ಚಿತ್ರಕಲಾವಿದನ ‘ಚಿತ್ರಕಥಾ’

ಪ್ರತಿ ಕಲಾವಿದನ ಬದುಕಲ್ಲೂ ಕಷ್ಟದ ಸಂದರ್ಭ ಬಂದೇ ಬರುತ್ತದೆ. ಅದನ್ನು ಆತ ಹೇಗೆ ಮೀರಿ ಗುರಿ ಸೇರುತ್ತಾನೆ ಎನ್ನುವುದೇ ‘ಚಿತ್ರಕಥಾ’ ಸಿನಿಮಾದ ಕಥಾಹಂದರ. ಜಾಲಿ ಪ್ರೊಡಕ್ಷನ್ ಲಾಂಛನದಡಿ ನಿರ್ಮಾಣವಾಗಿರುವ ಈ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಇದೇ ತಿಂಗಳ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
‘ಸಿನಿಮಾ ಪೂರ್ಣಗೊಂಡಿದೆ. ಈ ಸಂಭ್ರಮಕ್ಕೆ ನನ್ನಿಂದ ಮಾತೇ ಹೊರಡುತ್ತಿಲ್ಲ’ ಎನ್ನುತ್ತಲೇ ಮಾತು ಆರಂಭಿಸಿದ ನಿರ್ದೇಶಕ ಯಶಸ್ವಿ ಬಾಲಾದಿತ್ಯ, ‘ಕಥೆ ಬಗ್ಗೆ ಒಂದು ಎಳೆ ಹೇಳಿದರೂ ಇಡೀ ಕಥೆ ಡಿಕೋಡ್ ಆಗಿಬಿಡುತ್ತದೆ. ಹಾಗಾಗಿ ಆ ಬಗ್ಗೆ ಹೆಚ್ಚು ಹೇಳಲಾರೆ. ಆದರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾ’ ಎಂದಷ್ಟೇ ಹೇಳಬಲ್ಲೆ ಎಂದರು.
ಈ ಸಿನಿಮಾದಲ್ಲಿ ಸುಜಿತ್ ರಾಥೋಡ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ದಿಲೀಪ್ ರಾಜ್ ಅವರು ಬಹುಮುಖ್ಯ ಪಾತ್ರ ಮಾಡಿದ್ದಾರೆ. ಸುಧಾರಾಣಿ, ಬಿ.ಜಯಶ್ರೀ, ತಬಲಾ ನಾಣಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಕೇರಳದ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ ಎನ್ನುವ ಮಾಹಿತಿಯನ್ನೂ ಅವರು ಕೊಟ್ಟರು.
‘ನನ್ನದು ಆ್ಯನಿಮೇಷನ್ ಬ್ಯಾಕ್‌ಗ್ರೌಂಡ್. ಸಿನಿಮಾದ ಮೇಲಿನ ಆಸ್ಥೆ ಮತ್ತು ಆಸಕ್ತಿಯಿಂದಾಗಿ ಚಿತ್ರರಂಗಕ್ಕೆ ಬಂದೆ. ಒಂದು ಫ್ಯೂಚರ್ ಸಿನಿಮಾ ಕೂಡ ಮಾಡಿದ್ದೇನೆ. ‘ರಣತಂತ್ರ’ ಮತ್ತು ‘ನಿನ್ನ ಕಣ್ಣ ನೋಟದಲ್ಲಿ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರಕಥಾ ನನ್ನ ಮೊದಲ ನಿರ್ದೇಶನದ ಸಿನಿಮಾ’ ಎಂದು ಬಾಲಾದಿತ್ಯ ಅವರು ತಮ್ಮ ಹಿನ್ನೆಲೆ ಮತ್ತು ಅನುಭವದ ಬಗ್ಗೆಯೂ ಹೇಳಿಕೊಂಡರು.
ಈ ಸಿನಿಮಾ ಚಿತ್ರಕಲಾವಿದನ ಬದುಕಿಗೆ ಸಂಬಂಧಿಸಿದ್ದು ಎಂದು ಕಥೆಯ ಒಂದು ಎಳೆ ಹೇಳಿದ ಸಿನಿಮಾದ ನಾಯಕ ಸುಜಿತ್ ರಾಥೋಡ್, ‘ಈ ಸಿನಿಮಾದಲ್ಲಿ ನನ್ನದು ಒಬ್ಬ ನಿರ್ದೇಶಕನ ಪಾತ್ರ. ನಟನೆಯು ನನಗೆ ಮೊದಲ ಅನುಭವ. ಇದು ನನಗೇ ದೊಡ್ಡ ಸವಾಲು ಕೂಡ ಆಗಿತ್ತು’ ಎಂದರು.
‘ನನಗೆ ಚಿಕ್ಕಂದಿನಿಂದಲೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಸುಜಿತ್‌ಗೂ ನಾಯಕನಾಗುವ ಕನಸು ಇತ್ತು. ನಾವಿಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ನಮ್ಮಿಬ್ಬರ ಕನಸುಗಳು ಈಗಕ ಈಡೇರಿವೆ’ ಎಂದರು ಸಿವಿಲ್ ಎಂಜಿನಿಯರ್ ಆಗಿರುವ ನಿರ್ಮಾಪಕ ಪ್ರಜ್ವಲ್ ಎಂ.ರಾಜ.
‘ಈ ಸಿನಿಮಾದಲ್ಲಿ ನನ್ನದು ಕೊರವಂಜಿ ಪಾತ್ರ. ಒಂದು ಹಾಡನ್ನು ನನ್ನಿಂದ ಹಾಡಿಸಿದ್ದಾರೆ. ಯುವಜನರು ಚಿತ್ರರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಇವರಿಂದ ಸಾಕಷ್ಟು ಹೊಸತನ್ನು ನಾನು ಸಹ ಕಲಿತಿದ್ದೇನೆ’ ಎಂದು ಹಿರಿಯ ನಟಿ ಬಿ.ಜಯಶ್ರೀ ಮೆಚ್ಚುಗೆ ಮಾತು ಸೇರಿಸಿದರು.
ಚಿತ್ರದ ಪೋಸ್ಟರ್ ಕೂಡ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಚೇತನ್ ಕುಮಾರ್ ಸಂಗೀತ ನಿರ್ದೇಶನ, ತನ್ವಿಕ್ ಛಾಯಾಗ್ರಹಣ, ಕೀರ್ತಿ ಬಿ.ಎಂ. ಸಂಭಾಷಣೆ, ಮಧು ಸಂಕಲನ ಹಾಗೂ ಧ್ರುವ ಮತ್ತು ಬಿ.ಜಯಶ್ರೀ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ. ತಾರಾಗಣದಲ್ಲಿ ಆದರ್ಶ್, ಮಹಾಂತೇಶ್, ಮೇಧಾ, ಮಯೂರ್ ಇದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.