ಭಾನುವಾರ, ಮಾರ್ಚ್ 29, 2020
19 °C

ಸೆಲೆಬ್ರಿಟಿ ನಂಜಿಯಮ್ಮ

ಕೃಷ್ಣಕುಮಾರ್ ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಜನಪದ ಕಲಾವಿದೆ, ಹಾಲಕ್ಕಿ ಸಮುದಾಯದ ಸುಕ್ರಿ ಬೊಮ್ಮಗೌಡ ಎಲ್ಲರಿಗೂ ಚಿರಪರಿಚಿತ. ಜನಪದ ಗಾಯನದಲ್ಲಿ ಸುಕ್ರಜ್ಜಿಯನ್ನು ಹೋಲುವಂತಹ ಗುಡ್ಡಗಾಡಿನ ಪ್ರತಿಭೆಯೊಂದು ಕೇರಳದ ವಯನಾಡಿನಲ್ಲೂ ಇದೆ. ಅವರ ಹೆಸರೇ ನಂಜಿಯಮ್ಮ.

‘ಅಯ್ಯಪ್ಪನೂ ಕೋಶಿಯುಂ' ಚಿತ್ರದಲ್ಲಿ ಮೂರು ಸೂಪರ್ ಹಿಟ್ ಹಾಡುಗಳನ್ನು ಈ ನಂಜಿಯಮ್ಮ ಹಾಡಿದ್ದಾರೆ.

ಇವರ ವಯಸ್ಸು 60 ವರ್ಷ! ಇವರು, ಈ ಚಿತ್ರದಲ್ಲಿ ಹಾಡುವವರೆಗೆ ಒಮ್ಮೆಯೂ ಕ್ಯಾಮೆರಾ ಎದುರಿಸಿದವರಲ್ಲ. ಈಗ, ಕಥಾನಾಯಕಿಯ ಅಮ್ಮನ ಪಾತ್ರದಲ್ಲಿಯೂ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕುತೂಹಲದ ಸಂಗತಿಯೆಂದರೆ, ಚಿತ್ರದ ನಾಯಕ ಯಾರು ಎನ್ನುವುದು ಆ ಅಜ್ಜಿಗೆ ಗೊತ್ತಿರಲಿಲ್ಲ.

ಹೊಸತನಕ್ಕೆ ಯತ್ನಿಸುವ, ಪ್ರಯೋಗಶೀಲತೆಗೆ ತುಡಿಯುವ ಮಲಯಾಳ ಸಿನಿಮಾ ರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ‘ಅಯ್ಯಪ್ಪನೂ ಕೋಶಿಯುಂ’. ಇದು, 60 ವರ್ಷ ವಯಸ್ಸಿನ ನಂಜಿಯಮ್ಮ ಅವರ ಕಾರಣದಿಂದಾಗಿ ಸುದ್ದಿ ಮಾಡಿತು. ವಯನಾಡು ಜಿಲ್ಲೆಯ ಅಟ್ಟಪ್ಪಾಡಿಯ ಸಾಮಾನ್ಯರಂತೆ ಕೃಷಿ, ಹೈನುಗಾರಿಕೆ ಮಾಡಿಕೊಂಡು ಇದ್ದ ನಂಜಿಯಮ್ಮ ತನ್ನ ಹಿರಿಯರಿಂದ ಬಂದ ಕೆಲವು ಜನಪದ ಹಾಡುಗಳನ್ನು ಹಾಡುತ್ತಿದ್ದರು. ನಿರ್ದೇಶಕ ಸಚ್ಚಿ ಹಾಗೂ ಸಂಗೀತ ನಿರ್ದೇಶಕ ಜೇಕ್ಸ್ ಬಿಜೋಯ್‌ ಅವರ ಕಣ್ಣಿಗೆ ಬಿದ್ದ ನಂಜಿಯಮ್ಮ ಅವರ ಹಾಡು ಸಿನಿಮಾದಲ್ಲಿ ಟೈಟಲ್‌ ಸಾಂಗ್‌ ಆಗಿ ಸ್ಥಾನ ಗಿಟ್ಟಿಸಿಕೊಂಡಿತು. ಅಷ್ಟೇ ಅಲ್ಲ, ಚಿತ್ರದ ಬಿಡುಗಡೆಗೆ ಮುನ್ನವೇ ಮಲಯಾಳ ಸಿನಿಮಾ ಪ್ರೇಕ್ಷರ ಹೃದಯ ಗೆದ್ದಿತು.

ಸಚ್ಚಿ ಅವರ ಚಿತ್ರದಲ್ಲಿ ಇರುವುದು ವಯನಾಡಿನ ಅಟ್ಟಪ್ಪಾಡಿ ಸ್ಥಳದಲ್ಲಿ ನಡೆಯುವ ಕಥೆ. ಇದಕ್ಕೆ ಅವರು ಒಂದು ಹೊಸ ದನಿಯ ಹುಡುಕಾಟದಲ್ಲಿದ್ದರು. ನಂಜಿಯಮ್ಮನ ಹಾಡುಗಳನ್ನು ಕೇಳಿ ಅವರನ್ನು ಸ್ಟುಡಿಯೋಗೆ ಕರೆಸಿದರು. ನಂತರ ಅವರಿಂದ ಒಂದು ಹಾಡನ್ನು ಹಾಡಿಸಿ ನಾಯಕ ನಟ ಪೃಥ್ವಿರಾಜ್‌ ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಲಾಯಿತು. ಆ ಹಾಡನ್ನು ಕೇಳಿದ ಅವರು ‘ಇದನ್ನು ನೀವು ಈ ಚಿತ್ರದಲ್ಲಿ ಬಳಸುವುದಿಲ್ಲ ಎಂದಾದರೆ ನಾನು ಈ ಹಾಡನ್ನು ಕೊಂಡುಕೊಳ್ಳುತ್ತೇನೆ’ಎಂದು ಹೇಳಿದರು!

ಇದರಿಂದ ಉತ್ಸಾಹಗೊಂಡ ಸಂಗೀತ ನಿರ್ದೇಶಕ ಜೇಕ್ಸ್ ಬಿಜೋಯ್ ನಂಜಿಯಮ್ಮ ಅವರೇ ರಚಿಸಿರುವ ಹಾಡುಗಳನ್ನು ಚಿತ್ರಕ್ಕಾಗಿ ಹಾಡಿಸಿದರು. ನಂಜಿಯಮ್ಮನ ಜೊತೆಯಲ್ಲಿ ಜನಪದ ವಾದ್ಯಗಳನ್ನು ನುಡಿಸುತ್ತಿದ್ದ ಸಹಕಲಾವಿದರನ್ನು ಇದರಲ್ಲಿ ಬಳಸಲಾಯಿತು. ಇದು ಈ ಚಿತ್ರದ ನೇಟಿವಿಟಿಗೆ ಪೂರಕವಾಗಿ ಕೆಲಸ ಮಾಡಿತು.

ಸಿನಿಮಾದ ಟೈಟಲ್‌ ಹಾಡು ‘ಕಲಕಾತ ಸಂದನ ಮರಂ ವೇಗು ವೇಗ ಪೂತಿರಿಕ... ಪೂ ಪರಿಕ್ಕಾನ್ ಪೋಕಿಲಾಮೋ ವಿಮಾನತ್ತೆ ಪಾಕಿಲಾಮೋ’ (ಪೂರ್ವದಲ್ಲಿರವ ಚಂದನ ಮರ ಹೂ ಬಿಟ್ಟಿದೆ... ನಾವು ಹೋಗಿ ಹೂ ಕೀಳೊಣ ಮತ್ತು ಆಕಾಶದಲ್ಲಿ ವಿಮಾನ ನೋಡೋಣ) ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡಿತು.

ಇಷ್ಟೆಲ್ಲ ಆದರೂ, ‘ಪೃಥ್ವಿರಾಜ್, ಬಿಜು ಮೆನನ್‌ ಗೊತ್ತಾ’ ಎಂದು ಸಿನಿಮಾ ಬಿಡುಗಡೆಗೂ ಮುನ್ನ ಪ್ರಶ್ನಿಸಿದರೆ ನಂಜಿಯಮ್ಮ ಅವರು, ಮುಗ್ಧ ನಗುವಿನೊಂದಿಗೆ ಸಣ್ಣದಾಗಿ ಒಂದು ಪದದಲ್ಲಿ ‘ಗೊತ್ತಿಲ್ಲ’ ಎಂದು ಉತ್ತರ ನೀಡಿದ್ದರು. ಈಗ ಸಿನಿಮಾ ಕೂಡ ಹಿಟ್‌ ಆಗಿದೆ. ಜೊತೆಗೆ, ವಯನಾಡಿನ ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನು ಹಾಡು ಹಾಡುತ್ತಿದ್ದ ನಂಜಿಯಮ್ಮ ಹೊರ ಜಗತ್ತಿಗೆ ಸೆಲೆಬ್ರೆಟಿ ಆಗಿ ಹೊರಹೊಮ್ಮಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)