ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ

ಸೋಮವಾರ, ಮೇ 27, 2019
23 °C

ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ

Published:
Updated:

ಚಿತ್ರ: ಕೆಮಿಸ್ಟ್ರಿ ಆಫ್ ಕರಿಯಪ್ಪ
ನಿರ್ದೇಶಕರು: ಕುಮಾರ್
ನಿರ್ಮಾಪಕರು: ಮಂಜುನಾಥ್ ಡಿ.ಎಸ್.
ತಾರಾಗಣ: ಚಂದನ್ ಆಚಾರ್, ತಬಲಾ ನಾಣಿ, ಸಂಜನಾ ಆನಂದ್, ಅಪೂರ್ವ, ರಾಕ್‌ಲೈನ್ ಸುಧಾಕರ್

ನೈಜ ಕಥೆಯಾಧರಿಸಿ ಸಿನಿಮಾ ನಿರ್ಮಾಣವಾಗುತ್ತಿರುವುದು ಈಗ ಸಾಮಾನ್ಯವಾಗಿದೆ. ಕನ್ನಡದಲ್ಲೂ ಇಂಥ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಆದರೆ ಸಣ್ಣ ಕುಟುಂಬವೊಂದರಲ್ಲಿ ನಡೆದ ಘಟನೆಯನ್ನು ಸಿನಿಮಾ ರೂಪಕ್ಕಿಳಿಸುವ ಸವಾಲಿನ ಕೆಲಸವನ್ನು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಿರ್ದೇಶಕ ಕುಮಾರ್ ಮಾಡಿದ್ದಾರೆ.

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ವಿವಾಹ ವಿಚ್ಛೇದನ ಹೇಗೆ ಸಾಮಾನ್ಯವಾಗಿದೆ ಮತ್ತು ಗಂಡ-ಹೆಂಡತಿ ಬೇರೆಯಾಗಲು ಕ್ಷುಲ್ಲಕ ಕಾರಣಗಳೇ ಸಾಕು ಎಂಬುದನ್ನು ತೋರಿಸಿಕೊಡುವ ಮೂಲಕ ಇದು ಕುಟುಂಬದ ಮೇಲೆ ಬೀರುವ ಪರಿಣಾಮವನ್ನೂ ಪರಿಣಾಮಕಾರಿಯಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಬೆಂಗಳೂರಿಗೆ ಬಂದು ನೆಲೆಸಿರುವ ಮಂಡ್ಯದ ಕುಟುಂಬವೊಂದು ತಮ್ಮ ಮಗನಿಗೆ ಹೆಣ್ಣು ಹುಡುಕಲು ಪಡಿಪಾಟಲು ಪಡುತ್ತಿರುತ್ತದೆ. ಮದುವೆ ವಯಸ್ಸು ಮೀರಿದರೂ ಹೆಣ್ಣು ಸಿಗದೆ ಹತಾಶನಾಗುವ ನಾಯಕನಿಗೆ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಮುಂದೆ ಅವರು ಪರಸ್ಪರ ಪ್ರೀತಿಸಿ, ಮದುವೆಯಾಗಲು ತೀರ್ಮಾನಿಸುತ್ತಾರೆ. ಮನೆಯವರೇ ಅವರಿಬ್ಬರ ಮದುವೆ ಮಾಡಿಕೊಡುತ್ತಾರೆ. ಅನಂತರ ಅವರ ಜೀವನ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಹೀಗೆ ಹಳಿತಪ್ಪಿದ ಮಗನ ಬದುಕನ್ನು ಸರಿಪಡಿಸಲು ಹವಣಿಸುವ ಕುಟುಂಬದ ಕಥಾನಕವೇ ಈ ಚಿತ್ರದ ಕಥಾ ಹಂದರ.

ಪತಿ, ಪತ್ನಿ, ಮಗ ಮತ್ತು ಸೊಸೆ ಈ ನಾಲ್ವರನ್ನು ಕೇಂದ್ರೀಕರಿಸಿ ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಹಾಸ್ಯದ ಜೊತೆ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಬಲಾ ನಾಣಿ ಅವರು ಪ್ರೇಕ್ಷಕರ ಮನಗೆಲ್ಲುತ್ತಾರೆ. ಮಗನ ಪಾತ್ರದಲ್ಲಿ ನಟಿಸಿರುವ ನಾಯಕ ಚಂದನ್ ಕೂಡ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿ ಸಂಜನಾ, ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿರುವ ಅಪೂರ್ವ ಅವರು ಮನೋಜ್ಞ ಅಭಿನಯದ ಮೂಲಕ ಮೋಡಿ ಮಾಡುತ್ತಾರೆ.

ಚಿತ್ರದ ಮೊದಲಾರ್ಧದಲ್ಲಿ ಸಾಕಷ್ಟು ಹಾಸ್ಯ ಸನ್ನಿವೇಶಗಳಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ದ್ವಿತೀಯಾರ್ಧದಲ್ಲಿ ಕೋರ್ಟ್ ಕಲಾಪಗಳ ಸನ್ನಿವೇಶಗಳೇ ತುಂಬಿರುವುದರಿಂದ ತುಸು ನೀರಸ ಎನ್ನಿಸುತ್ತದೆ.

ಸಿನಿಮಾದ ಹಾಡುಗಳು ಹೆಚ್ಚು ಆಪ್ತವಾಗುತ್ತವೆ. ಕಥಾ ನಿರೂಪಣೆಯೂ ದ್ವಿತೀಯಾರ್ಧದಲ್ಲಿ ಅಲ್ಲಲ್ಲಿ ಪೇಲವವಾಗಿ ಮೂಡಿಬಂದಿದೆ.

ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಸುಚೇಂದ್ರ ಪ್ರಸಾದ್ ಅವರ ಅಭಿನಯ ನಗೆ ಉಕ್ಕಿಸುತ್ತದೆ. ಶಿವಸೀನ ಅವರ ಛಾಯಾಗ್ರಹಣದಲ್ಲಿ ಬೆಂಗಳೂರು ನಗರ ಸುಂದರವಾಗಿ ಕಂಗೊಳಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !