ಭಾನುವಾರ, ಮೇ 16, 2021
22 °C

ಪ್ರೇಮದಾಸ ರಣಬೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ರಣಬೀರ್ ಕಪೂರ್ ಅವರ ಪ್ರಣಯ ಮತ್ತು ಪರಿಣಯದ ಸುದ್ದಿಯ ಸುತ್ತಲೇ ಮಾಧ್ಯಮಗಳು ಗಿರಕಿ ಹೊಡೆಯುತ್ತಿವೆ. ರಣಬೀರ್‌ ಪಾಲಿಗೆ ಈ ಎರಡೂ ಗಾಳಿಸುದ್ದಿಗಳು ಹೊಸದೇನಲ್ಲ. ಆಲಿಯಾ ಭಟ್‌ ಜೊತೆಗಿನ ಒಡನಾಟವನ್ನು ಒಪ್ಪಿಕೊಂಡಿರುವ ರಣಬೀರ್‌, ಇನ್ನೆರಡು ವರ್ಷದೊಳಗೆ ಇಬ್ಬರೂ ಮದುವೆಯಾಗುವುದಾಗಿ ಹೇಳಿರುವುದೇನೋ ನಿಜ. ಆದರೆ ಈ ಯುವಕನ ಪ್ರೇಮ ಪ್ರಕರಣಗಳ ‘ಬಾಳ್ವಿಕೆ’ಯನ್ನು ಗಮನಿಸಿದರೆ ಆಲಿಯಾ ಜೊತೆಗಾದರೂ ಹಸೆಮಣೆ ಏರುತ್ತಾರೋ ಇಲ್ಲವೋ ಎಂಬ ಗುಮಾನಿ ಕಾಡುವುದು ಸಹಜ.

ರಣಬೀರ್‌, ಪ್ರೀತಿ–ಪ್ರೇಮ– ಪ್ರಣಯದ ವಿಷಯದಲ್ಲಿ ನಿಸ್ಸೀಮ ಅನ್ನೋದರಲ್ಲಿ ಎರಡು ಮಾತಿಲ್ಲ. ಏಳನೇ ತರಗತಿಯಲ್ಲೇ ಒಂದು ನಂಟು ಮುರಿದುಬಿದ್ದಾಗ ಖಿನ್ನತೆಗೊಳಗಾಗಿದ್ದರು. ಹಾಗಂತ ಸಂಬಂಧಗಳ ಸಂಕೀರ್ಣತೆಯನ್ನು ಅರಿಯದವರಲ್ಲ ರಣಬೀರ್‌. ಬಾಲ್ಯದಲ್ಲಿ ಅ‍ಪ್ಪ ರಿಶಿ ಕಪೂರ್‌ ಮತ್ತು ಅಮ್ಮ ನೀತು ಕಪೂರ್‌ ನಡುವಿನ ಭಯಂಕರ ಜಗಳಗಳು ಬಾಲಕನ ಬಾಲ್ಯವನ್ನೇ ಕಸಿದುಕೊಂಡಿತ್ತು. ಆಗ ಬಾಲಕನಿಗೆ ಸಿಗುತ್ತಿದ್ದುದು ಅಮ್ಮನ ಮುದ್ದು ಒಂದೇ. ಹಾಗಾಗಿ ಸಂಬಂಧಗಳನ್ನು ನಿಭಾಯಿಸುವುದು ಸೂಕ್ಷ್ಮ ಕಸರತ್ತು ಎಂಬ ‍ಪಾಠ ಮನೆಯ ವಾತಾವರಣವೇ ಕಲಿಸಿತ್ತು. 

‘ನನ್ನ ಬಾಲ್ಯ ಒಂಥರಾ ದುಃಸ್ವಪ್ನವಾಗಿತ್ತು. ‘ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಮಾತಿಗೆ ನನ್ನ ಬಾಲ್ಯ ಜೀವಂತ ನಿದರ್ಶನ. ಮನೆಯ ಮೆಟ್ಟಿಲ ಮೇಲೆ ಮಂಡಿ ಮಧ್ಯೆ ತಲೆಯಿಟ್ಟು ರಾತ್ರಿ ಕುಳಿತವನು ಬೆಳಗಿನ ಜಾವದ ವರೆಗೂ, ಜಗಳ ಈಗ ನಿಲ್ಲುತ್ತದೆ ಎಂದು ಕಾದಿದ್ದಿದೆ. ಅಬ್ಬಾ... ಸಂಬಂಧ ಅನ್ನೋದು ಎಷ್ಟು ಸಂಕೀರ್ಣ ಸಂಗತಿ ಎಂಬುದು ನನಗೆ ಆಗಲೇ ಅರ್ಥವಾಗಿತ್ತು’ ಎಂದು ಖುದ್ದು ರಣಬೀರ್‌ ಮುಲಾಜಿಲ್ಲದೆ ಎಷ್ಟೋ ಬಾರಿ ಹೇಳಿಕೊಂಡಿದ್ದಿದೆ. 1999ರಲ್ಲಿ ಹತ್ತನೇ ತರಗತಿ ಮುಗಿಯುತ್ತಿದ್ದಂತೆ ತಂದೆಯ ಜೊತೆ ಚಿತ್ರ ನಿರ್ದೇಶನದ ಓಂ ನಾಮ ಕಲಿಯತೊಡಗಿದರು. ಅಪ್ಪನ ಬೆಚ್ಚನೆಯ ಪ್ರೀತಿಯನ್ನು ದಕ್ಕಿಸಿಕೊಟ್ಟ ಆ ದಿನಗಳ ನೆನಪನ್ನು ರಣಬೀರ್‌ ಯಾವತ್ತೂ ಮೆಲುಕು ಹಾಕುತ್ತಾರೆ. 

ಪಾತ್ರದೊಳಹೊಕ್ಕು ಅಭಿನಯಿಸುವ, ಪಾತ್ರಕ್ಕಾಗಿ ಪ್ರಾಯೋಗಿಕ ತಯಾರಿ ಮಾಡಿಕೊಳ್ಳುವುದು ರಣಬೀರ್‌ ವಿಶೇಷತೆ. ಹಾಗಾಗಿ ಅನೇಕ ವರ್ಷಗಳಿಂದ ಬಹುಬೇಡಿಕೆಯ ನಾಯಕನಟನಾಗಿ ಉಳಿದುಕೊಳ್ಳಲು ಸಾಧ್ಯವಾಗಿದೆ. 

2008ರಲ್ಲಿ ‘ಬಚ್‌ನಾ ಏ ಹಸೀನೊ’ ಚಿತ್ರದ ಸೆಟ್‌ನಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ರೊಮ್ಯಾನ್ಸ್‌ ಬಗ್ಗೆ ಬಿ ಟೌನ್‌ ಮುಕ್ತವಾಗಿಯೇ ಮಾತನಾಡಿತ್ತು. ಇಬ್ಬರ ನಿಶ್ಚಿತಾರ್ಥವೂ ನಡೆದಿದೆ ಎಂಬ ಗುಲ್ಲೂ ಎದ್ದಿತ್ತಾದರೂ ಒಂದೇ ವರ್ಷದಲ್ಲಿ ಇಬ್ಬರೂ ಬೇರೆಯಾಗಿದ್ದರು. ‘ನಾನು ಪ್ರೌಢಿಮೆ ತೋರಲಿಲ್ಲ. ‘ಅನುಭವ’ದ ಕೊರತೆ ಮತ್ತು ಕೆಲವು ಸೂಕ್ಷ್ಮ ಸನ್ನಿವೇಶಗಳಲ್ಲಿ ನಾನು ಅತಿರೇಕದಿಂದ ವರ್ತಿಸಿದ್ದು ನಮ್ಮಿಬ್ಬರ ಸಂಬಂಧ ಮುರಿಯಲು ಕಾರಣವಾಯಿತು’ ಎಂದು ರಣಬೀರ್‌ ಪಶ್ಚಾತ್ತಾಪದಿಂದ ಹೇಳಿಕೊಂಡಿದ್ದರು.

ತಮಾಶಾ ಚಿತ್ರದ ಸಂದರ್ಭದಲ್ಲಿ ಬ್ರೇಕಪ್‌ ಆದ ಈ ಜೋಡಿಯಿಂದ ನೈಜನಟನೆ ಹೊರಬರುತ್ತಿಲ್ಲ ಎಂದು ಇಮ್ತಿಯಾಜ್‌ ಅಲಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಆ ಸಂದರ್ಭದಲ್ಲಿ ಒಂದಷ್ಟು ಸಮಯ ಇಬ್ಬರೂ ಒಗ್ಗೂಡಿ ಕಳೆಯಲು ಸೂಚಿಸಿದ್ದರು. ಅವರಿಬ್ಬರ ನಡುವಿನ ಕೆಮೆಸ್ಟ್ರಿ ಒಂದು ಹಂತಕ್ಕೆ ಬಂದ ನಂತರವೇ ಚಿತ್ರೀಕರಣ ಆರಂಭಿಸಿದ್ದು.

ಇಷ್ಟಾದರೂ ಕೆಲವೇ ದಿನಗಳಲ್ಲಿ ‘ಅಜಬ್‌ ಪ್ರೇಮ್‌ ಕಿ ಗಜಬ್‌ ಕಹಾನಿ’ ಚಿತ್ರೀಕರಣದ ವೇಳೆ ಕತ್ರಿನಾ ಕೈಫ್‌ ಜೊತೆಗೆ ರಂಗಿನಾಟ ಶುರುವಾಗಿತ್ತು. ಕತ್ರಿನಾ ಕೈಫ್‌ ಮತ್ತು ರಣಬೀರ್‌ ಇನ್ನೇನು ಮದುವೆಯಾಗಿಯೇ ಬಿಟ್ಟರು ಎಂದು ಸಿನಿಜಗತ್ತು ನಂಬಿತ್ತು. ಆರಂಭದಲ್ಲಿ ಗಪ್‌ಚುಪ್‌ ಎಂದು ಉಳಿದ ಜೋಡಿ ವಿದೇಶದಲ್ಲಿ ಗಾಸಿಪ್‌ವೀರ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಸಿಕ್ಕಿಹಾಕಿಕೊಂಡಿದ್ದರು. ನಂತರ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದರು. ಆದರೆ ರಣಬೀರ್‌, ಪ್ರೇಮಸೂಕ್ಷ್ಮವನ್ನು ಅರಿಯುವಲ್ಲಿ ವಿಫಲರಾದರು.

ತಮ್ಮ ಜೊತೆಗೆ ನಾಯಕಿಯಾಗಿ ನಟಿಸಿದ ಬಹುತೇಕ ನಟಿಯರ ಜೊತೆ ಅತಿಯಾದ ಸಲುಗೆಯಿಂದ ಬೆರೆಯುವುದು ಈ ಸುಂದರಾಂಗ ಜಾಣನ ಸ್ವಭಾವ. ಈಗ, ‘ಬ್ರಹ್ಮಾಸ್ತ್ರ’ ಸೆಟ್‌ನಲ್ಲಿ ಆರಂಭವಾದ ಆಲಿಯಾ ಭಟ್‌– ರಣಬೀರ್‌ ನಂಟು ಮದುವೆಯ ಮಾತುಕತೆ ವರೆಗೂ ಮುಂದುವರಿದಿದೆ. ಹೀಗಿರುವಾಗಲೇ, ಶ್ರುತಿಹಾಸನ್‌ ಬಗ್ಗೆ ಗಾಸಿಪ್‌ವೀರರು ಮಾತನಾಡುತ್ತಿದ್ದಾರೆ. 

ಇದನ್ನೆಲ್ಲ ನೋಡಿದರೆ, ‘ರಣಬೀರ್‌ ಮತ್ತು ಆಲಿಯಾ ನಂಟು ಹೇಗೆ ಕೊನೆಗಾಣುತ್ತದೆ ಎಂಬುದನ್ನು ನಾನು ಸ್ಪಷ್ಟವಾಗಿ ಬಲ್ಲೆ’ ಎಂದು ಮಾಜಿ ಪ್ರೇಯಸಿ ಕತ್ರಿನಾ ಇತ್ತೀಚೆಗೆ ಹೇಳಿಕೊಂಡಿರುವುದು ಬರಿಯ ಹೊಟ್ಟೆ ಉರಿಯಿಂದಲ್ಲ ಎಂದು ಭಾಸವಾಗುತ್ತಿದೆ. 


-ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್‌, ಆಲಿಯಾ ಭಟ್‌
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು