ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ನಿಂದ ಬಾಲಿವುಡ್‌ಗೆ

Last Updated 17 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಬ್ರೂನಾ ಅಬ್ದುಲ್ಲಾ, ತೆರೆದೆದೆಯ ಸುಂದರಿ. ತನ್ನ ಎದೆಗಾರಿಕೆಯಿಂದಲೇ ಪಡ್ಡೆ ಹುಡುಗರ ಕಣ್ಮಣಿಯಾದಾಕೆ. ಸಮುದ್ರಕ್ಕೂ, ಬಿಕಿನಿಗೂ ಬ್ರೂನಾಗೂ ಅತೀ ಸಮೀಪದ ನಂಟು. ಬ್ರೆಜಿಲ್‌ನ ಈ ಸುಂದರಿಗೆ ವಸ್ತ್ರವೈರಾಗ್ಯ ಒಂಚೂರು ಹೆಚ್ಚಾಗಿಯೇ ಇದೆ. ಇಂತಿಪ್ಪ ಬ್ರೂನಾ ಬಾಲಿವುಡ್‌ ಅಂಗಳದಲ್ಲಿ ಒಂದಷ್ಟು ಸಿನಿಮಾಗಳನ್ನೂ ಮಾಡಿ ಮಿಂಚಿದ್ದಾರೆ. ಬ್ರೆಜಿಲ್‌ನಿಂದ ಬೆಕ್ಕಿನ ನಡಿಗೆಯಲ್ಲಿ ಬಂದಿರುವ ಈ ಸುಂದರಿ ಈಚೆಗೆ ಬೆಂಗಳೂರಿಗೂ ಬಂದಿದ್ದರು. ಈ ಸಂದರ್ಭದಲ್ಲಿ ಪ್ರಜಾವಾಣಿಯೊಂದಿಗೆ ಅವರು ಮಾತನಾಡಿದರು.

* ಬೆಂಗಳೂರು ಹೇಗನಿಸುತ್ತಿದೆ?
ಒಂದು ಮಾತಿನಲ್ಲಿ ಹೇಳುವುದಾದರೆ ಬೆಂಗಳೂರು ಸೂಪರ್‌. ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಇದು ನನ್ನ ಅಚ್ಚುಮೆಚ್ಚಿನ ಎರಡನೇ ನಗರ.

* ಹಾಗಾದರೆ ಮೊದಲ ನಗರ ಯಾವುದು?
ಮುಂಬೈ. ಯಾಕೆಂದರೆ ನಾನು ನನ್ನ ವೃತ್ತಿಜೀವವನ್ನು ಆರಂಭಿಸಿದ್ದು ಅಲ್ಲೇ. ನನ್ನ ಬದುಕು ಕಂಡುಕೊಂಡಿದ್ದೂ ಅಲ್ಲೇ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಮನೆಮಾಡಿಕೊಂಡು ವಾಸಿಸುತ್ತಿರುವುದೂ ಅಲ್ಲೇ. ಈ ಕಾರಣಗಳಿಗಾಗಿಯೇ ಆ ನಗರದೊಂದಿಗೆ ವಿಶೇಷ ಅನುಬಂಧ ಬೆಳೆಸಿಕೊಂಡಿದ್ದೇನೆ.

* ನೀವು ಬ್ರೆಜಿಲ್‌ನವರು. ಪಶ್ಚಿಮದಿಂದ ಪೂರ್ವಕ್ಕೆ ಹೇಗೆ ಬಂದಿರಿ?
ಚಿಕ್ಕಂದಿನಿಂದಲೂ ಮಾಡೆಲಿಂಗ್‌ ಎಂದರೆ ವಿಪರೀತ ಹುಚ್ಚು. ಸುಮಾರು 11 ವರ್ಷಗಳ ಹಿಂದೆ ದೊಡ್ಡ ಕನಸು ಹೊತ್ತು ಮುಂಬೈಗೆ ಬಂದೆ. ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದೆ.

* ಬಾಲಿವುಡ್‌ಗೆ ಹೋದದ್ದು ಹೇಗೆ?
ನಾನು ಬಾಲಿವುಡ್‌ ಪ್ರವೇಶಿಸುವುದಕ್ಕೂ ಮಾಡೆಲಿಂಗ್ ಕಾರಣ. 2007ರಲ್ಲಿ, ನಿರ್ದೇಶಕ ಅನುಭವ್ ಸಿನ್ಹಾ, ತಮ್ಮ ಕ್ಯಾಶ್ ಚಿತ್ರದಲ್ಲಿ ಐಟಂ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕುವುದಕ್ಕೆ ಅವಕಾಶ ನೀಡಿದರು. ಆದಾದ ನಂತರ ಐ ಹೇಟ್ ಲವ್ ಸ್ಟೋರಿ, ದೇಸಿ ಬಾಯ್ಸ್‌, ಗ್ರ್ಯಾಂಡ್ ಮಸ್ತಿಯಂತಹ ಚಿತ್ರಗಳಲ್ಲಿ ನಟಿಸಿದೆ, ಹೀಗೆ ಸಾಲು ಸಾಲಾಗಿ ಅವಕಾಶಗಳು ಹುಡುಕಿಕೊಂಡು ಬಂದವು.

* ನೀವು ಕೊಲಿವುಡ್‌ನ ಬಿಲ್ಲಾ–2 ಚಿತ್ರದಲ್ಲಿ ನಟಿಸಿದ್ದೀರಿ. ಕನ್ನಡದಲ್ಲೂ ನಟಿಸುವ ಸಾಧ್ಯತೆಗಳು ಇವೆಯಾ?
ಖಂಡಿತವಾಗಿಯೂ ನಟಿಸುತ್ತೇನೆ. ಚಂದನವನದಲ್ಲೂ ಬಣ್ಣ ಹಚ್ಚಬೇಕೆಂಬ ಆಸೆ ಇದೆ. ಅವಕಾಶಗಳಿಗಾಗಿ ಕಾಯುತ್ತಿದ್ದೇನೆ.

* ಕನ್ನಡ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಿಜ ಹೇಳ್ತಿನಿ ಸ್ಯಾಂಡಲ್‌ವುಡ್‌ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿಲ್ಲ. ಇಲ್ಲಿನ ಚಿತ್ರರಂಗದ ವಾತಾವರಣ, ನಟರು ಯಾರೂ ನನಗೆ ಗೊತ್ತಿಲ್ಲ. ದಯವಿಟ್ಟು ಕ್ಷಮಿಸಿ.

* ಹದಿಮೂರು ವರ್ಷದಿಂದ ಮುಂಬೈನಲ್ಲಿ ಇದ್ದೀರಿ, ಹಿಂದಿ ಕಲಿತರೆ?
ಈಗ ಪರವಾಗಿಲ್ಲ. ಸ್ವಲ್ಪ ಮಟ್ಟಿಗೆ ಮಾತನಾಡುತ್ತೇನೆ. ಸ್ನೇಹಿತರೆಲ್ಲ ನಿನ್ನ ಹಿಂದಿ ಚೆನ್ನಾಗಿದೆ ಅಂತಾರೆ. ಖುಷಿಯಾಗುತ್ತೆ.

* ಮೀ ಟೂ ಬಗ್ಗೆ ಏನು ಹೇಳುತ್ತೀರಿ?
ಈ ಪ್ರಶ್ನೆಯನ್ನ ಕೇಳಲೇ ಬೇಡಿ, ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ.

* ಎಂಟು ವರ್ಷದಿಂದ ಬಾಲಿವುಡ್‌ನಲ್ಲಿ ಇದ್ದೀನಿ ಅಂತ ಹೇಳಿದಿರಿ. ನಿಮಗೆ ಏನೂ ಗೊತ್ತಿಲ್ಲ ಅಂದ್ರೆ ಹೇಗೆ?
ಹೌದು ಇದ್ದೀನಿ ನಿಜ. ಆದರೆ ಈವರೆಗೆ ಯಾರೂ ನನಗೆ ಲೈಂಗಿಕ ಕಿರುಕುಳ ನೀಡಿಲ್ಲ. ಅಂತಹ ಸಮಸ್ಯೆಗಳನ್ನು ಎಂದೂ ಎದುರಿಸಿಲ್ಲ. ಈ ಬಗ್ಗೆ ಏನು ಹೇಳಲಿ?

* ಸೌಂದರ್ಯ ಸಿರಿ ಪ್ರದರ್ಶಿಸುವಂತಹ ಪಾತ್ರಗಳಲ್ಲೇಹೆಚ್ಚಾಗಿ ನಟಿಸಿದ್ದೀರಿ. ಭಿನ್ನ ಪಾತ್ರಗಳಲ್ಲಿ ಕಾಣಿಸಲು ಇಷ್ಟವಿಲ್ಲವೆ?
ಭಿನ್ನವಾದ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಆದರೆ ಗ್ಲಾಮರಸ್ ಪಾತ್ರಗಳೇ ಹುಡುಕಿಕೊಂಡು ಬರುತ್ತಿವೆ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ.

* ನಾಯಕಿ ಪ್ರಧಾನವಾಗಿರುವ ಚಿತ್ರಗಳಲ್ಲಿ ನಟಿಸುವ ಆಸೆ ಇದೆಯೇ?
ಅಂತಹ ಆಸೆ ಇಲ್ಲ. ಚಿತ್ರದ ಕಥೆ ಚೆನ್ನಾಗಿದ್ದು, ಪಾತ್ರ ಇಷ್ಟವಾದರೆ ಸಾಕು ಬಣ್ಣ ಹಚ್ಚುತ್ತೇನೆ.

* ನಿಮ್ಮ ಫಿಟ್‌ನೆಸ್‌ ಗುಟ್ಟೇನು?
ಇಷ್ಟವಾದುದನ್ನು ಮಿತವಾಗಿ ತಿನ್ನುತ್ತೇನೆ. ತಪ್ಪದೇ ಜಿಮ್‌ನಲ್ಲಿ ಬೆವರು ಹರಿಸುತ್ತೇನೆ. ಆರೋಗ್ಯದ ಕಾಳಜಿಯೂ ಹೆಚ್ಚಾಗಿದೆ.

* ನೀವು ಗಮನಿಸಿರುವಂತೆ ಬಾಲಿವುಡ್‌ನಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ.
ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಇದ್ದದ್ದೇ. ಬದಲಾವಣೆಗೆ ಒಗ್ಗಿಕೊಂಡು ಹೋಗುತ್ತಿರುವುದರಿಂದ ಏನು ಅನ್ನಿಸುತ್ತಿಲ್ಲ. ಒಂದು ವಿಷಯ ಹೇಳುವುದಾದರೆ, ಹೊಸ ಕಲಾವಿದರು ಹೆಚ್ಚಾಗಿ ಬರುತ್ತಿದ್ದಾರೆ. ಅವರಿಗೂ ಅವಕಾಶ ಮಾಡಿಕೊಡಬೇಕು.

* ಅವಕಾಶಗಳು ಹೇಗಿವೆ?
ಸದ್ಯಕ್ಕಂತೂ ಅವಕಾಶಗಳಿಗೆ ಕೊರತೆ ಇಲ್ಲ. ಕೆಲಸ ಚೆನ್ನಾಗಿಯೇ ನಡೆಯುತ್ತಿದೆ. ಹೀಗೆ ಇದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT