ಶುಕ್ರವಾರ, ನವೆಂಬರ್ 22, 2019
27 °C

ಮತ್ತೆ ಬಂದರು ದಾರಿಬಿಡಿ...

Published:
Updated:
ನಟಿ ನಂದಿತಾ ದಾಸ್‌

ಕೆಲ ಕಾರಣಗಳಿಂದ ನಟನೆಯಿಂದ ಕೊಂಚ ಕಾಲ ಬ್ರೇಕ್‌ ಪಡೆದುಕೊಂಡಿದ್ದ ನಟಿಯರು ಈಗ ಒಬ್ಬೊಬ್ಬರಾಗಿಯೇ ನಟನೆಗೆ ಮರಳುತ್ತಿದ್ದಾರೆ. ಒಂದು ಕಾಲದಲ್ಲಿ ನಾಯಕಿಯಾಗಿ ಮೆರೆದಿದ್ದ ನಟಿಯರು ಈಗ ಪ್ರಧಾನ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.

ಬಾಲಿವುಡ್‌ನ ಜನಪ್ರಿಯ ನಟಿ ಟಬು, ಟಾಲಿವುಡ್‌ನ ಅಮಲಾ ಅಕ್ಕಿನೇನಿ, ನಟಿ, ನಿರ್ದೇಶಕಿ ನಂದಿತಾ ದಾಸ್‌, ವಿಜಯಶಾಂತಿ ಈಗ ಟಾಲಿವುಡ್‌ನಲ್ಲಿ ಸ್ಟಾರ್‌ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 

2020ರಲ್ಲಿ ಈ ಚಿತ್ರಗಳು ಬಿಡುಗಡೆಯಾಗಲಿದ್ದು, ಪುನಃ ತಮ್ಮ ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ‘ಆಲಾ ವೈಕುಂಠಪುರಮುಲೋ’ ಚಿತ್ರದಲ್ಲಿ ಅಲ್ಲು ಅರ್ಜುನ್‌ ಜೊತೆಯಲ್ಲಿ ಟಬು ನಟಿಸಲಿದ್ದಾರೆ. ಇದರ ನಾಯಕಿ ಪೂಜಾ ಹೆಗ್ಡೆ. ನವೆಂಬರ್‌ 4ರಂದು ಟಬು ಅವರ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್‌ಲುಕ್‌ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

ಹಾಗೇ ‘ವಿರಾಟಪರ್ವಂ’ ಚಿತ್ರದಲ್ಲಿ ನಂದಿತಾ ದಾಸ್‌ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಾನಾ ದಗ್ಗುಬಾಟಿ ಹಾಗೂ ಸಾಯಿಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ನಂದಿತಾ  ಕಾಣಿಸಿಕೊಳ್ಳಲಿದ್ದಾರೆ. 

ಇನ್ನೊಂದೆಡೆ ತೆಲುಗು ಸಿನಿಮಾಗಳ ಮೂಲಕವೇ ಅಮಲಾ ಅಕ್ಕಿನೇನಿ ಸಿನಿ ಕ್ಷೇತ್ರಕ್ಕೆ ಮರಳಿದ್ದಾರೆ. ಶರ್ವಾನಂದ ನಾಯಕನಟನಾಗಿ ನಟಿಸುತ್ತಿರುವ ಚಿತ್ರದಲ್ಲಿ ನಾಯಕನ ತಾಯಿ ಪಾತ್ರವನ್ನು ಅಮಲಾ ಮಾಡುತ್ತಿದ್ದಾರೆ. ಈ ಚಿತ್ರವು ತಮಿಳು ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ನಟಿ ವಿಜಯಶಾಂತಿ 14 ವರ್ಷಗಳ ನಂತರ ‘ಸರಿಲೇರು ನೀಕೆವ್ವರು’ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅನಿಲ್‌ ರವಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮಹೇಶ್‌ ಬಾಬು ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರ 2020ರ ಜನವರಿಯಲ್ಲಿ 12ರಂದು ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)