ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕ್, ಟೈಮ್ಸ್ ನೌ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಿರ್ಮಾಪಕರು

Last Updated 12 ಅಕ್ಟೋಬರ್ 2020, 18:40 IST
ಅಕ್ಷರ ಗಾತ್ರ

ನವದೆಹಲಿ: ‘ಬಾಲಿವುಡ್‌ ಬಗ್ಗೆ ‘ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿಕರ’ ಹೇಳಿಕೆಗಳನ್ನು ನೀಡುವುದರಿಂದ ಮತ್ತು ಉದ್ದಿಮೆಯ ಸದಸ್ಯರನ್ನು ‘ಮಾಧ್ಯಮ ವಿಚಾರಣೆ’ಗೆ ಒಳಪಡಿಸುವುದರಿಂದ ರಿಪಬ್ಲಿಕ್‌ ಟಿ.ವಿ. ಹಾಗೂ ಟೈಮ್ಸ್‌ ನೌ ಸುದ್ದಿ ವಾಹಿನಿಯನ್ನು ತಡೆಯಬೇಕು’ ಎಂದು ಬಾಲಿವುಡ್‌ನ ಮುಂಚೂಣಿಯ ನಿರ್ಮಾಪಕರು ದೆಹಲಿ ಹೈಕೋರ್ಟ್‌ಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಬಾಲಿವುಡ್‌ಗೆ ಸಂಬಂಧಿಸಿದ ನಾಲ್ಕು ಸಂಘಟನೆಗಳು ಹಾಗೂ ಮುಂಚೂಣಿಯ 34 ನಿರ್ಮಾಣ ಸಂಸ್ಥೆಗಳವರು ಸೇರಿ ಈ ಅರ್ಜಿ ಸಲ್ಲಿಸಿದ್ದಾರೆ. ಅಮೀರ್‌‌ ಖಾನ್‌, ಸಲ್ಮಾನ್‌ ಖಾನ್‌, ಶಾರುಕ್‌ ಖಾನ್‌, ಕರಣ್‌ ಜೋಹರ್‌, ಅಜಯ್‌ ದೇವಗನ್, ಅನಿಲ್‌ ಕಪೂರ್‌, ರೋಹಿತ್‌ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಗಳೂ ಇದರಲ್ಲಿ ಸೇರಿವೆ.

‘ಉದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳ ಗೋಪ್ಯತೆಯ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡುವುದರಿಂದ ಈ ಎರಡು ಮಾಧ್ಯಮ ಸಂಸ್ಥೆಗಳನ್ನು ತಡೆಯಬೇಕು’ ಎಂದು ಯಶ್‌ರಾಜ್‌ ಫಿಲ್ಮ್ಸ್‌ ಹಾಗೂ ಆರ್‌.ಎಸ್‌. ಎಂಟರ್‌ಟೇನ್‌ಮೆಂಟ್‌ ಸಂಸ್ಥೆಗಳು ಮನವಿ ಮಾಡಿವೆ.

ರಿಪಬ್ಲಿಕ್‌ ಟಿ.ವಿ.ಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಹಾಗೂ ವರದಿಗಾರ ಪ್ರದೀಪ್‌ ಭಂಡಾರಿ, ಟೈಮ್ಸ್‌ ನೌ ಸುದ್ದಿ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ರಾಹುಲ್‌ ಶಿವಶಂಕರ್‌ ಹಾಗೂ ಸಮೂಹ ಸಂಪಾದಕಿ ನಾವಿಕಾ ಕುಮಾರ್‌ ಅವರಿಗೆ ಈ ಕುರಿತುನಿರ್ದೇಶನಗಳನ್ನು ನೀಡುವಂತೆಯೂ ಮನವಿ ಮಾಡಲಾಗಿದೆ.

‘ಬಾಲಿವುಡ್‌ ಕುರಿತ ಸುದ್ದಿಗಳ ಮೇಲೆ ಸಾರಾಸಗಟು ನಿಷೇಧ ಹೇರಬೇಕೆಂದು ಹೇಳಿಲ್ಲ. ಬದಲಿಗೆ, ಕೇಬಲ್‌ ಟಿ.ವಿ. ನಿಯಮಾವಳಿಗಳನ್ನು ಈ ಸಂಸ್ಥೆಗಳು ಗೌರವಿಸಿ, ಬಾಲಿವುಡ್‌ ವಿರುದ್ಧ ಮಾಡಿರುವ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಬಯಸುತ್ತೇವೆ’ ಎಂದು ದೂರುದಾರರು ಹೇಳಿದ್ದಾರೆ.

ಈ ಅರ್ಜಿಯು ವಾರಾಂತ್ಯದಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT