ಶನಿವಾರ, ಆಗಸ್ಟ್ 24, 2019
23 °C

ಮದುವೆಯಾಗಿ ಸುದ್ದಿಯಾದವರು

Published:
Updated:
Prajavani

ಕಳೆದ ವರ್ಷ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ಮದುವೆಯ ಸಂಭ್ರಮದ ಸುದ್ದಿ ಮಾಸುವ ಮೊದಲೇ ಸೋನಂ ಕಪೂರ್‌ ಆನಂದ್‌ ಅಹುಜಾ ಪಾಣಿಗ್ರಹಣ ಸುದ್ದಿಮಾಡಿತು. ಆಪ್ತೇಷ್ಟರ ನಡುವೆ, ಭಾರತೀಯ ಪದ್ಧತಿಯಂತೆ ಮದುವೆಯಾದ ಸೋನಂ ಕಪೂರ್‌ ತನ್ನ ಸ್ನೇಹಿತನನ್ನೇ ಸಂಗಾತಿಯಾಗಿಸಿಕೊಂಡರು. ನಂತರ ‘ವೀರೆ ದಿ ವೆಡ್ಡಿಂಗ್‌’ ಚಿತ್ರದ ಪ್ರಮೋಷನ್‌ಗಳಲ್ಲಿ ಮಿಂಚಿದರು.

ಸೋನಂ ಕಪೂರ್‌ ಅಹುಜಾ ಆಗಿ ಬದಲಾಗುವ ಕಾಲದಲ್ಲಿಯೇ ನೇಹಾ ಧೂಪಿಯಾ ಅಂಗದ್‌ ಕೈ ಹಿಡಿದರು. ಇವರಿಬ್ಬರ ಮದುವೆಯ ಸುದ್ದಿ ಪ್ರಚಾರವಾಗುತ್ತಿರುವಾಗಲೇ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ನಿಕ್ಕಿಯಾಗಿದ್ದು ಸುದ್ದಿಯಾಯಿತು. ಅಲ್ಲಿಂದ ಆರಂಭವಾಗಿದ್ದು, ಈ ಜೋಡಿ ಯಾವ ವಿನ್ಯಾಸಕಾರನ ಬಳಿ ಮದುವೆ ಉಡುಗೆ ಸಿದ್ಧಪಡಿಸಿತು, ಅದೆಲ್ಲಿ ಶಾಪಿಂಗ್‌ ಮಾಡಿದರು? ರಣವೀರ್ ಕುಟುಂಬ ದೀಪಿಕಾ ಕುಟುಂಬವನ್ನು ಭೇಟಿಯಾಗಿದ್ದು, ಹೀಗೆ ಈ ಜೋಡಿ ವರ್ಷಾಂತ್ಯದವರೆಗೂ ಸುದ್ದಿ ಮಾಡಿ, ಮಾಧ್ಯಮದವರನ್ನು  ಸಂಪೂರ್ಣವಾಗಿ ದೂರವಿಟ್ಟು, ದೂರದ ಇಟಲಿಯಲ್ಲಿ ಕೈ ಹಿಡಿದರು. 

ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದ ಪ್ರಕಾರ ಮದುವೆಯಾದ ಈ ಜೋಡಿ, ಮೂರು ಆರತಕ್ಷತೆಗಳನ್ನು ಏರ್ಪಡಿಸಿತ್ತು. ಇವರ ಆರತಕ್ಷತೆಯ ಕಾರ್ಯಕ್ರಮ ಮುಗಿಯುತ್ತಿರುವಾಗಲೇ ಡಿಪ್ಪಿ ಯಾನೆ ಪ್ರಿಯಾಂಕಾ ಚೋಪ್ರಾ ನಿಕ್‌ ಜೋನಸ್‌ ಜೊತೆಗೆ ರಾಜಸ್ಥಾನಕ್ಕೆ ಬಂದಿಳಿದರು. ಉದಯ್‌ಪುರದ ಅರಮನೆಯೊಂದರಲ್ಲಿ ಧೂಂ ಧಾಮ್‌ ಆಗಿ ಮದುವೆಯಾದರು.

ಅದು ದೀಪ್‌ವೀರ್‌ ಜೋಡಿಯಾದರೆ, ಇದು ನಿಕ್ಯಾಂಕ ಜೋಡಿ ಆಯಿತು. ಈ ಮದುವೆಗಳ ಗಲಾಟೆಯಲ್ಲಿ ರಣಬೀರ್‌ ಕಪೂರ್‌ ಏನು ಮಾಡ್ತಾರೆ ಎಂಬ ಪ್ರಶ್ನೆ ಆಗಾಗ ತೇಲಿ ಬರುತ್ತಲೇ ಇತ್ತು. ಸೋನಂ ಕಪೂರ್‌ ಮದುವೆಯ ಸಂದರ್ಭದಲ್ಲಿ ಆಲಿಯಾ ಭಟ್‌ ಜೊತೆಗೆ ಮದುಮಗನಂತೆಯೇ ನಿಂತಿದ್ದ ಈ ಹುಡುಗ ಮತ್ತೆ ಮದುವೆಯ ಸುದ್ದಿಯನ್ನು ಆನಂದಿಸ ತೊಡಗಿದ. ಬ್ರಹ್ಮಾಸ್ತ್ರ ಚಿತ್ರೀಕರಣದ ಸಂದರ್ಭದಲ್ಲಿ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಆಪ್ತರಾಗುತ್ತಿದ್ದಾರೆ, ಆಗಿದ್ದಾರೆ ಎಂಬ ಸಂದೇಶ ಸಾರುವ ಚಿತ್ರಗಳು ಹಲವಾರು ಹರಿದಾಡಿದವು.

‘ಆಪ್‌ಕಿ ಅದಾಲತ್‌’ ಕಾರ್ಯಕ್ರಮದಲ್ಲಿ ರಣಬೀರ್‌ ಹೆಸರು ಕೇಳಿ, ಕೆಂಪೇರಿದ್ದೇನೆ ಎಂದ ಚೆಲುವೆ ಆಲಿಯಾ, ಮದುವೆಯ ಮಾತು ಬಂದಾಗ, ಆಗುವ ನಿರ್ಧಾರ ಮಾಡಿದಾಗ ತಾನೇ ಎಲ್ಲರಿಗೂ ಕರೆದು ತಿಳಿಸುವುದಾಗಿ ಹೇಳಿದಳು. ಈ ನಡುವೆ ರಿಷಿ ಕಪೂರ್ ಹಾಗೂ ರಿತು ಕಪೂರ್‌ ಜೊತೆಗೆ ಲಂಡನ್‌ ಪ್ರಯಾಣವೂ ಕೈಗೊಂಡಳು.

ಇವರಿಬ್ಬರೂ ಹೀಗೆ ಮದುವೆಯ ಬಗ್ಗೆ ಸ್ಪಷ್ಟ ಪಡಿಸದಿದ್ದಾಗಲೇ ಅರ್ಜುನ್‌ ಕಪೂರ್‌ ಮಲೈಕಾ ಅರೋರಾ ಜೊತೆಗೆ ಹೆಚ್ಚು ಹೆಚ್ಚು ತಿರುಗಾಡಲಾರಂಭಿಸಿದರು. ಇನ್ನು ಅವರಿಬ್ಬರ ಅಫೇರ್‌ ಗುಟ್ಟಾಗಿ ಉಳಿದಿಲ್ಲವೆಂಬಂತೆ ಕೈಕೈ ಹಿಡಿದು ಅಡ್ಡಾಡತೊಡಗಿದರು. 

2018ರಲ್ಲಿ ಮದುವೆಯ ಸುದ್ದಿ ಹರಡಿದವರೆಲ್ಲ 2019ರಲ್ಲಾದರೂ ಕೈ ಹಿಡಿಯುವರೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

Post Comments (+)