ರಣವೀರ್‌ ಸಿಂಗ್‌ ಜೊತೆ ‘ಸಿಂಬಾ’ ಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡರು. ಸಾರಾ ‍ಪ್ರತಿಭೆಯೇ ಅವರಿಗೆ ತಾರಾ ವರ್ಚಸ್ಸನ್ನು ಸಂಪಾದಿಸಿಕೊಟ್ಟಿತು. 

ಆಯುಷ್‌ ಶರ್ಮಾ, ವಾರಿನಾ ಹುಸೇನ್

‌ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ ತಂಗಿ ಅರ್ಪಿತಾ ಖಾನ್‌ ಗಂಡ ಈ ಆಯುಷ್‌ ಶರ್ಮಾ. ಹಿಮಾಚಲಪ್ರದೇಶದ ಈ ಯುವಕನಿಗೆ ಚಿತ್ರರಂಗದ ಆಕರ್ಷಣೆ ಇದ್ದರೂ ಗಾಡ್‌ಫಾದರ್‌ ಇಲ್ಲದೆ ಸುಮ್ಮನಿದ್ದರು. ಆದರೆ ಸಲ್ಲೂ ಸೋದರಿ ಅರ್ಪಿತಾ ಜೊತೆ ಮದುವೆಯಾದ ಬಳಿಕ ಕನಸು ನನಸಾಯಿತು. ಸಲ್ಲೂ ನಿರ್ಮಾಣದ ‘ಲವ್‌ ಯಾತ್ರಿ’ ಬಾಕ್ಸಾಫೀಸಿನಲ್ಲಿ ಸೋಲಲು ಆಯುಷ್‌ ದುರ್ಬಲ ನಟನೆಯೂ ಕಾರಣವಾಯಿತು. ಸಲ್ಮಾನ್‌ ಖಾನ್‌ ಪ್ರಭೆಯಿಂದ ಪ್ರೇಕ್ಷಕರು ಮೆತ್ತಗಾಲಿಲ್ಲ.

‘ಲವ್‌ ಯಾತ್ರಿ’ಯಲ್ಲಿ ಆಯುಷ್‌ನಂತೆಯೇ ನಾಯಕಿ ವಾರಿನಾ ಹುಸೇನ್‌ ಕೂಡಾ ಹೊಸ ಮುಖವೇ. ಸಲ್ಮಾನ್ ಖಾನ್‌ ಪರಿಚಯಿಸಿದ ಸುಂದರಿಯಲ್ಲಿ ವಾರಿನಾ ಕೂಡಾ ಒಬ್ಬರು. ಆದರೆ ನಟನೆಯ ಗಂಧವರಿಯದ ವಾರಿನಾ, ಆಯುಷ್‌ನಷ್ಟೇ ಸಪ್ಪೆಯಾದರು. ‘ಲವ್‌ ಯಾತ್ರಿ’ ಸೋಲಿಗೆ ಈ ಅಂಶವೇ ಸಾಕಾಯಿತು.

ಬನಿತಾ ಸಂಡು

‘ಅಕ್ಟೋಬರ್‌’ ಚಿತ್ರದಲ್ಲಿ ವರುಣ್‌ ಧವನ್‌ ಪ್ರಭಾವಶಾಲಿ ನಟನೆಯ ನಡುವೆಯೂ ಸುದ್ದಿಯಾದವರು ನಾಯಕಿ ಬನಿತಾ ಸಂಡು.

ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಬನಿತಾ ಯಶಸ್ವಿಯಾದರು. ಅದಕ್ಕಿಂತಲೂ ಮುಖ್ಯವಾಗಿ, ಹಳೆಯ ನಾಯಕನಟಿಯರನ್ನೇ ಕಂಡು ಬೋರ್‌ ಆಗಿದ್ದ ಪ್ರೇಕ್ಷಕರಿಗೆ ಹೊಸ ಮುಖ ಬೇಗನೆ ಇಷ್ಟವಾಯಿತು. ನಟನೆಗೆ ಇನ್ನಷ್ಟು ಸಾಣೆ ಕೊಟ್ಟರೆ ಬನಿತಾ ಉತ್ತಮ ನಟಿಯಾಗಲ್ಲರು. 

ರಾಧಿಕಾ ಮದನ್‌

‘ಮೇರಿ ಆಶಿಖಿ ತುಮ್‌ ಸೆ ಹಿ’ ಟಿವಿ ಶೋ ಮೂಲಕ ಮನೆ ಮಾತಾಗಿದ್ದ ರಾಧಿಕಾ ಮದನ್‌ ಚಿತ್ರರಂಗ ಪ್ರವೇಶಿಸಿದ್ದು ನಿರೀಕ್ಷಿತವೇ ಆಗಿತ್ತು. ಜೊತೆಗಿದ್ದುದು ಪ್ರತಿಭೆಯಿಂದ ಸಂಪಾದಿಸಿದ್ದ ತಾರಾ ವರ್ಚಸ್ಸು.

ಬಾಲಿವುಡ್‌ ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರ ‘ಪಟಾಕಾ’ದಲ್ಲಿ ರಾಧಿಕಾ ಗ್ಲಾಮರ್‌ ಇಲ್ಲದ ಪಾತ್ರದಲ್ಲೇ ಮಿಂಚಿದರು. ‘ಪಟಾಕಾ’ ಸಿಡಿಯುವ ಪಟಾಕಿಯಾಗಲಿಲ್ಲ. ಆದರೆ ವಿಮರ್ಶೆ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ರಾಧಿಕಾ ಪರವಾಗಿಯೇ ಇತ್ತು.

ಬಂಗಾಲಿ ಬೆಡಗಿ ಮೌನಿ ರಾಯ್‌

2018ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದ ಮತ್ತೊಬ್ಬ ಬೆಡಗಿ ಕಿರುತೆರೆ ಪ್ರತಿಭೆ ಮೌನಿ ರಾಯ್‌. ಅತಿ ಸಣ್ಣ ನಡು ಆಕೆಗೆ ಗ್ಲಾಮರ್‌ ಪಟ್ಟ ತಂದುಕೊಟ್ಟಿತು. ಅಷ್ಟು ಸಣ್ಣ ಸೊಂಟದಿಂದಾಗಿ ಟೀಕೆ ಟಿಪ್ಪಣಿಗಳನ್ನೂ ಈ ಬೆಂಗಾಲಿ ಬೆಡಗಿ ಸಹಿಸಿಕೊಳ್ಳಬೇಕಾಯಿತು.

ಮೊದಲ ಚಿತ್ರ ‘ಗೋ‌ಲ್ಡ್‌’ನಲ್ಲಿ ಅಕ್ಷಯ್‌ ಕುಮಾರ್‌ ಅವರಂತಹ ಅಪ್ರತಿಮ ನಟನೊಂದಿಗೆ ತೆರೆ ಹಂಚಿಕೊಂಡು ಎಂಟ್ರಿ ಕೊಟ್ಟಿದ್ದು ವಿಶೇಷ. ‘ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ’, ‘ದೇವೋಂಕೆ ದೇವ್ ಮಹಾದೇವ್‌’, ‘ನಾಗಿನ್‌’, ‘ಜುನೂನ್‌– ಐಸಿ ನಫ್ರತ್‌ ತೋ ಕೈಸಾ ಇಷ್ಕ್‌’ನಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಮೌನಿ ಅದಾಗಲೇ ಸುದ್ದಿಯಾಗಿದ್ದರು.

ಸುದ್ದಿಯೇ ಆಗದ ರೋಹನ್‌ ಮೆಹ್ರಾ

‘ಬಜಾರ್’ ಚಲನಚಿತ್ರದ ಮೂಲಕ ಎಂಟ್ರಿ ಕೊಡುವ ಅವಕಾಶ ಪಡೆದವರು ರೋಹನ್ ಮೆಹ್ರಾ.

ಸೈಫ್‌ ಅಲಿ ಖಾನ್‌ ಮತ್ತು ರಾಧಿಕಾ ಆಪ್ಟೆ ನಟನೆಯ ಈ ಚಿತ್ರದಲ್ಲಿ ರೋಹನ್‌ ಮೆಹ್ರಾ ಹೇಳಹೆಸರೂ ಇಲ್ಲದಷ್ಟು ಮಂಕಾದರು. ಖ್ಯಾತ ನಟ ವಿನೋದ್ ಮೆಹ್ರಾ ಅವರ ಮಗ ಎಂಬ ತಾರಾ ವರ್ಚಸ್ಸು ಮಾತ್ರ ಇದ್ದ ರೋಹನ್‌, ನಟನೆಯ ಗಂಧವೂ ಗೊತ್ತಿಲ್ಲದ ಕಾರಣ ಮೊದಲ ಯತ್ನದಲ್ಲೇ ಸೋತರು. 

 

‘ವಿನೋದ್‌ ಮೆಹ್ರಾ ಮಗನೆಂಬ ಕಾರಣಕ್ಕೂ ನನ್ನನ್ನು ಬಾಲಿವುಡ್‌ನಲ್ಲಿ ಯಾರೂ ಮಾತನಾಡಿಸುವುದಿಲ್ಲ, ಚಿತ್ರರಂಗದ ಯಾವುದೇ ಪಾರ್ಟಿಗೆ ಹೋದರೂ ಯಾರೂ ಕ್ಯಾರೇ ಅನ್ನುವುದಿಲ್ಲ’ ಎಂದು ರೋಹನ್‌ ಬೇಸರ ವ್ಯಕ್ತಪಡಿಸಿದ್ದೂ ಉಂಟು.

ವಲಸೆ ಬಂದ ದುಲ್ಕರ್‌

ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮಮ್ಮುಟ್ಟಿ ಮಗ ದುಲ್ಕರ್‌ ಸಲ್ಮಾನ್‌ ತಮ್ಮ ಮಾತೃಭಾಷೆಯಲ್ಲಷ್ಟೇ ಅಲ್ಲದೆ ತಮಿಳು ಮತ್ತು ತೆಲುಗಿನಲ್ಲಿಯೂ ಮಿಂಚಿದವರು. ಆ ಮೂರೂ ಭಾಷೆಗಳಲ್ಲಿ ದುಲ್ಕರ್‌ ಗಳಿಸಿದ ಕೀರ್ತಿ 2018ರಲ್ಲಿ ಅವರು ಹಿಂದಿ ಚಿತ್ರರಂಗದಲ್ಲಿ ಅವಕಾಶ ಬಾಚಿಕೊಟ್ಟಿತು.

ಇರ್ಫಾನ್‌ ಖಾನ್‌ ಅಭಿನಯದ ‘ಕಾರವಾನ್‌’ ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ದುಲ್ಕರ್‌ ಮಿಂಚಿದರು. ಅವರಿಬ್ಬರ ಜೋಡಿ ಬಾಲಿವುಡ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಹೊಸ ವರ್ಷದಲ್ಲಿ ಅವರು ‘ದಿ ಜೋಯಾ ಫ್ಯಾಕ್ಟರ್‌’ ಚಿತ್ರದಲ್ಲಿ ನಟಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು