ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಚಂದನವನದ ‘ಹಾಸ್ಯ ಚಕ್ರವರ್ತಿ’ ನರಸಿಂಹರಾಜು ಜನ್ಮಶತಮಾನೋತ್ಸವ

ತಿಪಟೂರಿನಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ
Published 24 ಜುಲೈ 2023, 5:55 IST
Last Updated 24 ಜುಲೈ 2023, 5:55 IST
ಅಕ್ಷರ ಗಾತ್ರ

ಸುಪ್ರತೀಕ್ ಎಚ್.ಬಿ.

ತಿಪಟೂರು: ಕನ್ನಡ ಚಿತ್ರರಂಗದ ‘ಚಾರ್ಲಿ ಚಾಪ್ಲಿನ್‌’ ತಮ್ಮ ಆಂಗಿಕ ಅಭಿನಯದಿಂದಲೇ ಪ್ರೇಕ್ಷಕರ ಮನಸೂರೆಗೊಂಡ ಹಾಸ್ಯ ನಟ ಟಿ.ಆರ್.ನರಸಿಂಹರಾಜು ಅವರ ಜನ್ಮಶತಮಾನೋತ್ಸವ ನಗರದಲ್ಲಿ ಇಂದು ಅದ್ದೂರಿಯಾಗಿ ನಡೆಯಲಿದೆ.

ತಿಪಟೂರಿನಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮ ದಂಪತಿ ಮಗನಾಗಿ ಜನಸಿದ ನರಸಿಂಹರಾಜು ಬಾಲ್ಯದಿಂದಲೇ ನಟನೆಯತ್ತ ಒಲವು ಬೆಳೆಸಿಕೊಂಡವರು. ಸಿ.ಬಿ.ಮಲ್ಲಪ್ಪ ಅವರ ಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಳ್ಳುವ ನರಸಿಂಹರಾಜು, ನಟನೆಯ ಜೊತೆಯಲ್ಲಿಯೇ ಶಿಕ್ಷಣ ಪಡೆದರು.

ಕುಳ್ಳಗೆ ಸಣ್ಣಗಿನ ಕೋಲು ಮುಖ, ಉಬ್ಬು ಹಲ್ಲು ಹೊಂದಿದ್ದ ಅವರ ಶರೀರ ಮತ್ತು ಆಂಗಿಕ ಶೈಲಿ ಹಾಸ್ಯಪಾತ್ರಕ್ಕೆ ಹೆಚ್ಚು ಒಗ್ಗುತ್ತಿತ್ತು. ಅವರು ರಂಗಸ್ಥಳದ ಮೇಲೆ ಬಂದರೆ ಸಾಕು ಪ್ರೇಕ್ಷಕರು ನಗಿಸುತ್ತಿದ್ದರಿಂದ ಬೇಗನೆ ಪ್ರಖ್ಯಾತಿ ಪಡೆದರು.

ಚಂದ್ರಮೌಳೀಶ್ವರ ನಾಟಕ ಸಭಾದಿಂದ ಆರಂಭವಾದ ಅವರ ರಂಗಭೂಮಿ ವೃತ್ತಿ ಜೀವನ ನಂತರ ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿ ಹೀಗೆ ಹತ್ತು, ಹಲವು ಕಂಪನಿಗಳಲ್ಲಿ ಸಾವಿರಾರು ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 25 ವರ್ಷ ಕಳೆದರು.

ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ತಮ್ಮ ಆಭಿನಯ ಕೌಶಲದಿಂದ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆದರು. ದೊಡ್ಡ ದೊಡ್ಡ ಪಾತ್ರಗಳಿಗೆ ಬಡ್ತಿ ಪಡೆದರು. ವರನಟ ರಾಜಕುಮಾರ್ ಜೊತೆ ನರಸಿಂಹರಾಜು ಅವರೂ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ಮದ್ರಾಸಿನಲ್ಲಿ ಕೇಂದ್ರೀಕೃತವಾಗಿದ್ದ ಕನ್ನಡ ಚಿತ್ರರಂಗ 60ರ ದಶಕದಲ್ಲಿ ಕನ್ನಡ ಚಿತ್ರಗಳೂ ಸರಿಯಾಗಿ ಪ್ರದರ್ಶನವಾಗದೆ ಚಿತ್ರರಂಗವನ್ನೇ ನಂಬಿದ್ದ ನೂರಾರು ಕಲಾವಿದರಿಗೆ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಇಂತಹ ಸ್ಥಿತಿಯಲ್ಲಿ ರಾಜ್‌ಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ. ಐಯ್ಯರ್ ಜೊತೆಗೂಡಿ ತಮ್ಮದೇ ಆದ ಒಂದು ನಾಟಕ ಕಂಪನಿ ಆರಂಭಿಸಿ, ರಾಜ್ಯದಾದ್ಯಂತ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕ ಪ್ರದರ್ಶಿಸಿದರು.

ಮದ್ರಾಸಿನಿಂದ ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆ ಬೆಂಗಳೂರಿಗೆ ಸ್ಥಳಾಂತರವಾದಾಗ, ಎಲ್ಲರಂತೆ ನರಸಿಂಹರಾಜು ಅವರೂ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ತಿಪಟೂರಿನ ನಾಟಕದ ಕ್ಯಾಂಪ್‌ನಲ್ಲಿ ಅವರ ಮಕ್ಕಳೆಲ್ಲರೂ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಅವರ ಮಗ ಶ್ರೀಕಾಂತ ಬೆಂಕಿಯ ಅಪಘಾತಕ್ಕೀಡಾಗುತ್ತಾನೆ. ಅದು ನರಸಿಂಹರಾಜು ಅವರ ಮೇಲೆ ಅಗಾಧ ಪರಿಣಾಮ ಬೀರಿತ್ತು. 1979ರ ಜುಲೈ 20ರಂದು ತಮ್ಮ 56ನೇ ವಯಸ್ಸಿಗೆ ಹೃದಯಾಘಾತದಿಂದ ನರಸಿಂಹರಾಜು ನಿಧನರಾದರು.

ನರಸಿಂಹರಾಜು ಅವರ ನೆನಪು ಸದಾಕಾಲ ಉಳಿಯುವಂತೆ ಮಾಡಲು ನಗರದಲ್ಲಿ ಸರಸಿಂಹರಾಜು ಭವನ ನಿರ್ಮಾಣವಾದರೂ ಸರ್ಕಾರದಿಂದ ಯಾವುದೇ ಮನ್ನಣೆ ದೊರಕಿಲ್ಲ. ಶತಮಾನೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT