ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview| ಧೈರ್ಯದಿಂದ ಮುನ್ನುಗ್ಗುವೆ, ಹೆದರಿಕೆ ನನ್ನ ಸ್ವಭಾವವಲ್ಲ: ರಚಿತಾ ರಾಮ್

Last Updated 3 ಸೆಪ್ಟೆಂಬರ್ 2020, 11:23 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬಹುಬೇಡಿಕೆಯ ನಟಿಯರ ಪೈಕಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಮುಂಚೂಣಿಯಲ್ಲಿದ್ದಾರೆ. ಅವರು ತಮ್ಮ ಬೇಡಿಕೆಯನ್ನುಪರಭಾಷೆಗೂ ವಿಸ್ತರಿಸಿಕೊಳ್ಳುತ್ತಿದ್ದಾರೆ.‘ವೀರಂ’, ‘ಏಪ್ರಿಲ್’‌, ‘ಲಿಲ್ಲಿ’, ‘ಏಕ್‌ ಲವ್‌ ಯಾ’, ‘100’, ‘ಸೀರೆ’, ‘ರವಿ ಬೋಪಣ್ಣ’, ‘ಪಂಥ’, ‘ಸಂಜಯ್‌ ಅಲಿಯಾಸ್‌ ಸಂಜು’, ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರಗಳ ಜತೆಗೆ ‘ಡಾಲಿ’ ಧನಂಜಯ ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಾಯಕಿ ಪ್ರಧಾನ ಚಿತ್ರ ‘ಕಸ್ತೂರಿ ನಿವಾಸ’ ಒಪ್ಪಿಕೊಂಡಿದ್ದಾರೆ. ತಮ್ಮ ಸಿನಿ ಪಯಣದ ಬಗ್ಗೆ ಹಲವು ಆಸಕ್ತಿದಾಯಕ ಮಾಹಿತಿಗಳನ್ನು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಅವರು ತೆರೆದಿಟ್ಟಿದ್ದಾರೆ.

* ದಿನೇಶ್‌ ಬಾಬುನಿರ್ದೇಶನದ ‘ಕಸ್ತೂರಿ ನಿವಾಸ’ಚಿತ್ರದ ಬಗ್ಗೆ ಹೇಳಿ...

ದಿನೇಶ್‌ ಬಾಬು ಸರ್‌ ಮತ್ತು ನಟ ಸ್ಕಂದ ಅವರೊಟ್ಟಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿರುವೆ. ಪಿ.ಕೆ. ದಾಸ್‌ ಅವರ ಛಾಯಾಗ್ರಹಣವಿರುವ ಚಿತ್ರಗಳಲ್ಲಿ ಈಗಾಗಲೇ ನಟಿಸಿರುವೆ. ಇದು ನಾಯಕಿ ಪ್ರಧಾನ ಚಿತ್ರ. ನನ್ನಪಾತ್ರದ ಬಗ್ಗೆ ಹೇಳುವುದು ಕಷ್ಟ. ಆದರೆ, ಪಾತ್ರವಂತು ತುಂಬಾ ಚೆನ್ನಾಗಿದೆ. ಕಥೆಯೂ ಅಷ್ಟೇ ಚೆನ್ನಾಗಿದೆ. ಇದೊಂದು ಹಾರರ್‌, ಸಸ್ಪೆನ್ಸ್ ಥ್ರಿಲ್ಲರ್‌ ಸಿನಿಮಾ. ದೆವ್ವವನ್ನು ಭಯಂಕರವಾಗಿ ತೋರಿಸುವಂತಹಹಾರಾರ್‌ ಸಿನಿಮಾ ಇದಲ್ಲ. ಹಾರಾರ್‌ ಅಂಶವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಸೆಪ್ಟೆಂಬರ್‌ ಕೊನೆಯಲ್ಲಿ ಚಿತ್ರೀಕರಣ ಶುರುವಾಗಲಿದೆ.

* ಕೊರೊನಾ ನಂತರದ ಅವಧಿಯಲ್ಲಿ ಎಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದೀರಿ?

ನಾನು ಸಾಮಾನ್ಯವಾಗಿ ಸಿನಿಮಾಗಳನ್ನು ಲೆಕ್ಕ ಮಾಡುವುದಿಲ್ಲ. ಲೆಕ್ಕ ಹಾಕಿದಷ್ಟೂ ಕಡಿಮೆಯಾಗುತ್ತದೆ ಎನ್ನುವ ಮಾತಿದೆ. ಒಳ್ಳೊಳ್ಳೆಯ ಸ್ಕ್ರಿಪ್ಟ್‌ಗಳು ಬಂದಿವೆ, ಇನ್ನೂ ಬರುತ್ತಲೇ ಇವೆ. ತುಂಬಾ ಸಿನಿಮಾಗಳಲ್ಲಿ ನಟಿಸುತ್ತಿರುವೆ ಎನಿಸಿಕೊಳ್ಳಲು ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ದೇವರ ದಯೆಯಿಂದ ಒಂದಕ್ಕಿಂತ ಒಂದು ಅದ್ಭುತ ಪಾತ್ರಗಳಿರುವ ಸಿನಿಮಾಗಳು ನನಗೆ ಸಿಗುತ್ತಿವೆ. ಕೆಲವರು ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಪಾತ್ರ ಮತ್ತು ಕಥೆ ಎಣೆದಿರುತ್ತಾರೆ. ಇದಕ್ಕಿಂತ ಹೆಚ್ಚಾಗಿಇನ್ನೇನು ಕೇಳಲಿ ನಾನು ಅವರಿಂದ. ಕಥೆ ಕೇಳಿದಾಗ ಗೌರವದಿಂದ ಒಪ್ಪಿಕೊಳ್ಳದೆ ಇರಲಾಗದು. ಲಾಕ್‌ಡೌನ್‌ ಅವಧಿಯಲ್ಲಿ ತುಂಬಾ ಒಳ್ಳೊಳ್ಳೆಯ ಕಥೆಗಳನ್ನು ಕೆಲವು ನಿರ್ದೇಶಕರು ನನಗಾಗಿ ಮಾಡಿದ್ದಾರೆ. ಒಳ್ಳೊಳ್ಳೆಯ ಕಥೆಗಳನ್ನು ಕೇಳಿದ ಮೇಲೂನಾನು ಅವುಗಳನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಒಳ್ಳೆಯ ಸಿನಿಮಾಗಳು ಸರದಿಯಲ್ಲಿವೆ.

* ‘ಸೂಪರ್‌ ಮಚ್ಚಿ’ ಚಿತ್ರ ಯಾವ ಹಂತದಲ್ಲಿದೆ?

ಲಾಕ್‌ಡೌನ್‌ ಮಧ್ಯೆ 15 ದಿನಗಳಚಿತ್ರೀಕರಣಕ್ಕೆಹೈದರಾಬಾದ್‌ಗೆ ಹೋಗಿದ್ದೆ. ಅಲ್ಲಿ ನಮ್ಮ ರಾಜ್ಯದಲ್ಲಿದ್ದಷ್ಟು ಕಠಿಣ ಲಾಕ್‌ಡೌನ್‌ ಇರಲಿಲ್ಲ. ಹತ್ತು ದಿನಗಳ ಚಿತ್ರೀಕರಣ ಪೂರ್ಣಗೊಳಿಸುವಷ್ಟರಲ್ಲಿ ಆ ರಾಜ್ಯದಲ್ಲಿ ಕಡ್ಡಾಯ ಸೀಲ್‌ಡೌನ್‌ ಘೋಷಣೆಯಾಯಿತು. ಆಗ ಬೆಂಗಳೂರಿಗೆ ವಾಪಸ್‌ ಬಂದುಬಿಟ್ಟೆ. ಇನ್ನು ಐದು ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಅದು ಮುಗಿದರೆ ಸಿನಿಮಾ ಪೂರ್ಣವಾಗಲಿದೆ.

* ಎಂತಹ ಪಾತ್ರಗಳನ್ನು ಅರಸುತ್ತಿದ್ದೀರಿ?

ನಾನು ಈಗ ಒಪ್ಪಿಕೊಂಡಿರುವ ಅಷ್ಟೂ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಒಂದೊಂದು ಟೀಸರ್ ಹೊರಬಂದಾಗಲೂ ನನ್ನನ್ನು ಪ್ರೇಕ್ಷಕರು ನೋಡುವಾಗ ‘ಇದು ನಿಜವಾಗಲೂ ರಚಿತಾನೇನಾ!’ ಎಂದು ಅಚ್ಚರಿಪಡುವಷ್ಟು ವಿಭಿನ್ನವಾಗಿವೆ. ಪೋಸ್ಟರ್‌, ಟೀಸರ್‌ಗಳು ಬಿಡುಗಡೆಯಾಗುವುದನ್ನು ಎದುರು ನೋಡುತ್ತಿರುವೆ.

* ಡ್ರಗ್ಸ್‌ ಮಾಫಿಯಾದಲ್ಲಿ ಸ್ಯಾಂಡಲ್‌ವುಡ್‌ ನಟ–ನಟಿಯರ ಹೆಸರು ಕೇಳಿಬರುತ್ತಿರುವ ಬಗ್ಗೆ ಏನು ಹೇಳುವಿರಿ?

ಇದು ನನಗೆ ರಿಲೇಟ್‌ ಆಗುವುದಿಲ್ಲ. ಈ ಪ್ರಶ್ನೆ ನನ್ನ ಹೊಸ ಸಿನಿಮಾ ಸುದ್ದಿಗೋಷ್ಠಿಯಲ್ಲೂ ಎದುರಾಗಿತ್ತು. ಆಗಲೂನನಗೆ ಆಸಕ್ತಿ ಇಲ್ಲದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲವೆಂದಿದ್ದೆ. ನನಗೆ ಇಷ್ಟವಿಲ್ಲದ ವಿಷಯಗಳ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ.ನಾನು ಸಿನಿಮಾದಲ್ಲಿ ನಟಿಸಲು, ಪ್ರೇಕ್ಷಕರನ್ನು ರಂಜಿಸಲು ಬಂದಿರುವೆ. ಆ ಬಗ್ಗೆ ಮಾತ್ರ ಯೋಚಿಸುವೆ.ಯಾರೋ ಒಬ್ಬರು ಮಾಡುವ ತಪ್ಪಿಗೆ ಎಲ್ಲರನ್ನೂ ದೂಷಣೆ ಮಾಡುವುದು ತಪ್ಪಾಗುತ್ತದೆ. ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು, ಅದು ಆಗಿಯೇ ಆಗುತ್ತದೆ.

‌* ನಟನೆ ಜತೆಗೆ ಇನ್ಯಾವ ಆಸಕ್ತಿ ಇದೆ

ನಿರ್ದೇಶನ ಮಾಡುವಷ್ಟು ನಾನು ಟ್ಯಾಲೆಂಟ್‌ ಅಲ್ಲ. ನಿರ್ದೇಶಕರ ಕೆಲಸ ತುಂಬಾ ಕಷ್ಟದ್ದು. ಚಿತ್ರೀಕರಣದ ವೇಳೆ ನನಗೆ ಎಷ್ಟೋ ಸಲ ನಿರ್ದೇಶಕರಿಗೆ ಎಷ್ಟೊಂದು ಕಷ್ಟವಿರುತ್ತದೆ, ಇಡೀ ಚಿತ್ರತಂಡ ನಿಭಾಯಿಸುವುದು ಎಷ್ಟೊಂದು ತಲೆನೋವು ಅನಿಸುತ್ತಿರುತ್ತದೆ. ನಿರ್ದೇಶಕರು ಹೇಳಿದಂತೆ ನಟಿಸಿ ಬರುವುದು ತುಂಬಾ ಸುಲಭದ ಕೆಲಸ. ಚಿತ್ರರಂಗಕ್ಕೆ ನಾನು ಬಂದಾಗಿನಿಂದಲೂ ನಾನೊಂದು ಸಿನಿಮಾ ನಿರ್ಮಿಸಬೇಕೆಂಬ ಆಸೆ ಇದೆ. ಅದು ಯಾವಾಗ ಪೂರ್ಣವಾಗಲಿದೆಯೇ ಕಾದು ನೋಡಬೇಕು.

* ಫಿಟ್‌ನೆಸ್‌ ಗುಟ್ಟೇನು?

ವರ್ಕೌಟ್‌ ಮತ್ತು ಡಯಟ್‌. ಶೇ 60ರಷ್ಟು ಡಯಟ್‌ ಇದ್ದರೆ, ಶೇ 40 ರಷ್ಟು ವರ್ಕೌಟ್‌ ಇರಬೇಕೆಂದು ಟ್ರೈನರ್‌ ಹೇಳುತ್ತಾರೆ. ಅದನ್ನು ಪಾಲಿಸುವೆ. ಡಯಟ್‌ ಅಷ್ಟಾಗಿ ಮಾಡುವುದಿಲ್ಲ, ಆದರೆ, ತುಂಬಾ ಚೆನ್ನಾಗಿ ವರ್ಕೌಟ್‌ ಮಾಡುವೆ. ಯೋಗಾಭ್ಯಾಸ ಮಾಡುವ ಆಸೆ ಇದೆ, ಆದರೆ, ಅದು ಆಗುತ್ತಿಲ್ಲ. ಇನ್ನು ಆಹಾರದ ವಿಷಯಕ್ಕೆ ಬಂದರೆ, ಮೊದಲು ತಿನ್ನುತ್ತಿದ್ದಷ್ಟು ಆಹಾರದಲ್ಲಿ ಈಗ ಶೇ 50ರಷ್ಟು ಕಡಿಮೆ ಮಾಡಿರುವೆ. ರೈಸ್‌, ಚೀಸ್‌, ಬಟರ್, ಐಸ್‌ಕ್ರೀಂ ಎಲ್ಲವನ್ನೂ ತಿನ್ನುವೆ. ಆದರೆ, ತಿನ್ನುವ ಪ್ರಮಾಣ ಕಡಿಮೆಯಾಗಿದೆ. ಇದೇ ನನ್ನ ಫಿಟ್‌ನೆಸ್‌ ಗುಟ್ಟು.

* ಯಾವಾಗ ಮದುವೆಯಾಗುತ್ತೀರಿ? ನಿಮ್ಮ ಕನಸಿನ ಹುಡುಗನ ಬಗ್ಗೆ ಹೇಳಿ?

ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿಲ್ಲ. ಆ ಜವಾಬ್ದಾರಿಯನ್ನು ನನ್ನ ಅಪ್ಪ–ಅಮ್ಮನಿಗೆ ಬಿಟ್ಟಿರುವೆ. ‘ನಿಮಗೆ ಇಷ್ಟವಾಗುವ ಹುಡುಗನನ್ನು ಕರೆದುಕೊಂಡು ಬನ್ನಿ ಮದುವೆಯಾಗುವೆ’ ಎಂದು ಅಪ್ಪ–ಅಮ್ಮನಿಗೆ ಹೇಳಿರುವೆ. ಇನ್ನು ನಾನು ಗೌಡರ ಹುಡುಗನನ್ನೇ ಮದುವೆಯಾಗುವೇ ಎಂದಿರುವ ಮಾತಿಗೆ ಈಗಲೂ ಬದ್ಧಳೇ. ನಾವು ಗೌಡ್ರು ಆಗಿರುವುದರಿಂದ ಸಹಜವಾಗಿ ಆ ಮಾತು ಹೇಳಿರುವೆ. ಆದರೆ ಒಮ್ಮೊಮ್ಮೆ ನಾವು ಅಂದುಕೊಂಡಂತೆ ಆಗುವುದಿಲ್ಲವಲ್ಲ. ಎಲ್ಲದಕ್ಕೂ ದೇವರ ಆಶೀರ್ವಾದ ಇರಬೇಕು. ದೇವರ ಆಶೀರ್ವಾದ ಸಿಕ್ಕಾಗ ಮದುವೆ ಆಗುತ್ತದೆ.ತುಂಬಾ ಒಳ್ಳೊಳ್ಳೆಯ ಸಿನಿಮಾ ಮಾಡಬೇಕು, ಒಳ್ಳೆಯ ಹೆಸರು ಸಂಪಾದಿಸಬೇಕೆಂಬ ಕನಸು ಕಾಣುತ್ತಿರುವೆ.

* ನಟಿಯಾಗದಿದ್ದರೆ ಏನಾಗಿರುತ್ತಿದ್ದೀರಿ?

ನಾನು ಚಿತ್ರರಂಗಕ್ಕೆ ಬರುವೆ, ನಟಿಯಾಗುವೆ ಎಂದುಕೊಂಡಿರಲಿಲ್ಲ. ನಮ್ಮ ತಂದೆಗೆ ನಾನು ಪೊಲೀಸ್‌ ಅಧಿಕಾರಿಯಾಗಬೇಕು, ಐಪಿಎಸ್‌ ಮಾಡಬೇಕೆಂಬ ಕನಸು ಇತ್ತು. ಸರ್ಕಾರಿ ವಾಹನ ನಮ್ಮ ಮನೆ ಮುಂದೆ ನಿಲ್ಲಬೇಕೆಂಬ ಆಸೆ ಅವರಿಗಿತ್ತು.

* ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ಆಲೋಚನೆ ಇದೆಯೇ?

ಅಂತಹ ಆಲೋಚನೆ ಇಲ್ಲ.ಸಿನಿಮಾ ರಂಗ ಸಮುದ್ರದಂತಿದ್ದರೆ, ರಾಜಕಾರಣ ಮಹಾಸಾಗರವಿದ್ದಂತೆ. ಆದರೆ, ನಾವು ಬದುಕಿನಲ್ಲಿ ಏನು ಅಂದುಕೊಂಡಿರುತ್ತೀವೊ ಅದು ಆಗುವುದಿಲ್ಲ, ಅಂದುಕೊಳ್ಳದೇ ಇರುವುದು ಆಗಿಬಿಡುತ್ತದೆ. ಏನು ಬರುತ್ತದೆಯೋ ಅದನ್ನು ಸ್ವೀಕರಿಸಬೇಕು. ಆದರೆ,ಧೈರ್ಯದಿಂದ ಮುನ್ನುಗ್ಗುವ ಸ್ವಭಾವ ನನ್ನದು. ಏನಕ್ಕೂ ಹೆದರಿಕೊಂಡು ಹಿಂದೆ ಸರಿಯುವವಳು ನಾನಲ್ಲ. ಜೀವನದಲ್ಲಿ ಬರುವುದನ್ನೆಲ್ಲ ಎದುರಿಸಿ ನಿಲ್ಲಬೇಕು.

* ಚಿತ್ರರಂಗದಲ್ಲಿನ ನಿಮ್ಮ ಸವಿನೆನಪುಗಳ ಬಗ್ಗೆ ಹೇಳಿ...

‘ಬುಲ್‌ಬುಲ್‌’ನಂತಹ ದೊಡ್ಡ ಸಿನಿಮಾ, ದೊಡ್ಡ ಹೀರೊ ಜತೆಗೆ ನಾನು ನಟಿಸುವೆ ಎಂದುಕೊಂಡಿರಲಿಲ್ಲ. ಸಿನಿಮಾರಂಗದ ಯೋಚನೆಯೇ ಇಲ್ಲದ ನನಗೆ, ಸುವರ್ಣಾವಕಾಶ ಸಿಕ್ಕಿತು. ಇಂಡಸ್ಟ್ರಿಗೆ ಕರೆದುಕೊಂಡು ಹೋಗಲು ದೇವರೇ ನಮ್ಮ ಮನೆಯ ಬಾಗಿಲು ತಟ್ಟಿ, ಮನೆಯ ಬಳಿಗೆ ಬಿಳಿಯ ಐರಾವತ ಕಳಿಸಿದಂತಾಯಿತು. ನಾನು ಇಂಡಸ್ಟ್ರಿಯಲ್ಲಿ ಇರುವವರೆಗೂ ನಿಮ್ಮ ಬ್ಯಾನರ್‌ಗೆ ಕಪ್ಪು ಚುಕ್ಕೆ ತರುವುದಿಲ್ಲವೆಂದುನಿರ್ದೇಶಕ ದಿನಕರ್‌ ಸರ್‌ಗೆ ಮಾತು ಕೊಟ್ಟಿರುವೆ. ಆ ಮಾತು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುವೆ. ಒಂದಂತು ನಿಜ, ಚಿತ್ರರಂಗದಲ್ಲಿನ ನನ್ನ ಏಳೂವರೆ ವರ್ಷಗಳ ಜರ್ನಿ ನನಗೆ ಸವಿನೆನಪಿನಂತಿದೆ.

‘ಆಟೋ, ಲಾರಿ ಅಥವಾ ಇನ್ಯಾವುದೋ ಗಾಡಿ ಮೇಲೆ ನಿಮ್ಮ ಫೋಟೊ ಬಿದ್ದಾಗ ಆ ಅಭಿಮಾನವನ್ನು ನೋಡಲು ಒಂಥರ ಖುಷಿಯಾಗುತ್ತದೆ’ ಎಂದು ದರ್ಶನ್‌ ಸರ್‌ ಒಮ್ಮೆ ಹೇಳಿದ್ದರು. ಇತ್ತೀಚೆಗೆ ಅಭಿಮಾನಿಗಳು ತಮ್ಮ ಆಟೋಗಳ ಮೇಲೆ ನನ್ನ ಭಾವಚಿತ್ರ ಹಾಕಿಕೊಂಡಾಗ ಅಂತಹ ಖುಷಿ ಸಿಕ್ಕಿತು.

* ಚಿತ್ರರಂಗದಲ್ಲಿ ಎಂದಾದರೂ ತಮಗೆ ಕಹಿ ಅನುಭವ ಆಗಿದೆಯಾ?

ಕಹಿ ಅನುಭವಗಳನ್ನು ನಾನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಾನು ಯಾವತ್ತೂ ನಕರಾತ್ಮಕವಾಗಿ ಯೋಚಿಸುವುದಿಲ್ಲ.ನಕಾರಾತ್ಮಕ ವಿಚಾರಗಳ ಬಗ್ಗೆ ಯೋಚಿಸಿ ಮನಸು ನೋಯಿಸಿಕೊಳ್ಳುವ ಕೆಲಸ ಮಾಡುವುದಿಲ್ಲ. ಒಳ್ಳೆಯದರ ಬಗ್ಗೆ ಮಾತ್ರ ಯೋಚಿಸುವೆ. ಒಂದು ಪಾತ್ರ ಮಾಡಿದ ಮೇಲೆ ಅದನ್ನು ಮಾಡಬಾರದಿತ್ತು, ಮಾಡಿ ತಪ್ಪು ಮಾಡಿಬಿಟ್ಟೆ ಎಂದೆಲ್ಲಾ ನನ್ನನ್ನು ನಾನೇ ಹಳಿಯುತ್ತಾ ಕೂರುವುದಿಲ್ಲ. ಆಗಿದ್ದು, ಆಗಿ ಹೋಗಿದೆ. ಮುಂದೆ ಏನು ಮಾಡಬೇಕು ಮತ್ತು ಮಾಡಬಾರದು ಎನ್ನುವುದರತ್ತ ಮಾತ್ರ ಚಿತ್ತ ಹರಿಸುತ್ತೇನೆ.

* ‘ನಂಬರ್‌ 1’ ಪಟ್ಟಕ್ಕೆ ಪೈಪೋಟಿ ನಡೆಸುತ್ತಿದ್ದೀರಾ?

‘ನಂಬರ್‌ 1’ ಪಟ್ಟ ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಎಲ್‌ಕೆಜಿಯಿಂದಲೇ ‘ನಂಬರ್ 1’ ಎನಿಸಿಕೊಳ್ಳುವ ಹಂಬಲ ಎಲ್ಲರಲ್ಲೂ ಇದ್ದೇ ಇರುತ್ತದೆ.ಸಿನಿಮಾ, ರಾಜಕಾರಣ, ಉದ್ಯಮ, ಕ್ರೀಡೆ ಹೀಗೆ ಎಲ್ಲಾ ರಂಗದಲ್ಲೂ ಈ ‘ನಂಬರ್‌ 1’ ಅಂಕಿ ಮೇಲೆ ಎಲ್ಲರ ಕಣ್ಣುಗಳಿರುತ್ತವೆ. ಹಾಗೆಯೇ ನನಗೂ ನಂಬರ್‌ 1 ಪಟ್ಟ ಧರಿಸುವ ಆಸೆಗಳಿವೆ. ಆ ಜಾಗ ಸುಮ್ಮಸುಮ್ಮನೇ ಸಿಗುವುದಿಲ್ಲ. ಆ ಸ್ಥಾನಕ್ಕೆ ಒಂದು ಮರ್ಯಾದೆ ಇದೆ, ಅದನ್ನುಅಲಂಕರಿಸಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಮುನ್ನಡೆಯಬೇಕು. ಕಾಂಪಿಟೇಷನ್‌ ಇರಲೇಬೇಕು, ಇಲ್ಲದಿದ್ದರೆ ಲೈಫಲ್ಲಿ ಮಜಾನೇ ಇರುವುದಿಲ್ಲ. ಈ ರೇಸ್‌ನಲ್ಲಿಅಕ್ಕಪಕ್ಕ ಸ್ಪರ್ಧಿಗಳು ಇರಬೇಕು, ಹಾಗಂತ ನಾನು ಓಡುವವರನ್ನು ನೋಡುತ್ತಾ ನಿಲ್ಲುವುದಿಲ್ಲ,ನನ್ನ ಗಮನವೂ ಅಂತಿಮ ಗುರಿಯತ್ತಲೇ ನೆಟ್ಟಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT