ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಇದ್ದಿದ್ದರೆ 87 ತುಂಬುತ್ತಿತ್ತು ‘ಮುಗ್ಯಾಂಬೊ’ಗೆ ಸಾಟಿ ಯಾರು?

ಸ್ಪೀಲ್‌ಬರ್ಗ್‌ಗೂ ‘ನೋ’ ಎಂದಿದ್ದ ಅಮರೀಶ್‌ ಪುರಿ
Last Updated 24 ಜೂನ್ 2019, 19:45 IST
ಅಕ್ಷರ ಗಾತ್ರ

ಎಂಬತ್ತರ ದಶಕದಲ್ಲಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆದ ‘ಮಿಸ್ಟರ್‌ ಇಂಡಿಯಾ‘ ಚಿತ್ರ ಬಿಡುಗಡೆಯಾದ ಹಲವು ವರ್ಷಗಳ ನಂತರವೂ ‘ಮುಗ್ಯಾಂಬೊ ಖುಷ್‌ ಹುವಾ’ ಎಂಬ ಡೈಲಾಗ್‌ ಎಲ್ಲರ ನಾಲಿಗೆ ಮೇಲೆ ನಲಿದಾಡಿತ್ತು. ಇಂದಿಗೂ ಅದು ಜನಪ್ರಿಯ ಡೈಲಾಗ್. ‘ಮುಗ್ಯಾಂಬೊ’ ಪಾತ್ರದಲ್ಲಿ ಮಿಂಚಿದ್ದ ಗಡಸು ಕಂಠ, ವಿಕಟ ನಗು, ಕೆಂಡ ಉಗುಳುವ ಕಣ್ಣುಗಳ ಖಳನಟ ಅಮರೀಶ್‌ ಪುರಿಭಾರತೀಯ ಚಿತ್ರರಂಗದಲ್ಲಿ ಖಳನಾಯಕ ಪಾತ್ರಗಳಿಗೆಒಂದು ಹೊಸ ಖದರು ತಂದುಕೊಟ್ಟವರು.

ಅಮರೀಶ್ ಪುರಿ ಬದುಕಿದಿದ್ದರೆ ಇಂದಿಗೆ 87 ವರ್ಷ ತುಂಬುತ್ತಿತ್ತು. ಗೂಗಲ್‌ ಡೂಡಲ್‌ನಲ್ಲಿ ಅಮರೀಶ್‌ ಪುರಿ ಚಿತ್ರ ಪ್ರಕಟಿಸಿ ಗೌರವ ಸಲ್ಲಿಸಿದೆ. ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ’ ಚಿತ್ರದಲ್ಲಿ ಸಿಮ್ರನ್‌ (ಕಾಜೋಲ್‌) ತಂದೆ ಚೌಧರಿ ಬಲದೇವ್‌ ಸಿಂಗ್‌ ಆಗಿ ಅವರು ನಿರ್ವಹಿಸಿದ ಪಾತ್ರ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ನಾಯಕ ಪಾತ್ರದಷ್ಟೇ ವಿಲನ್‌ ಪಾತ್ರಗಳಿಗೂ ಪ್ರಾಮುಖ್ಯತೆ ತಂದುಕೊಟ್ಟಿದ್ದ ಅಮರೀಶ್‌ ಪುರಿ ಮೊದಲ ಆಡಿಷನ್‌ ಮತ್ತು ಸ್ಕ್ರೀನ್‌ ಟೆಸ್ಟ್‌ನಲ್ಲಿ ಫೇಲ್‌ ಆಗಿದ್ದರು. ಸರ್ಕಾರಿ ನೌಕರಿ ಸೇರಿದ್ದರಾದರೂ ರಂಗಭೂಮಿ, ನಟನೆಯ ಸೆಳೆತಅವರನ್ನು ಬಿಡಲಿಲ್ಲ.

ಹಿಂದಿ, ಕನ್ನಡ, ಇಂಗ್ಲಿಷ್‌ ಸೇರಿದಂತೆ 200 ಚಿತ್ರಗಳಲ್ಲಿ ಅಭಿನಯಸಿದ್ದ ಅವರು ಖಳನಾಯಕನ ಜತೆಗೆ ‘ಸಾಫ್ಟ್‌’ ಪಾತ್ರಗಳನ್ನೂನಿರ್ವಹಿಸಿ ತಾನು ಎಂತಹ ನಟ ಎಂದು ಸಾಬೀತುಪಡಿಸಿದರು. ರಂಗಭೂಮಿ ಹಿನ್ನೆಲೆ ಅದಕ್ಕೆ ಕಾರಣವಾಗಿತ್ತು.

‘ಘಾತಕ್‌’ ಚಿತ್ರದಲ್ಲಿಯ ಸ್ವಾತಂತ್ರ್ಯಯೋಧ ಶಂಭುನಾಥ್‌ ಪಾತ್ರ, ‘ಗರ್ದೀಶ್‌’ ಚಿತ್ರದಲ್ಲಿ ಹವಾಲ್ದಾರ ಪುರುಷೋತ್ತಮ್ ಸಾಠೆ ಪಾತ್ರ ಸದಾ ಕಾಡುತ್ತವೆ. ಮಗನನ್ನು ಪೊಲೀಸ್‌ ಅಧಿಕಾರಿ ಮಾಡುವ ಕನಸು ಕಂಡು, ನಿರಾಶನಾಗುವ ಅಪ್ಪನ ಪಾತ್ರದಲ್ಲಿಯ ನೈಜ ಅಭಿನಯ ಎಲ್ಲರ ಕಣ್ಣಲ್ಲಿ ತುಂಬಿತ್ತು.

ಆಸ್ಕರ್ ಪ್ರಶಸ್ತಿ ಪುರಸ್ಕೃತ ‘ಗಾಂಧಿ’ ಚಿತ್ರದಲ್ಲಿ ಖಾನ್‌ ಪಾತ್ರದ ಮೂಲಕ ಹಾಲಿವುಡ್‌ ಪ್ರವೇಶಿಸಿದರು. ‘ಇಂಡಿಯಾನಾ ಜೋನ್ಸ್‌’ ಮತ್ತು ‘ಟೆಂಪಲ್‌ ಡೂಮ್‌’ ಎಂಬ ಖ್ಯಾತ ನಿರ್ದೇಶಕ ಸ್ಟೀವನ್‌ ಸ್ಪೀಲ್‌ಬರ್ಗ್‌ಚಿತ್ರಗಳಲ್ಲಿ ನಟಿಸಿ ಹಾಲಿವುಡ್‌ನಲ್ಲಿಯೂ ಛಾಪು ಮೂಡಿಸಿದ್ದರು. ಮೊದ, ಮೊದಲು ಸ್ಪೀಲ್‌ಬರ್ಗ್‌ ಆಹ್ವಾನವನ್ನು ಪುರಿ ತಿರಸ್ಕರಿಸಿದ್ದರು. ಆದರೆ, ಸ್ಪೀಲ್‌ಬರ್ಗ್ ಸುಲಭಕ್ಕೆ ಬಿಡುವ ಅಸಾಮಿಯಲ್ಲ. ‘ಅಮರೀಶ್‌ ಪುರಿನನ್ನ ನೆಚ್ಚಿನ ಖಳನಟ. ಅಷ್ಟೇ ಅಲ್ಲ ಜಾಗತಿಕ ಚಿತ್ರರಂಗ ಕಂಡ ಶ್ರೇಷ್ಠ ಖಳನಟ’ ಎಂದು ಸ್ಪೀಲ್‌ಬರ್ಗ್‌ ಹೊಗಳಿದ್ದರು ಎಂದರೆ ಅಮರೀಶ್ ಪುರಿ ಎಂತಹ ನಟ ಎಂದು ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT