3

ದ ಬಾಸ್‌ ಬೇಬಿ

Published:
Updated:
ದ ಬಾಸ್‌ ಬೇಬಿ

ಅದು ಶಿಶುಗಳನ್ನು ಭೂಮಿಗೆ ಕಳಿಸುವ ಮತ್ತು ಅವುಗಳ ಹಿತ ಕಾಯುವ ‘ಬೇಬಿ ಕಾರ್ಪೊರೇಷನ್’. ಅಲ್ಲಿರುವ ಎಲ್ಲರೂ ಶಿಶುಗಳೇ. ಆದರೆ ದೊಡ್ಡವರ ಧ್ವನಿಯಲ್ಲಿಯೇ ಮಾತನಾಡುತ್ತಾರೆ. ಯೋಚಿಸುತ್ತಾರೆ. ಕೆಲಸ ಮಾಡುತ್ತಾರೆ.

ಅಲ್ಲಿ ಈಗ ಹೊಸದೊಂದು ತಳಮಳ ಶುರುವಾಗಿದೆ. ಭೂಮಿಯ ಮೇಲೆ ಮನುಷ್ಯರೆಲ್ಲರೂ ತಮ್ಮ ಮಗುವಿಗಿಂತ ಹೆಚ್ಚಾಗಿ ನಾಯಿಮರಿಗಳನ್ನು ಪ್ರೀತಿಸುತ್ತಿದ್ದಾರೆ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಸಂಗತಿಯೇ ಆ ತಳಮಳಕ್ಕೆ ಕಾರಣ. ಶಿಶುಗಳ ಹಿತರಕ್ಷಣೆಗಾಗಿಯೇ ಇರುವ ಆ ಕಂಪನಿ ಇಂಥ ಸಂದರ್ಭದಲ್ಲಿ ಸುಮ್ಮನೇ ಕೈಕಟ್ಟಿ ಕುಳಿತಿರಲು ಸಾಧ್ಯವೇ? ಈ ಬದಲಾವಣೆಗೆ ಕಾರಣ ಏನು ಎಂದು ತಿಳಿದುಬರಲು ತಮ್ಮ ಪ್ರತಿನಿಧಿಯನ್ನು ಭೂಮಿಗೆ ಕಳಿಸುತ್ತವೆ. ಆ ಪ್ರತಿನಿಧಿಯೂ ಶಿಶುವೆ. ಅವನು ಟಿಮ್‌ ಎಂಬ ಬಾಲಕನ ಮನೆಯಲ್ಲಿ ಹುಟ್ಟುತ್ತಾನೆ. ಟಿಮ್‌ ನಮ್ಮ ಕಥಾನಾಯಕ. ಅವನಿಗೆ ಆ ಶಿಶುವನ್ನು ಕಂಡರೆ ಅಸಡ್ಡೆ. ಅಪ್ಪ– ಅಮ್ಮ ಅವನ ಮೇಲೆಯೇ ಹೆಚ್ಚು ಗಮನ ಕೊಡುತ್ತಾರೆಂದು ಹೊಟ್ಟೆಕಿಚ್ಚು. ಒಂದು ದಿನ ಅವನು ಬರೀ ಶಿಶುವಲ್ಲ, ದೊಡ್ಡವರ ರೀತಿ ಮಾತನಾಡುವ ಶಕ್ತಿ ಇದೆ ಎನ್ನುವುದು ಟಿಮ್‌ಗೆ ತಿಳಿಯುತ್ತದೆ. ಮುಂದೆ ಏನಾಗುತ್ತದೆ? ತಿಳಿಯಲು ‘ದ ಬಾಸ್‌ ಬೇಬಿ’ ಆ್ಯನಿಮೇಷನ್ ಚಿತ್ರವನ್ನು ನೋಡಬೇಕು.

ಹೊಸ ಕಾಲದ ಮಕ್ಕಳಿಗೆ ಕಥೆ ಹೇಳಲು ಆ್ಯನಿಮೇಷನ್‌ ಸಿನಿಮಾಗಳು ಬಹುಪರಿಣಾಮಕಾರಿ ಮತ್ತು ಅಷ್ಟೇ ಜನಪ್ರಿಯ ಮಾಧ್ಯಮ. ಇಂದು ಆ್ಯನಿಮೇಷನ್‌ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯೇ ಇದೆ. ಮತ್ತು ಆ ಕ್ಷೇತ್ರದಲ್ಲಿ ಹಲವು ಬಗೆಯ ಪ್ರಯೋಗಗಳು ನಡೆಯುತ್ತಿವೆ. ‘ದ ಬಾಸ್‌ ಬೇಬಿ’ ಕೂಡ ಇಂಥ ಒಂದು ಆ್ಯನಿಮೇಷನ್ ಚಿತ್ರ.

ಅಮೆರಿಕದಲ್ಲಿ ಟಾಮ್‌ ಮೆಗ್ರಾತ್‌ ನಿರ್ದೇಶಿಸಿದ ಈ ಚಿತ್ರ ತೆರೆಗೆ ಬಂದಿದ್ದು 2017ರಲ್ಲಿ. ಡ್ರೀಂ ವರ್ಕ್‌ ಆ್ಯನಿಮೇಷನ್‌ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಇದು 2010ರಲ್ಲಿ ಮಾರ್ಲಾ ಫ್ರಾಂಜಿ ಎಂಬ ಲೇಖಕಿ ಬರೆದಿರುವ ಕೃತಿಯನ್ನು ಆಧರಿಸಿದ ಸಿನಿಮಾ. 

ನವಿರು ಹಾಸ್ಯ, ಸೊಗಸಾದ ಆ್ಯನಿಮೇಟೆಡ್‌ ಪಾತ್ರಗಳು, ಸಮರ್ಥ ಹಿನ್ನೆಲೆ ಸಂಗೀತ ಇವುಗಳಿಂದ ಪುಟಾಣಿಗಳ ಮೈಮರೆಸಬಲ್ಲ ಈ ಚಿತ್ರವನ್ನು ಹಿರಿಯರೂ ನೋಡಿ ಖುಷಿಪಡಬಹುದು. ಮೇಲ್ನೋಟಕ್ಕೆ ನಕ್ಕು ನಗಿಸುವ ಹಾಸ್ಯ ಚಿತ್ರದಂತೆ ಕಂಡರೂ ಆಳದಲ್ಲಿ ಬದಲಾಗುತ್ತಿರುವ ಮನುಷ್ಯ ಸಂಬಂಧಗಳ ಸ್ವರೂಪಗಳನ್ನು ಕಟ್ಟಿಕೊಡುವ ಪ್ರಯತ್ನವೂ ಇದೆ. 

ಈ ಚಿತ್ರವನ್ನು ಅಂತರ್ಜಾಲದಲ್ಲಿ https://bit.ly/2IKV0yp ಕೊಂಡಿ ಬಳಸಿ ವೀಕ್ಷಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !