ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನಲ್ಲಿ ಸಿಎಎ ಸ್ಟಾರ್‌ವಾರ್‌

Last Updated 8 ಜನವರಿ 2020, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳ ಜತೆ ಬೀದಿಗಿಳಿದು ಪ್ರತಿಭಟಿಸಿದ ಕಾರಣ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಮತ್ತು ಡ್ರೀಮ್‌ಗರ್ಲ್‌ ಸಿನಿಮಾ ನಿರ್ದೇಶಕ ರಾಜ್‌ ಶಾಂಡಿಲ್ಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆದಿದೆ.

‘ಕಡಿಮೆ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸ್ವರಾ ಭಾಸ್ಕರ್‌ಗಿಂತ ಹೆಚ್ಚಿನ ಬೆಲೆಗೆ ದೈನಿಕ ಭಾಸ್ಕರ್‌ ಪತ್ರಿಕೆ ಮಾರಾಟವಾಗುತ್ತದೆ’ ಎಂಬ ಅವಹೇಳನಕಾರಿ ಹೇಳಿಕೆಯನ್ನು ಶಾಂಡಿಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಸ್ವರಾ ಕೂಡ ತಕ್ಕ ತಿರುಗೇಟು ನೀಡಿದ್ದಾರೆ. ‘ನಟಿಯರಿಗೆ ಪಾತ್ರದ ಆಫರ್ ಒಡ್ಡುವ ಮುನ್ನ ಮತ್ತು ನಿಮ್ಮ ಸಿನಿಮಾ ಟ್ರೇಲರ್‌ ಹಂಚಿಕೊಳ್ಳುವಂತೆ ಅಂಗಲಾಚಿ ಚಿತ್ರವಿಚಿತ್ರಸಂದೇಶ ಕಳಿಸುವ ಮುನ್ನ ನೀವೂ ಮತ್ತೊಮ್ಮೆ ಯೋಚಿಸಿ. ಗುಡ್‌ಲಕ್‌ ಸರ್‌’ ಎಂದು ಸ್ವರಾ ಕಾಲೆಳೆದಿದ್ದಾರೆ.

ಸ್ವರಾ ತಿರುಗೇಟು ನೀಡಿದ ಬೆನ್ನಲ್ಲೇ ರಾಜ್‌ ಶಾಂಡಿಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅನ್ನು ತೆಗೆದು ಹಾಕಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹೋರಾಟಕ್ಕಿಳಿದಿರುವ ಸ್ವರಾ ಬೆಂಬಲಕ್ಕೆ ಬಾಲಿವುಡ್‌ನ ಅನೇಕರು ನಿಂತಿದ್ದಾರೆ.

ಸಭೆಯತ್ತ ಸುಳಿಯದ ಸೆಲೆಬ್ರಿಟಿಗಳು
ವಿವಾದಿತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸುತ್ತ ಎದ್ದಿರುವ ವಿವಾದದ ಬಿರುಗಾಳಿಯನ್ನು ತಣ್ಣಗಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸಿಎಎ ಸತ್ಯ ಮತ್ತು ಮಿಥ್ಯಗಳ ಕುರಿತು ಮನವರಿಕೆ ಮಾಡಲು ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌ ಮುಂಬೈನಲ್ಲಿ ಬಾಲಿವುಡ್‌ ನಟ, ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರ ವಿಶೇಷ ಸಭೆ ಕರೆದಿದ್ದರು.

ವಿಶೇಷವೆಂದರೆ ಭಾನುವಾರವಾಗಿದ್ದರೂ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಈ ಸಭೆಯತ್ತ ತಲೆ ಹಾಕಲಿಲ್ಲ. ಮತ್ತೊಂದೆಡೆ ಸಿಎಎ ವಿರುದ್ಧ ಧ್ವನಿ ಎತ್ತಿ ಬೀದಿಗಿಳಿದು ಪ್ರತಿಭಟಿಸುತ್ತಿರುವ ನಟಿ ಸ್ವರಾ ಭಾಸ್ಕರ್‌, ನಿರ್ದೇಶಕ ಅನುರಾಗ್‌ ಕಶ್ಯಪ್‌, ಅನುಭವ್‌ ಸಿನ್ಹಾ ಅವರಿಗೆ ಆಹ್ವಾನ ಇರಲಿಲ್ಲ.

ಈ ಸಭೆಯಲ್ಲಿ ಕಾಣಿಸಿಕೊಂಡಿದ್ದು ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್‌ ಜೋಶಿ, ನಿರ್ಮಾಪಕರಾದ ರಾಹುಲ್‌ ರವೇಲ್‌, ಕುನಾಲ್ ಕೊಹ್ಲಿ, ಭೂಷಣ್‌ ಕುಮಾರ್‌, ಅನು ಮತ್ತು ಶಶಿ ರಂಜನ್‌. ನಿರ್ದೇಶಕ ಅಭಿಷೇಕ್‌ ಕಪೂರ್‌, ನಟರಾದ ರಣವೀರ್‌ ಶೋರೆ, ಶೈಲೇಶ್‌ ಲೋಧಾ, ಗಾಯಕ ಕೈಲಾಸ್‌ ಖೇರ್‌, ರೂಪ್‌ಕುಮಾರ್‌ ರಾಠೋಡ, ಶಾನ್ ಸಭೆಯಲ್ಲಿ ಕಂಡು ಬಂದರು. ಇನ್ನುಳಿದಂತೆ ನಿರ್ಮಾಪಕ ಜಿತೇಶ್‌ ಸಿದ್ವಾನಿ, ಗಾಯಕ, ಸಂಗೀತ ನಿರ್ದೇಶಕ ಅನು ಮಲ್ಲಿಕ್‌ 20 ನಿಮಿಷಗಳಲ್ಲಿ ಸಭೆಯಿಂದ ಹೊರ ನಡೆದರು.

ಸಭೆ ನಡೆಯುತ್ತಿದ್ದ ಹೋಟೆಲ್‌ ಹೊರಗಡೆ ಸಿಎಎ ವಿರುದ್ಧ ಗುಂಪೊಂದು ಪ್ರತಿಭಟನೆಯಲ್ಲಿ ತೊಡಗಿತ್ತು. ‘ನಿಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಬೇಡಿ’ ‘ಬಾಲಿವುಡ್‌ ನಿನ್ನ ನಡೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂಬ ಫಲಕಗಳು ಹೋಟೆಲ್‌ ಹೊರಗಡೆ ಕಂಡು ಬಂದವು.

ಆಹ್ವಾನ ಇದ್ದರೂಶಬಾನಾ ಅಜ್ಮಿ, ಜಾವೇದ್‌ ಮತ್ತು ಫರ್ಹಾನ್‌ ಅಖ್ತರ್‌, ರಿಚಾ ಛಡ್ಡಾ, ಕಬೀರ್‌ ಖಾನ್‌, ಕರಣ್‌ ಜೋಹರ್‌,ಪರಿಣೀತಿ ಚೋಪ್ರಾ, ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಭೆಯತ್ತ ಸುಳಿಯಲಿಲ್ಲ. ಇವರಲ್ಲಿ ಬಹುತೇಕರು ಕಾಯ್ದೆ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ. ‘ಈ ಸಭೆಯಿಂದ ಯಾವುದೇ ಪ್ರಯೋಜನ ಇಲ್ಲ’ ಎಂದು ಬಾಲಿವುಡ್‌ ಹೆಚ್ಚಿನ ಮಂದಿ ಆಮಂತ್ರಣ ನೀಡಲು ಹೋದವರ ಎದುರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT