ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಗಿಕಣ’ ಸಂತೆಗೆ ವರ್ಷದ ಸಂಭ್ರಮ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

‘ರಾಗಿ ಕಣ’ ಎಂಬ ಸಾಂಸ್ಕೃತಿಕ ಸಮುಚ್ಛಯಕ್ಕೆ ಈಗ ವರ್ಷದ ಸಂಭ್ರಮ. ರಾಗಿಕಣವು ಗ್ರಾಮೀಣ ಕೈಕಸುಬುಗಳಾದ ಕೈಚರಕ, ನೈಸರ್ಗಿಕ ಬಣ್ಣಗಾರಿಕೆ, ನೇಕಾರಿಕೆ, ಪಶುಪಾಲನೆ, ಕುಂಬಾರಿಕೆ ಮುಂತಾದವುಗಳನ್ನು ಹತ್ತಿರದಿಂದ ನೋಡಿ ಗ್ರಾಮಜೀವನದ ಸ್ವಾನುಭವವನ್ನು ಪಡೆಯುವ ಉದ್ದೇಶದಿಂದ ಹುಟ್ಟಿದ ಸಂಸ್ಥೆ.

ನಗರದ ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ ಗ್ರಾಮ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಹಸಿರುವನದ ನಡುವೆ, ಒಂದು ವರ್ಷದಿಂದ ವಾರಾಂತ್ಯದ ಸಂತೆ ಪ್ರತಿ ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ನಡೆಯುತ್ತಿದೆ.

ರಾಗಿಕಣದ ಸಂತೆಯಲ್ಲಿ ರೈತರು ಹಾಗೂ ಇತರ ಗ್ರಾಮಕರ್ಮಿಗಳಿಂದ ನೇರವಾಗಿ ನೇರವಾಗಿ ಕೊಂಡು ಅವರೊಡನೆ ಸಂವಾದ ಮಾಡಬಹುದು. ಇದಲ್ಲದೆ ಪ್ರಸ್ತುತವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಡಿಯೋಗಳು, ಸಿನಿಮಾ ಪ್ರದರ್ಶನಗಳು ರಾಗಿಕಣದಲ್ಲಿ ನಡೆಯುತ್ತವೆ.

ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಪರಿಣತರೊಡನೆ ಸಂವಾದ, ತೋಟದಲ್ಲಿ ಮಕ್ಕಳೊಂದಿಗೆ ಬೀಜದ ಉಂಡೆ ತಯಾರಿಸುವಿಕೆ, ಮರಗಿಡಗಳ ಬಗ್ಗೆ ಅರಿಯುವುದು ಇವೆಲ್ಲವೂ ರಾಗಿಕಣದಲ್ಲಿ ನಡೆಯುತ್ತದೆ. ಇದುವರೆಗೆ 60-70 ಕ್ಷೇತ್ರ ಪರಿಣತರು, ವಿಜ್ಞಾನಿಗಳು, ಸಮಾಜ ಕಾರ್ಯಕರ್ತರು ಸಂವಾದಗಳಲ್ಲಿ ಭಾಗಿಯಾಗಿದ್ದಾರೆ.

ಗ್ರಾಮ ಸೇವಾ ಸಂಘ ಹಾಗೂ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಜಂಟಿಯಾಗಿ ಆರಂಭಿಸಿರುವ ಒಂದು ಜನಚಳವಳಿಯಾಗಿರುವ ರಾಗಿಕಣ, ಹುಲ್ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಧರ್ಮದತ್ತಿಯ ಸಹಯೋಗದಲ್ಲಿ ನಡೆಯುತ್ತಿದೆ.

ಮೊದಲನೇ ಹುಟ್ಟುಹಬ್ಬವು ರಾಗಿಕಣದ ಅತ್ಯುತ್ತಮ ಸಂತೆಯಾಗಿ ಹೊರಹೊಮ್ಮಲಿದ್ದು, ದೇಶದ ಹೆಸರಾಂತ ಸಂಸ್ಥೆಗಳಿಂದ ಪರಿಶುದ್ಧ ಖಾದಿವಸ್ತ್ರ, ಕೈಮಗ್ಗ ವಸ್ತ್ರ, ಕುಶಲಕರ್ಮದ ಉತ್ಪನಗಳು, ಕೈಉತ್ಪನ್ನಗಳು, ವ್ಯವಸಾಯೋತ್ಪನ್ನಗಳು ಹಾಗೂ ಆಹಾರ ಪದಾರ್ಥಗಳ ಗ್ರಾಮೀಣ ಉತ್ಪಾದಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳಲಿದ್ದಾರೆ. ಜೊತೆಗೆ ವೈವಿಧ್ಯಮಯ ಹಣ್ಣು ಹಾಗೂ ತರಕಾರಿಗಳು ಸಿಗಲಿವೆ.

ಫಲಾನುಭವಿಗಳು ಯಾರು?

ಭಾನುವಾರ ಸಂತೆಯಿಂದ ಬರುವ ಸಂಪೂರ್ಣ ಲಾಭವನ್ನು ಗ್ರಾಮೀಣ ಉತ್ಪಾದಕರಿಗೆ ತಲುಪಿಸಲಾಗುತ್ತಿದೆ. ನೇಕಾರರು, ಕುಶಲಕರ್ಮಿಗಳು ಮತ್ತು ಸಣ್ಣ ಮತ್ತು ಅತಿಸಣ್ಣ ರೈತರು ರಾಗಿಕಣದ ನೇರ ಫಲಾನುಭವಿಗಳು. ಅದರಲ್ಲೂ ಸಾವಯವ ಬೇಸಾಯ ಮಾಡುತ್ತಿರುವ ಬಡವರ್ಗಕ್ಕೆ ಸೇರಿದ ರೈತರು ಬೆಳೆದ ಅಕ್ಕಿ, ಬೇಳೆ ಕಾಳು, ಎಣ್ಣೆ ಇತ್ಯಾದಿಗಳನ್ನು ನ್ಯಾಯವಾದ ಬೆಲೆಯಲ್ಲಿ ಸಹಕಾರ ಸಂಘಗಳ ಮೂಲಕ ಮಧ್ಯವರ್ತಿಗಳಿಲ್ಲದೆ ಮಾರುತ್ತಾರೆ.

ನಗರದ ಗ್ರಾಹಕರು ತಾಜಾ ತರಕಾರಿಗಳು, ಗ್ರಾಸ, ಶುದ್ಧ ಖಾದಿ ಮತ್ತು ಕೈಮಗ್ಗ ವಸ್ತ್ರಗಳು ಮತ್ತಿತರ ಪದಾರ್ಥಗಳನ್ನು ಖರೀದಿಸುವುದಲ್ಲದೆ ಸಿರಿಧಾನ್ಯದ ಊಟ ಉಪಾಹಾರವನ್ನೂ ಆಸ್ವಾದಿಸುತ್ತಾರೆ.

ಸಂಪರ್ಕ ಸಂಖ್ಯೆ: 9972676426

**

‘ರಾಗಿಕಣ’ ವರ್ಷದ ಸಂಭ್ರಮ: ಶನಿವಾರ ಬೆಳಿಗ್ಗೆ 11ರಿಂದ 5ರವರೆಗೆ ವಿವಿಧ ಕರಕುಶಲ ಮತ್ತು ನೈಸರ್ಗಿಕ ಬಣ್ಣಗಳ ಕಾರ್ಯಾಗಾರ.

ಭಾನುವಾರ ಮಧ್ಯಾಹ್ನ 12ಕ್ಕೆ ಒಡಿಶಾದ ನೇಕಾರಿಕೆ ಬಗ್ಗೆ ಮಾಹಿತಿ: ವಸ್ತ್ರವಿನ್ಯಾಸಕಿ ಗುಂಜನ್ ಜೈನ್ ಅವರಿಂದ. ಸಂಜೆ 5.30ಕ್ಕೆ ವೀಣಾವಾದನ– ವಿ.ಜಯಂತಿ ಕುಮರೇಶ್, ಆಯೋಜನೆ– ಗ್ರಾಮಸೇವಾ ಸಂಘ.

ಸ್ಥಳ–ವಿಳಾಸ: ರಾಗಿಕಣ, ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT