ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ಎಚ್ಚೆತ್ತುಕೊಂಡಿದ್ದರೆ ಉಳಿಯುತ್ತಿತ್ತು ಚಿರಂಜೀವಿ ಸರ್ಜಾ ಜೀವ

Last Updated 9 ಜೂನ್ 2020, 2:53 IST
ಅಕ್ಷರ ಗಾತ್ರ

ಸಾವು ಮನುಷ್ಯನನ್ನು ಕಾದು ಕುಳಿತರೆ ಎಷ್ಟು ಸೌಲಭ್ಯಗಳಿದ್ದರೂ ಯಾರೂ ಏನೂ ಮಾಡಲು ಆಗುವುದಿಲ್ಲ ಎಂಬ ಮಾತಿದೆ. ನಟ ಚಿರಂಜೀವಿಸರ್ಜಾ ಪ್ರಕರಣದಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ತಮ್ಮ ಆರೋಗ್ಯದ ಬಗ್ಗೆ ತುಸುವೇ ಮುನ್ನೆಚ್ಚರಿಕೆ ವಹಿಸಿದ್ದರೂ, ಎದೆನೋವನ್ನು ಗಂಭೀರವಾಗಿ ಪರಿಗಣಿಸಿ ತಜ್ಞರಿಂದ ತಪಾಸಣೆ ಮಾಡಿಸಿಕೊಂಡಿದ್ದರೂ ಚಿರು ಉಳಿಯುತ್ತಿದ್ದರು ಎಂದು ಅವರಆಪ್ತರು ಇದೀಗ ಅಲವತ್ತುಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾರನ್ನು ಉಳಿಸಿಕೊಳ್ಳಲು ಕುಟುಂಬದ ಸದಸ್ಯರು ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆದರೂ ವಿಧಿವಿಲಾಸ ಅವರನ್ನು ಬೆಂಬಿಡಲಿಲ್ಲ.

ಹೃದಯಾಘಾತದಿಂದ ಭಾನುವಾರ ನಿಧನರಾದ ನಟ ಚಿರಂಜೀವಿ ಸರ್ಜಾ ಅವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಕಾಲದಲ್ಲಿ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದರೆ ಅವರ ಜೀವ ಉಳಿಯುತ್ತಿತ್ತೇ ಎಂಬ ಪ್ರಶ್ನೆ ಇದೀಗ ಚಂದನವನದ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.

ಚಿರಂಜೀವಿ ಸರ್ಜಾ ಅವರಿಗೆ ಮೊದಲ ಬಾರಿಗೆ, ಶನಿವಾರ ಫಿಟ್ಸ್ ಬಂದಿತ್ತು.ತಕ್ಷಣ ಮನೆಯವರು ಜಯನಗರದ ಡಯಾಗ್ನಾಸ್ಟಿಕ್ ಸೆಂಟರ್ ಒಂದಕ್ಕೆ ತಪಾಸಣೆಗಾಗಿ ಕರೆದೊಯ್ದಿದ್ದಾರೆ. ಅಲ್ಲಿ ಇಸಿಜಿ ಸಹಿತ ಎಲ್ಲ ತಪಾಸಣೆ ಮಾಡಿದ್ದು ಏನೂ ತೊಂದರೆ ಇಲ್ಲ ಎಂದು ವರದಿ ಬಂದಿದೆ. ಹೀಗಾಗಿ ಮನೆಯವರು ವಾಪಸ್ ಕರೆತಂದಿದ್ದಾರೆ. ಗ್ಯಾಸ್ಟ್ರಿಕ್‌ನಿಂದ ತೊಂದರೆ ಆಗಿರಬಹುದು ಎಂದು ಭಾವಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಮತ್ತೆ ಎರಡು ಬಾರಿ ಫಿಟ್ಸ್ ಬಂದಿದೆ. ಆಗಲೂ ಮನೆಯ ಸದಸ್ಯರು ಗಂಭೀರವಾಗಿ ಪರಿಗಣಿಸಿ ಆಸ್ಪತ್ರೆಗೆ ದಾಖಲಿಸಲಿಲ್ಲ.

ಮಧ್ಯಾಹ್ನ ಹೃದಯಾಘಾತವಾದ ಬಳಿಕವಷ್ಟೇ ಮನೆಯ ಸದಸ್ಯರಿಗೆ ಗಂಭೀರತೆಯ ಅರಿವಾಗಿದೆ.ಆಸ್ಪತ್ರೆಗೆ ಒಯ್ದಾಗ ಚಿರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ನಾಡಿ ಮಿಡಿತ ತೀರಾ ಕಡಿಮೆಯಾಗಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಉಸಿರಾಟ ಸರಾಗವಾಗಿಸಲು ಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ಫಲ ಕೊಟ್ಟಿಲ್ಲ.

ಚಿರುಗೆ ಜಿಮ್‌ಗೆ ಹೋಗುವ ಅಭ್ಯಾಸ ಇತ್ತು. ಮೈಕಟ್ಟು ಉಳಿಸಿಕೊಳ್ಳುವತ್ತ ಗಮನ ಹರಿಸಿದ್ದರು. ಅದರೆ ಬಹುತೇಕ ರಾತ್ರಿ ತಡವಾಗಿ ಮಲಗುವುದು ಅಭ್ಯಾಸವಾಗಿತ್ತು. ಹಾಗೆಯೇ ಬೆಳಿಗ್ಗೆ ತೀರಾ ತಡವಾಗಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಆದರೆ ಶೂಟಿಂಗಿಗೆ ಯಾವತ್ತೂ ತಡವಾಗಿ ಹೋದವರಲ್ಲ. ಆತ ನಿರ್ದೇಶಕರ ನಟ ಎಂದು ನಿಕಟ ಸ್ನೇಹಿತರು ತಿಳಿಸಿದ್ದಾರೆ.

ಅರ್ಜುನ್ ಸರ್ಜಾ ಕುಟುಂಬ ಚೆನ್ನೈನಿಂದ ಕಾರಿನಲ್ಲಿ ಬಂದು ರಾತ್ರಿ 11.30ಕ್ಕೆ ಮನೆ ತಲುಪಿದೆ. ಚಿರು ಶವವನ್ನು ನೋಡಿ ತೀವ್ರ ಶೋಕತಪ್ತರಾದ ಅರ್ಜುನ್ ಸರ್ಜಾ, 'ನಾನು ಕಣೋ... ನಿನ್ನ ಮಾವ ಬಂದಿದ್ದೀನಿ, ಏಳು ಚಿರೂ...' ಎಂದು ಬಿಕ್ಕಿಬಿಕ್ಕಿ ಅಳುತ್ತಿದ್ದುದನ್ನು ನೋಡಿ ಮನೆಯವರೆಲ್ಲ ಕಣ್ಣೀರಾಗಿದ್ದರು.

ವಿಷಯ ತಿಳಿದ ತಕ್ಷಣ, ಭಾನುವಾರ ಸಂಜೆಮೂರೂವರೆಗೆ ಚೆನ್ನೈನಿಂದ ಅರ್ಜುನ್ ಸರ್ಜಾ ಕಾರಿನಲ್ಲಿ ಹೊರಟಿದ್ದರು. ಐದಾರು ಕಡೆ ಅವರಿಗೆ ಕೋವಿಡ್ ತಪಾಸಣೆ ನಡೆಸಿದ ಕಾರಣ ಬೆಂಗಳೂರು ತಲುಪುವುದು ತಡವಾಯಿತು. ಎರಡು ಸ್ಥಳಗಳಲ್ಲಿ ಅರ್ಜುನ್ ಸರ್ಜಾ, ಪತ್ನಿ ಮತ್ತು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಯೇ ಮುಂದೆ ಬಿಡಲಾಯಿತು. ಕರ್ನಾಟಕ ಗಡಿಯ ಅತ್ತಿಬೆಲೆಯಲ್ಲೂ ಅರ್ಜುನ್ ಕುಟುಂಬವನ್ನು ತಪಾಸಣೆಗಾಗಿ 20 ನಿಮಿಷಗಳ ಕಾಲ ತಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT