ಸೋಮವಾರ, ನವೆಂಬರ್ 30, 2020
26 °C

ಚಿರುಮನೆಯಲ್ಲಿ ಚಿಂಟು ನಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ ತಾರೆಯರಾದ ದಿವಂಗತ ನಟ ಚಿರು ಮತ್ತು ಮೇಘನಾ ರಾಜ್ ಕುಟುಂಬದಲ್ಲಿ ಗುರುವಾರ ಸಂಭ್ರಮ ತುಂಬಿ ತುಳುಕುತ್ತಿತ್ತು. ಜೂನಿಯರ್ ಚಿರು ಆಗಮನವಾಗಿರುವುದರಿಂದ ಮನೆಮಂದಿಯ ಮೊಗದಲ್ಲಿ ಸಂತಸದ ನಗು ಆವರಿಸಿದೆ. ಚಿರು ಮತ್ತು ಮೇಘನಾರ ಪ್ರೀತಿಯ ಪ್ರತಿರೂಪ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ಕುಟುಂಬಸ್ಥರು ಮತ್ತು ಬಂಧುಬಳಗದ ಸಮ್ಮುಖದಲ್ಲಿ ನಡೆಯಿತು.

ಮಧ್ಯಾಹ್ನ 12 ಗಂಟೆಯ ಶುಭ ಗಳಿಗೆಯಲ್ಲಿ ನಿಗದಿಯಾಗಿದ್ದ ಈ ಶಾಸ್ತ್ರಕ್ಕೆ ಬೆಳಿಗ್ಗೆಯಿಂದಲೇ ಎಲ್ಲ ತಯಾರಿ ಭರ್ಜರಿಯಾಗಿ ನಡೆದಿದ್ದವು. ಚಿರು ವಾರಸ್ಥಾರ ಮನೆಗೆ ಬಂದ ನಂತರ ಶಾಸ್ತ್ರೋಕ್ತವಾಗಿ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ಮೇಘನಾ ರಾಜ್‌ ತವರಿನಲ್ಲಿ ನೆರವೇರಿಸಲಾಯಿತು. ಮೇಘನಾ ಹಾಗೂ ಚಿರು ಕುಟುಂಬದವರೆಲ್ಲರೂ ಸಡಗರದಿಂದ ಭಾಗಿಯಾಗಿದ್ದರು.

ತೊಟ್ಟಿಲು ಶಾಸ್ತ್ರಕ್ಕಾಗಿ ತಯಾರಿಸಿರುವ ಬಣ್ಣಬಣ್ಣದ ಕರಕುಶಲ ತೊಟ್ಟಿಲನ್ನು ಗದಗದ ಮಹಿಳಾ ಸಂಘವೊಂದು ಚಿರು ಮಗನಿಗಾಗಿ ಉಡುಗೊರೆ ನೀಡಿತು. ಗದಗದ ವನಿತಾ ಗುತ್ತಲ್ ಈ ತೊಟ್ಟಿಲು ಮಾಡಿಸಿದ್ದು, ಇದರ ಬೆಲೆ ಸುಮಾರು ₹ 1.10 ಲಕ್ಷ. ಸುಮಾರು 4-5 ತಿಂಗಳು ಸಮಯ ವಿನಿಯೋಗಿಸಿ ಮಾರುತಿ ಬಡಿಗೇರ್ ಎಂಬುವವರು ಈ ತೊಟ್ಟಿಲನ್ನು ತಯಾರಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್ ಮೂಲಕ ಮಹಿಳಾ ಸಂಘದ ಸದಸ್ಯರು ಈ ತೊಟ್ಟಿಲನ್ನು ಮೇಘನಾ ರಾಜ್ ಅವರಿಗೆ ತಲುಪಿಸಿದರು. ಜತೆಗೆ ಉತ್ತರ ಕರ್ನಾಟಕ ಜನಪ್ರಿಯವಾದ ಹಲವು ಬಗೆಯ ತಿನಿಸುಗಳನ್ನು ಮೇಘನಾ ಅವರಿಗೆ ಈ ಸದಸ್ಯರು ಅಕ್ಕರೆಯಿಂದ ನೀಡಿದರು.

ಜೂನಿಯರ್‌ ಚಿರು ಹೆಸರು ಸದ್ಯಕ್ಕೆ ಚಿಂಟು!

ದುಃಖ ಅದುಮಿಟ್ಟುಕೊಂಡೇ ನಗು ಮೊಗದಲ್ಲಿ ಮಾಧ್ಯಮಗಳ ಪ್ರತಿನಿಧಿಗಳನ್ನು ಎದುರುಗೊಂಡ ಮೇಘನಾ ರಾಜ್‌, ‘ಚಿರು ಕಳೆದುಕೊಂಡಿರುವ ನೋವನ್ನು ಮರೆಯೋದು ಅಸಾಧ್ಯ. ನನ್ನ ಮಗುವನ್ನು ನೋಡಿದಾಗ ಚಿರು ಕಾಣಿಸ್ತಾರೆ. ಮಗುವನ್ನು ನೋಡಿದವರೆಲ್ಲರೂ ಚಿರು ಜೆರಾಕ್ಸ್ ಕಾಪಿ ಎನ್ನುತ್ತಾರೆ. ನನಗೂ ಹಾಗೇ ಅನ್ನಿಸುತ್ತದೆ. ಮಗುವಿಗೆ ಇನ್ನೂ ಹೆಸರಿಟ್ಟಿಲ್ಲ. ಮನೆಯಲ್ಲಿ ಸದ್ಯಕ್ಕೆ ಎಲ್ಲರೂ ಚಿಂಟು ಎಂದು ಕರೆಯುತ್ತಿದ್ದೇವೆ. ಚಿಂಟು ಅಳುವುದು ಕಡಿಮೆ, ನಗೋದು ಜಾಸ್ತಿ, ಅವರಪ್ಪನ ಬುದ್ದಿಯೇ ಎನ್ನಿಸುತ್ತೆ. ನನ್ನ ಮಗುವೇ ನನ್ನ ಶಕ್ತಿ’ ಎಂದು ಮಾತಿಗಾರಂಭಿಸಿದರು.

‘ಕಷ್ಟದ ಸಮಯವನ್ನು ಎದುರಿಸುವುದನ್ನು ಚಿರುವಿನಿಂದ ಕಲಿತುಕೊಂಡಿದ್ದೇನೆ. ಚಿರು ಅಂದ್ರೆ ನನ್ನ ಸಂತಸ ಹಾಗೂ ಖುಷಿ. ಚಿರು ತಾನು ಬೂದಿ ಮುಚ್ಚಿದ ಕೆಂಡದಂತೆ, ಫೀನಿಕ್ಸ್ ಪಕ್ಷಿಯಂತೆ ಎಂದು ಯಾವಾಗಲೂ ಹೇಳುತ್ತಿದ್ದ. ನನ್ನ ಬದುಕಿನಲ್ಲಿ ಈಗ ಮಗ ಬಂದಿರುವುದು ನನಗೆ ದುಪ್ಪಟ್ಟು ಸಂಭ್ರಮ ತಂದಿದೆ’ ಎನ್ನುವ ಮಾತು ಸೇರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು