ಶುಕ್ರವಾರ, ಮೇ 14, 2021
32 °C

ಹಾಡುಗಳೇ ಚಿತ್ರಗಳನ್ನು ಗೆಲ್ಲಿಸಿದ್ದವು: ಶ್ರವಣ್‌ ರಾಥೋಡ್‌ ನೆನಪಿಸುವ ಗೀತೆಗಳು

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಸುಮಾರು 1990 ರಿಂದ 2000 ಇಸವಿಯವರೆಗೆ ಒಂದು ದಶಕದ ಅವಧಿಯಲ್ಲಿ ಹಲವಾರು ಸುಮಧುರ ಹಾಡುಗಳನ್ನು ಕೊಟ್ಟ ಶ್ರೇಯಸ್ಸು ಸಂಗೀತ ನಿರ್ದೇಶಕ ಜೋಡಿಯಾದ ನದೀಮ್‌– ಶ್ರವಣ್‌ ಅವರದ್ದು. ಹಿಟ್‌ ಚಿತ್ರಗಳಾದ ‘ದಿಲ್‌ ಹೈ ಕೀ ಮಾನ್ತಾ ನಹೀ’, ‘ಬರ್ಸಾತ್‌’, ‘ದೀವಾನಾ’, ‘ಸಾಜನ್‌’, ‘ಸಡಕ್‌’, ‘ರಾಜಾ’, ‘ಪೂಲ್‌ ಔರ್‌ ಕಾಂಟೆ’, ‘ದಡ್ಕನ್‌’, ‘ರಾಜಾ ಹಿಂದೂಸ್ತಾನಿ’, .... ಹೀಗೆ ಹಿಟ್‌ ಚಿತ್ರಗಳ, ಸೂಪರ್‌ ಹಿಟ್‌ ಗೀತೆಗಳಿಗೆ ಸಂಗೀತ ನೀಡಿದ ಶ್ರೇಯಸ್ಸು ಈ ಜೋಡಿಯದ್ದು. 1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರ ಮುಗ್ಗರಿಸಿದರೂ, ಹಾಡುಗಳ ಕಾರಣದಿಂದಲೇ ಕ್ಯಾಸೆಟ್‌ಗಳು ಬಿಸಿ ದೋಸೆಯಂತೆ ಮಾರಾಟವಾಗಿದ್ದವು.

ನದೀಮ್‌– ಶ್ರವಣ್‌ ಜೋಡಿಯಲ್ಲಿ ಶ್ರವಣ್‌ ರಾಠೋಡ್‌ (66) ಶುಕ್ರವಾರ ಕೋವಿಡ್‌ನಿಂದ ಮುಂಬೈನ ಮಾಹಿಮ್‌ನಲ್ಲಿರುವ ರಹೇಜಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಡುಗಳ ಕಾರಣದಿಂದಲೇ ಚಿತ್ರವನ್ನೂ ನೋಡುವಂತೆ ಮಾಡಿದ್ದು ಅವರ ಸಾಧನೆ. ಹಿಂದಿ ಚಿತ್ರರಂಗದಲ್ಲಿ ಲಕ್ಷ್ಮೀಕಾಂತ್‌ – ಪ್ಯಾರೇಲಾಲ್‌ ಜೋಡಿ 1960ರ ದಶಕದಿಂದ ಜನಪ್ರಿಯವಾದರೆ, ನದೀಮ್‌– ಶ್ರವಣ್‌, ಆನಂದ್‌ –ಮಿಲಿಂದ್‌, ಇತ್ತೀಚಿನ ವರ್ಷಗಳಲ್ಲಿ ಸಾಜಿದ್‌–ವಾಜಿದ್‌ ಜೋಡಿ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿತ್ತು. ವಾಜಿದ್‌ ಖಾನ್‌ (42) ಕೂಡ ಕಳೆದ ವರ್ಷದ ಜೂನ್‌ನಲ್ಲಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದರು.

ಸಮೀರ್‌ ಸಾಹಿತ್ಯಕ್ಕೆ ನದೀಮ್‌ (ಪೂರ್ಣ ಹೆಸರು ನದೀಮ್‌ ಸೈಫಿ)– ಶ್ರವಣ್ ಜೋಡಿಯ ಸಂಗೀತ 1990ರ ದಶಕದ ಚಿತ್ರಗೀತೆಗಳಲ್ಲಿ ಟ್ರೆಂಡ್‌ ಸೃಷ್ಟಿಸಿತು. ಕುಮಾರ್‌ ಸಾನು, ಉದಿತ್‌ ನಾರಾಯಣ್‌, ಅಲ್ಕಾ ಯಾಗ್ನಿಕ್‌, ಅನುರಾಧಾ ಪೊದುವಾಳ್‌ ಮೊದಲಾದ ಹಿನ್ನೆಲೆ ಗಾಯಕರೂ ಆ ಸಮಯದಲ್ಲಿ ಸಾಕಷ್ಟು ಹೆಸರು ಮಾಡಿದರು.

1990ರಲ್ಲಿ ಬಿಡುಗಡೆಯಾದ ‘ಆಶಿಕಿ’ (ರಾಹುಲ್‌ ರಾಯ್‌–  ಅನು ಅಗರವಾಲ್‌) ಮೂಲಕ ಈ ಜೋಡಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿತು. ಆ ಚಿತ್ರದ ಎಲ್ಲ ಗೀತೆಗಳೂ ಹಿಟ್‌ ಆಗಿದ್ದವು. ‘ಸಾಜನ್‌’ (1991), ‘ಪೂಲ್‌ ಔರ್‌ ಕಾಂಟೇ’ (1991), ‘ದೀವಾನಾ’ (1992), ‘ಬರ್ಸಾತ್‌’ (1995), ‘ರಾಜಾ’ (1995), ‘ರಾಜಾ ಹಿಂದೂಸ್ತಾನಿ’ (1996), ‘ಪರ್ದೇಸ್‌’ (1997), ‘ಸಿರ್ಫ್‌ ತುಂ’ (1999) ‘ದಡ್ಕನ್‌’ (2000), ‘ರಾಝ್‌’ (2002)... ಈ ಪಟ್ಟಿ ಬೆಳೆಯತ್ತದೆ. ಸಿ.ಡಿ.ಗಳು ಇನ್ನೂ ಶೈಶವಾವಾಸ್ಥೆಯಲ್ಲಿದ್ದ ಆ ಸಮಯದಲ್ಲಿ ಈ ಚಿತ್ರಗಳ ಗೀತೆಗಳನ್ನು, ಹಳೆಯ ಮ್ಯಾಗ್ನೆಟಿಕ್‌ ಟೇಪ್‌ನ ಕ್ಯಾಸೆಟ್‌ಗಳಲ್ಲಿ ಕೇಳದ ಸಂಗೀತಪ್ರಿಯರಿಲ್ಲ.

ಆಶಿಕಿಯ ಹಾಡುಗಳು ಯುವ ಪೀಳಿಗೆಯನ್ನು ಮೋಡಿ ಮಾಡಿದವು. ನಝರ್‌ ಕೆ ಸಾಮ್‌ನೇ ಜಿಗರ್‌ ಕೇ ಪಾಸ್‌...., ಜಾನೇ ಜಿಗರ್‌ ಜಾನೇಮನ್‌, ತುಝ್‌ಕೊ...., ಧೀರೆ ಧೀರೆ ಸೇ ಮೇರೆ ಝಿಂದಗಿ ಮೇ ಆನಾ..., ತೂ.. ಮೇರೀ ಝಿಂದಗೀ ಹೇ..., ಮೇರೇ ದಿಲ್‌ ತೇರೇ ಲಿಯೇ... ಹಾಡುಗಳು ಬಹುಕಾಲ ನೆನಪಿನಲ್ಲಿ ಉಳಿಯುವ ರೀತಿಯಲ್ಲಿದ್ದವು. ಹಿನ್ನೆಲೆ ಗಾಯಕರಾಗಿ ಕುಮಾರ್‌ ಸಾನು, ಅನುರಾಧಾ ಪೊದುವಾಳ್‌ ಕೆಲ ವರ್ಷಗಳ ಕಾಲ ನೆಲೆಯೂರಿದರು.

ದೀವಾನಾ ಚಿತ್ರದ ‘ಐಸೀ ದಿವಾನಗೀ...’, ‘ಸೋಚೆಂಗೆ ತುಮ್ಹೇ ಪ್ಯಾರ್‌ ಕರತೇ....’, ‘ಪಾಯಲಿಯಾ....’ ಹಾಡುಗಳೂ ಅಷ್ಟೇ, ಅಜಯ್‌ ದೇವಗನ್‌ಗೆ ಹೆಸರು ತಂದುಕೊಟ್ಟ ‘ಪೂಲ್‌ ಔರ್‌ ಕಾಂಟೆ’ (1991) ಚಿತ್ರದ ಹಾಡುಗಳೂ ಮೆಲುಕು ಹಾಕುವಂತಿದ್ದವು. ‘ಧೀರೆ ಧೀರೆ ಪ್ಯಾರ್‌ ಕೊ ಬಡಾನಾ ಹೇ...’, ‘ತುಮ್ಕೊ ಮಿಲ್‌ ನೇ ದಿಲ್‌ ತರಸಾ ಹೇ...’, ‘ಪ್ರೇಮಿ ಆಶಿಕ್‌ ಆವಾರಾ...’ ಹಾಡುಗಳು ಇವರ ಕ್ರಿಯಾಶೀಲತೆಗೆ ಉದಾಹರಣೆಗಳಾಗಿದ್ದವು. ಸುನೀಲ್ ಶೆಟ್ಟಿ ಅಭಿನಯದ ದಡ್ಕನ್‌ ಚಿತ್ರವೂ ಅಂಥ ಹಿಟ್‌ ಆಗಿಲ್ಲದಿದ್ದರೂ, ಹಾಡುಗಳು ಗಮನ ಸೆಳೆದವು. ಶ್ರವಣ್‌ ರಾಠೋಡ್‌ ಇನ್ನಿಲ್ಲದಿದ್ದರೂ ಅವರು ನದೀಮ್‌ ಜೊತೆ ನೀಡಿದ ಸಂಗೀತದ ಗೀತೆಗಳು ನೆನಪಿನಲ್ಲಿ ಉಳಿಯುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು