ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ | ಆ್ಯಕ್ಷನ್, ರೊಮಾನ್ಸ್ ಚಿತ್ರಗಳ ಭರಾಟೆ

Last Updated 20 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ಕನ್ನಡದಲ್ಲಿ ಈ ವಾರ ‘ನಿಷ್ಕರ್ಷ’, ‘ತ್ರಿಪುರ’ ತಮಿಳಿನಲ್ಲಿ ‘ಕಾಪ್ಪನ್’, ತೆಲುಗಿನಲ್ಲಿ ‘ವಾಲ್ಮೀಕಿ', ಹಿಂದಿಯಲ್ಲಿ ‘ದ ಜೋಯಾ ಫ್ಯಾಕ್ಟರ್', ‘ಪ್ರಸ್ಥಾನಂ', ‘ಪಲ್ ಪಲ್ ದಿಲ್ ಕೆ ಪಾಸ್' ಹಾಗೂ ಇಂಗ್ಲಿಷ್‍ನಲ್ಲಿ ರ‍್ಯಾಂಬೊ: ಲಾಸ್ಟ್ ಬ್ಲಡ್ ಚಿತ್ರಗಳು ಬಿಡುಗಡೆಯಾಗಿವೆ.

ನಿಷ್ಕರ್ಷ: 90ರ ದಶಕದಲ್ಲಿ ತೆರೆ ಕಂಡಿದ್ದ ಸುನೀಲ್ ಕುಮಾರ್ ದೇಸಾಯಿ ಮತ್ತು ವಿಷ್ಣುವರ್ಧನ್ ಕಾಂಬಿನೇಷನ್‍ನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ನಿಷ್ಕರ್ಷ'. ಹಳೆಯ ಸಿನಿಮಾಗಳ ಮರು ಬಿಡುಗಡೆಯ ಸರದಿಯಲ್ಲಿರುವ ಈ ಸಿನಿಮಾ ಆಗಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಬಹುಮಹಡಿ ಕಟ್ಟಡದಲ್ಲಿ ಜನರನ್ನು ಒತ್ತೆ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುವ ಖಳನನ್ನು ಸದೆಬಡಿದು, ಒತ್ತೆಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆಯೇ ಈ ಸಿನಿಮಾದ ಕಥಾಹಂದರ. ಅನಂತನಾಗ್, ಬಿ.ಸಿ.ಪಾಟೀಲ್, ರಮೇಶ್ ಭಟ್, ಪ್ರಕಾಶ್ ರೈ, ಸುಮನ್ ನಗರಕರ್ ತಾರಾಗಣದಲ್ಲಿದ್ದಾರೆ. ಗುಣಸಿಂಗ್ ಸಂಗೀತ ಹಾಗೂ ಪಿ. ರಾಜನ್ ಛಾಯಾಗ್ರಹಣ ಚಿತ್ರಕ್ಕಿದೆ.

ಕಾಪ್ಪನ್: ಸೂರ್ಯ ನಟನೆಯ ಆಕ್ಷನ್-ಥ್ರಿಲ್ಲರ್ ‘ಕಾಪ್ಪನ್' ಸಿನಿಮಾದ ನಿರ್ದೇಶನ ಕೆ.ವಿ.ಆನಂದ್ ಅವರದು. ದೇಶದ ಪ್ರಧಾನಿಯ ರಕ್ಷಣೆಯ ಹೊಣೆ ಹೊತ್ತ ವಿಶೇಷ ಅಧಿಕಾರಿಯ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಅನಿರೀಕ್ಷಿತ ತಿರುವುಗಳಿಂದಾಗಿ, ದೇಶದ ನಾಯಕನನ್ನೇ ಕೊಲ್ಲಬೇಕಾದ ಸಂದರ್ಭ ಎದುರಾದಾಗ ಆತ ಏನು ಮಾಡುತ್ತಾನೆ ಎಂಬುದು ಚಿತ್ರದ ತಿರುಳು. ಮೋಹನ್‍ಲಾಲ್, ಆರ್ಯ, ಸಾಯಿಶಾ ಸೇಗಲ್, ಸಮುಥಿರಕನಿ, ಬೊಮನ್ ಇರಾನಿ, ಕನ್ನಡದ ಪ್ರೇಮ್ ತಾರಾಗಣದಲ್ಲಿದ್ದಾರೆ. ಹ್ಯಾರಿಸ್ ಜಯರಾಜ್ ಸಂಗೀತ, ಅಭಿನಂದನ್ ರಾಮಾನುಜಂ-ಎಂ.ಎಸ್. ಪ್ರಭು ಛಾಯಾಗ್ರಹಣ ಹಾಗೂ ರುಬೆನ್ ಸಂಕಲನವಿರುವ ಈ ಚಿತ್ರಕ್ಕೆ ಎ.ಸುಭಾಸ್‍ ಕರಣ್ ಬಂಡವಾಳ ಹಾಕಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ತೆರೆ ಕಂಡಿದೆ.

ವಾಲ್ಮೀಕಿ: ತಮಿಳು ಹಾಗೂ ಕನ್ನಡದಲ್ಲಿ ತೆರೆಕಂಡಿದ್ದ ‘ಜಿಗರ್‍ಥಂಡಾ' ಸಿನಿಮಾದ ರಿಮೇಕ್ ‘ವಾಲ್ಮೀಕಿ'. ದೊಡ್ಡ ರೌಡಿಯೊಬ್ಬನ ಜೀವನವನ್ನು ತೆರೆ ಮೇಲೆ ತರಲು ಮುಂದಾಗುವ ಯುವ ನಿರ್ದೇಶಕ ಕಡೆಗೆ ತನ್ನ ಗುರಿ ತಲುಪುತ್ತಾನೆಯೇ ಎಂಬುದು ಚಿತ್ರದ ತಿರುಳು. ಹರೀಶ್ ಜಯರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ವರುಣ್ ತೇಜ್ ರೌಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯುವ ನಿರ್ದೇಶಕನಾಗಿ ಅಥರ್ವ ಮುರಳಿ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಅಚಂತಾ, ಗೋಪಿಚಂದ್ ಅಚಂತಾ ಬಂಡವಾಳ ಹಾಕಿದ್ದಾರೆ. ಮಿಕಿ ಜೆ. ಜೈರಾಜ್ ಸಂಗೀತ, ಎ.ಬೋಸ್ ಛಾಯಾಗ್ರಹಣ ಹಾಗೂ ಚೋಟಾ ಕೆ. ಪ್ರಸಾದ್ ಸಂಕಲನ ಚಿತ್ರಕ್ಕಿದೆ.

ದ ಜೋಯಾ ಫ್ಯಾಕ್ಟರ್: ಅನುಜಾ ಔಹಾಣ್ ಅವರ ಕಾದಂಬರಿ ಆಧಾರಿತ ‘ದ ಜೋಯಾ ಫ್ಯಾಕ್ಟರ್' ಸಿನಿಮಾವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸಿದ್ದಾರೆ. ಜಾಹೀರಾತು ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜೋಯಾ ಹಾಗೂ ಭಾರತೀಯ ಕ್ರಿಕೆಟ್ ತಂಡಕ್ಕೂ ಬೆಸೆದುಕೊಂಡಿರುವ ಅದೃಷ್ಟದ ಎಳೆ ಸಿನಿಮಾದ ಕಥಾವಸ್ತು. ಮಲಯಾಳಂನ ದುಲ್ಕರ್ ಸಲ್ಮಾನ್ ಕ್ರಿಕೆಟ್ ತಂಡದ ನಾಯಕನಾಗಿ ಮತ್ತು ಸೋನಂ ಕಪೂರ್ ಜೋಯಾ ಆಗಿ ಕಾಣಿಸಿಕೊಂಡಿದ್ದಾರೆ. ಫಾಕ್ಸ್ ಸ್ಟುಡಿಯೊಸ್ ಈ ಚಿತ್ರವನ್ನು ನಿರ್ಮಿಸಿದೆ.

ಪ್ರಸ್ಥಾನಂ: ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ನಿರ್ದಯಿ ರಾಜಕಾರಣಿ ಮತ್ತು ಆತನ ಇಬ್ಬರು ಮಕ್ಕಳ ಕಥೆಯನ್ನು ‘ಪ್ರಸ್ಥಾನಂ'ನಲ್ಲಿ ಹೇಳಿದ್ದಾರೆ ನಿರ್ದೇಶಕ ದೇವ ಕಟ್ಟಾ. ಮಕ್ಕಳ ಪೈಕಿ ಒಬ್ಬ ತಂದೆಯ ಹಾದಿ ಹಿಡಿದರೆ, ಮತ್ತೊಬ್ಬ ಅದಕ್ಕೆ ತದ್ವಿರುದ್ಧವಾದ ಹಾದಿ. ಇದರಿಂದ ಕುಟುಂಬದಲ್ಲಾಗುವ ಅಲ್ಲೋಲ ಕಲ್ಲೋಲ ಕಡೆಗೆ ಯಾವ ಹಂತ ತಲುಪುತ್ತದೆ ಎಂಬುದು ಚಿತ್ರದ ತಿರುಳು. ಸಂಜಯ್ ದತ್, ಮನಿಷಾ ಕೊಯಿರಾಲ, ಜಾಕಿ ಶ್ರಾಫ್, ಚಂಕಿ ಪಾಂಡೆ, ಅಲಿ ಫಾಜಲ್ ತಾರಾಗಣದಲ್ಲಿದ್ದಾರೆ. ಸಾಜಿದ್ ಫರಾದ್- ಅಂಕಿತ್ ತಿವಾರಿ ಸಂಗೀತ, ರವಿ ಯಾದವ್ ಸಿನಿಮಾಟೊಗ್ರಫಿ. ಬಲ್ಲು ಸಲುಜಾ ಸಂಕಲನ ಚಿತ್ರಕ್ಕಿದೆ. ಮಾನ್ಯತಾ ದತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಪಲ್ ಪಲ್ ದಿಲ್ ಕೆ ಪಾಸ್: ನಟ ಸನ್ನಿ ಡಿಯೊಲ್ ತಮ್ಮ ಪುತ್ರ ಕರಣ್ ಡಿಯೊಲ್‍ಗಾಗಿ ನಿರ್ದೇಶಿಸಿರುವ ಸಿನಿಮಾ ‘ಪಲ್ ಪಲ್ ದಿಲ್ ಕೆ ಪಾಸ್'. ವಿಡಿಯೊ ಬ್ಲಾಗರ್ ಮತ್ತು ಚಾರಣಿಗನ ನಡುವಿನ ಪ್ರೇಮ ಚಿತ್ರದ ಕಥಾವಸ್ತು. ಪರಸ್ಪರರಲ್ಲಿರುವ ದೋಷಗಳನ್ನು ದೂಷಿಸುತ್ತಲೇ, ಇಬ್ಬರೂ ಒಂದಾಗುವ ತಿರುಳಿನ ಈ ಸಿನಿಮಾದಲ್ಲಿ ಸಾಯಿರ್ ಬಂಬಾ, ಆಕಾಶ್ ಅಹುಜಾ, ಸಚಿನ್ ಖೇಡೆಕರ್ ತಾರಾಗಣದಲ್ಲಿದ್ದಾರೆ. ರುಕ್ಷಿದಾ ಡೇವಿಡ್ ಬಂಡವಾಳ ಹಾಕಿದ್ದಾರೆ. ರಿಷಿ ರಿಚ್, ಸಾಕೇತ್, ಪರಂಪರಾ ಹಾಗೂ ತನಿಷ್ಕ್ ಸಂಗೀತ ನಿರ್ದೇಶನ, ಹಿಮ್ಮನ್ ದಾಮಿಜಾ ಸಿನಿಮಾಟೊಗ್ರಫಿ, ದೇವೇಂದ್ರ ಮುರ್ಡೇಶ್ವರ್ ಸಂಕಲನ ಚಿತ್ರಕ್ಕಿದೆ.

ರ‍್ಯಾಂಬೊ; ಲಾಸ್ಟ್ ಬ್ಲಡ್: ಸಿಲ್ವೆಸ್ಟರ್ ಸ್ಟ್ಯಾಲೋನ್ ಅವರ ರ‍್ಯಾಂಬೊ ಸರಣಿಯ ಚಿತ್ರಗಳ ಮುಂದುವರಿದ ಭಾಗ ‘ರ‍್ಯಾಂಬೊ: ಲಾಸ್ಟ್ ಬ್ಲಡ್'. ಆಪತ್ತಿನಲ್ಲಿರುವ ತನ್ನ ಸಂಬಂಧಿಯನ್ನು ರಕ್ಷಿಸಲು ರ‍್ಯಾಂಬೊ ಮಾಡುವ ಸಾಹಸ ಈ ಸಿನಿಮಾದ ತಿರುಳು. ಅಡ್ರಿಯಾನ್ ಗ್ರುನ್‍ಬರ್ಗ್ ನಿರ್ದೇಶಿಸಿರುವ ಈ ಸಿನಿಮಾಗೆ ಬ್ರಯಾನ್ ಟೇಲರ್ ಸಂಗೀತ, ಬ್ರೆಂಡನ್ ಗ್ಲೇವಿನ್ ಸಿನಿಮಾಟೊಗ್ರಫಿ, ಟಾಡ್ ಮಿಲ್ಲರ್ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT