ತುಳುನಾಡಿನ ಪ್ರಮುಖ ಹಬ್ಬಗಳಲ್ಲೊಂದು ‘ಮಾರ್ನಮಿ’. ದುಷ್ಟಶಕ್ತಿಯ ಸಂಹಾರದ ಪ್ರತೀಕವಾದ ಈ ಹಬ್ಬವನ್ನೇ ಶೀರ್ಷಿಕೆಯಾಗಿಸಿಕೊಂಡು ಚಿತ್ರವೊಂದು ಸೆಟ್ಟೇರುತ್ತಿದೆ. ಕಿರುತೆರೆ ನಟ ರಿತ್ವಿಕ್ ಹಾಗೂ ಚೈತ್ರಾ ಜೆ. ಆಚಾರ್ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ರಿಶಿತ್ ಶೆಟ್ಟಿ ಚೊಚ್ಚಲ ನಿರ್ದೇಶನದ ಚಿತ್ರವಿದು.
‘ಒಂದಷ್ಟು ಸಿನಿಮಾಗಳಲ್ಲಿ ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವೆ. ಕರಾವಳಿ ಭಾಗದ ಹುಲಿವೇಷ, ಆಚರಣೆಗಳ ಜೊತೆಗೆ ಪ್ರೇಮಕಥೆಯನ್ನು ಹೊಂದಿರುವ ಚಿತ್ರವಿದು. ಟೈಟಲ್ ಟೀಸರ್ ಮಾಡಿದ್ದೇವೆ. ಅಕ್ಟೋಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಮಂಗಳೂರು ಸುತ್ತ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು ರಿಶಿತ್ ಶೆಟ್ಟಿ.
ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ‘ಹೊಸ ತಂಡ, ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರು ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆಯ ಅವಕಾಶ ಇದೆ ಎನಿಸಿತು. ಸಂಗೀತದ ಕೆಲಸ ಶುರು ಮಾಡಿದ್ದೇನೆ. ಐದು ಹಾಡುಗಳು ಇರಲಿವೆ’ ಎಂದರು.
ನಿಶಾಂತ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಚಿತ್ರಗ್ರಹಣವಿದೆ.