ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಬಿ ಗಾನಸುಧೆಯಲ್ಲಿ ತೇಲಿದ ಗಾನಪ್ರಿಯರು

‘ಪ್ರಜಾವಾಣಿ’ ಸಹಯೋಗದ ಬಾಲಿವುಡ್ ಪಯಣ ಭಾಗ – 1
Last Updated 19 ಜೂನ್ 2019, 11:01 IST
ಅಕ್ಷರ ಗಾತ್ರ

ಹಿರಿಯ ಗಾಯಕ ಎಸ್‌ಪಿಬಿಅವರ ಸವಿ‌ಮಾತು ಕೇಳಲು ಚೆಂದ, ಮಧುರ ಗಾಯನ ಗುನುಗಲು ಇನ್ನೂ ಚೆಂದ. ಅವರ ಸ್ವರ ಮಾಧುರ್ಯಕ್ಕೆ ತಲೆದೂಗದವರೇ ಇಲ್ಲ. ಹೌದು, ಇತ್ತೀಚೆಗೆ ಮೈಸೂರು ರಸ್ತೆಯ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಸಭಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿಸೇರಿದ್ದ ಗಾನಪ್ರಿಯರು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾನಸುಧೆಗೆ ಅಕ್ಷರಶಃ ಮೈಮರೆತರು.

ಎಸ್‌ಪಿಬಿ ಅಭಿಮಾನಿಗಳ ಚಾರಿಟಬಲ್ ಫೌಂಡೇಷನ್‌ 'ಪ್ರಜಾವಾಣಿ' ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಬಾಲಿವುಡ್ ಪಯಣ ಭಾಗ- 1 ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಮತ್ತು ತಂಡದವರು ಸಭಿಕರಿಗೆ ಮಧುರ ಗೀತೆಗಳ ಗಾನಸುಧೆಯನ್ನು ಉಣಬಡಿಸಿದರು. 73ರ ಹರೆಯದಲ್ಲೂ ಒಂದಿನಿತೂ ಕುಂದದ ಅವರ ಗಾಯನ ಶಕ್ತಿ,ಬತ್ತದ ಉತ್ಸಾಹ, ಸಹ ಗಾಯಕರನ್ನೂ ಪ್ರೋತ್ಸಾಹಿಸುವ ಅವರ ಗುಣಕ್ಕೆ ಎಲ್ಲರೂ ತಲೆದೂಗಿದರು.

'ಇದೇ ನಾಡು, ಇದೇ ಭಾಷೆ, ಎಂದೆಂದಿಗೂ ನನ್ನದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರು' ಎಂಬ ಗೀತೆಯನ್ನು ಎಸ್‌ಪಿಬಿ ನಾಂದಿಗೀತೆಯಾಗಿ ಹಾಡುತ್ತಿದ್ದಂತೆ ಸಭಾಂಗಣದಲ್ಲಿ ಅಭಿಮಾನದ ಅಲೆಯೇ ಉಕ್ಕಿತು.ಹಿಂದಿ, ಕನ್ನಡ ಸಿನಿಮಾಗಳಲ್ಲಿ ಎಸ್‌ಪಿಬಿ ಹಾಡಿರುವ ಆಯ್ದ ಹಾಡುಗಳ ಗಾಯನವನ್ನು ಮತ್ತೊಮ್ಮೆ ಎಸ್‌ಪಿಬಿಯವರ ಕಂಠಸಿರಿಯಲ್ಲಿ ಕೇಳಿ ಆನಂದಿಸುವ ಅವಕಾಶ ಸಭಿಕರಿಗೆ ಮತ್ತೊಮ್ಮೆ ಲಭಿಸಿತು.

ಅವರ ಮಾತು ಮತ್ತು ಗಾನ ಮಾಧುರ್ಯ ಜತೆಜತೆಗೆ ಸಾಗುವಾಗ,1970ರಲ್ಲಿ ಹಿಂದಿ ಚಿತ್ರರಂಗಕ್ಕೆ ಗಾಯನದ ಮೂಲಕ ಅಡಿ ಇಟ್ಟ ನೆನಪುಗಳನ್ನು, ಇದೂವರೆಗೂ ಸುಮಾರು ಆರು ಸಾವಿರ ಹಾಡುಗಳನ್ನು ಹಿಂದಿ ಭಾಷೆಯಲ್ಲಿ ಹಾಡಿರುವುದನ್ನು ಎಸ್‌ಪಿಬಿ ಮೆಲುಕು ಹಾಕಿದರು.‘ಕನ್ನಡ ನಾಡಿನೊಂದಿಗೆ ನನ್ನದು ಅವಿನಾಭಾವ ಸಂಬಂಧ. ಈ ನಾಡಿನಲ್ಲಿ ನನಗೆ ಸಿಕ್ಕಿರುವ ಗೌರವ, ಅಭಿಮಾನ ಪೂರ್ವ ಜನ್ಮದ ಸುಕೃತ’ ಎಂದೂ ಅವರು ಸ್ಮರಿಸಿದರು.ಹೈದರಾಬಾದ್‌ನಿಂದ ಬಂದಿದ್ದ ತಮ್ಮ ತಂಡದ ಗಾಯಕ–ಗಾಯಕಿಯರಿಗೆ 'ಕನ್ನಡ ಕಲಿಯಿರಿ, ಕನ್ನಡ ಕಲಿತರೆ ಅದು ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತದೆ' ಎಂದು ಹೇಳುವುದನ್ನು ಹಿರಿಯ ಗಾಯಕ ಮರೆಯಲಿಲ್ಲ.

ಎಸ್‌ಪಿಬಿಪುತ್ರ ಚರಣ್, ಅವರ ಸಹೋದರನ ಪುತ್ರ ಅಭಿಷೇಕ್, ಗಾಯಕರಾದ ಪಲ್ಲವಿ ಅರುಣ್, ಸಾಯಿ ಚರಣ್, ಹರಿಣಿ, ರಮ್ಯಾಎಸ್‌ಪಿಬಿ ಗಾಯನಕ್ಕೆ ದನಿಗೂಡಿಸಿ, ಸಂಗೀತ ಸಂಜೆಗೆ ಮೆರುಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT