ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತೆರೆದ ಚಿತ್ರಮಂದಿರ

Last Updated 14 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
"ಬಿ.ಎಚ್‌. ಬಾಷಾ"
"ಜಾಕ್ ಮಂಜು"
"ಡಿ.ಆರ್‌. ಜೈರಾಜ್‌"
"ನಿರ್ಮಾಪಕ ಜಯಣ್ಣ"

ಎಂಟು ತಿಂಗಳ ಹಿಂದೆ ಸಂಪೂರ್ಣ ಬಂದ್ ಆಗಿದ್ದ ಚಿತ್ರಮಂದಿರಗಳು ಈಗ ಪುನರಾರಂಭವಾಗುತ್ತಿವೆ. ಈ ಹೊತ್ತಿನಲ್ಲಿ ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳಿಂದ ಅಂದರೆ ಚಿತ್ರೋದ್ಯಮದಲ್ಲಿ ಏನೆಲ್ಲಾ ತಯಾರಿಗಳು ನಡೆದಿವೆ ಎನ್ನುವುದನ್ನು ಚಿತ್ರೋದ್ಯಮದವರು ‘ಪ್ರಜಾಪ್ಲಸ್‌‘ ಜತೆಗೆ ಹಂಚಿಕೊಂಡಿದ್ದಾರೆ

ಇಂದಿನಿಂದ (ಅ.15) ರಾಜ್ಯದಲ್ಲಿ ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ಉಳಿದೆಡೆ ಚಿತ್ರಮಂದಿರಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿ,ಮಾರ್ಗಸೂಚಿ ಹೊರಡಿಸಿದೆ. ಇದರಿಂದ ಚಿತ್ರೋದ್ಯಮದಲ್ಲಿ ಚಟುವಟಿಕೆಗಳು ಶುರುವಾಗಿವೆ. ಹಾಗೆಯೇ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಿರುವ ಬಗ್ಗೆಯೂ ಚಿತ್ರೋದ್ಯಮದವರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಚಿತ್ರಮಂದಿರಗಳ ಮಾಲೀಕರಲ್ಲಿ ಕೆಲವರು ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರ ಸಜ್ಜುಗೊಳಿಸುತ್ತಿದ್ದಾರೆ. ಆದರೆ, ಬಹುತೇಕರು ಕಾದು ನೋಡುವ ತಂತ್ರ‌‌ ಅನುಸರಿಸುತ್ತಿದ್ದಾರೆ. ಇನ್ನು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಬಹುತೇಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ತಯಾರಾಗಿವೆ.

ಲಾಕ್‌ಡೌನ್‌ ವೇಳೆತೊಂದರೆಗೆ ಸಿಲುಕಿದ್ದ ಚಿತ್ರಗಳನ್ನು ಮರುಬಿಡುಗಡೆ ಮಾಡಿ, ಜನರು ಚಿತ್ರಮಂದಿರಕ್ಕೆ ಕರೆತರುವ ದಾರಿ ಸುಗಮಗೊಳಿಸುವ ಪ್ರಯತ್ನ ಆರಂಭಿಸಲಾಗಿದೆ. ಇದಕ್ಕಾಗಿ ಕೆಲವು ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಟಿಕೆಟ್‌ ದರದಲ್ಲಿ ಶೇ 50ರವರೆಗೆ ರಿಯಾಯಿತಿ ಪ್ರಕಟಿಸಿವೆ.

ಚಿತ್ರಗಳ ಮರು ಬಿಡುಗಡೆ

‘ಶಿವಾರ್ಜುನ’, ‘ಲವ್‌ಮಾಕ್ಟೇಲ್’,‌ ‘ಶಿವಾಜಿ ಸುರತ್ಕಲ್’, ‘5 ಅಡಿ 7 ಅಂಗುಲ’, ‘ಕಾಣದಂತೆ ಮಾಯವಾದನುʼ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರಗಳು ಈಗಾಗಲೇ ಒಮ್ಮೆ ಚಿತ್ರಮಂದಿರ, ಒಟಿಟಿ ಹಾಗೂ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಇದರಿಂದ ಪ್ರೇಕ್ಷಕರು ಕುತೂಹಲದಿಂದ ಚಿತ್ರಮಂದಿರಕ್ಕೆ ಬರಬಹುದು ಎನ್ನುವ ಪೂರ್ಣ ಪ್ರಮಾಣದ ನಿರೀಕ್ಷೆಯೂ ಚಿತ್ರಮಂದಿರದ ಮಾಲೀಕರಲ್ಲಿ ಇಲ್ಲ.

‘ನಾಳೆ ಕೆಲವರಷ್ಟೇ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಿದ್ದಾರೆ. ನಾನುಒಂದು ವಾರ ನೋಡಿ ಬಾಗಿಲು ತೆರೆಯುವೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ತುಮಕೂರಿನ ಗಾಯತ್ರಿ ಚಿತ್ರಮಂದಿರದ ಮಾಲೀಕ ಡಿ.ಆರ್‌. ಜೈರಾಜ್‌.

ಡಿ.ಆರ್‌. ಜೈರಾಜ್‌.

‘ಹೊಸ ಚಿತ್ರಗಳ ಬಿಡುಗಡೆಯಾಗುವವರೆಗೂ ನಾನು ಬಾಗಿಲು ತೆರೆಯುವುದಿಲ್ಲ. ಬಾಗಿಲು ತೆರೆದರೂ ಅ.23ರ ನಂತರವೇ’ ಎನ್ನುವುದು ವೀರೇಶ್‌ ಮತ್ತು ವಿಕ್ಟರಿ ಚಿತ್ರಮಂದಿರಗಳ ಮಾಲೀಕ ಹಾಗೂ ಕರ್ನಾಟಕ ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ನಿರ್ಧಾರ.

‘ನಮ್ಮ ಪ್ರಕಾರ ಸದ್ಯ ಶೇ 10ರಷ್ಟು ಚಿತ್ರಮಂದಿರಗಳಷ್ಟೇ ಬಾಗಿಲು ತೆರೆಯಬಹುದು. ಉಳಿದ ಚಿತ್ರಮಂದಿರಗಳು ಇನ್ನು ಎರಡುಮೂರು ವಾರ ಬಾಗಿಲು ತೆರೆಯುವುದು ಅನುಮಾನ. ಹೊಸ ಚಿತ್ರಗಳ ಬಿಡುಗಡೆ ಆಗುವವರೆಗೂ ದೊಡ್ಡ ಚಿತ್ರಮಂದಿರಗಳು ಬಾಗಿಲು ತೆರೆಯಲಾರವು’ ಎನ್ನುವುದುನಿರ್ಮಾಪಕ ಹಾಗೂ ಚಿತ್ರವಿತರಕ ಜಯಣ್ಣ ಅನಿಸಿಕೆ.

ಜಯಣ್ಣ

ಚಿತ್ರಮಂದಿರಕ್ಕೆ ಸ್ಯಾನಿಟೈಸಿಂಗ್‌

‘ಬೇರೆ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ನವೆಂಬರ್‌ವರೆಗೆ ಆರಂಭಿಸುತ್ತಿಲ್ಲ. ಇನ್ನು ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ ಹಾಗೂ ಮೈಸೂರಿನಲ್ಲಿ ಚಿತ್ರಮಂದಿರಗಳ ಮಾಲೀಕರು ತಮ್ಮ ಬೇಡಿಕೆಗಳಿಗೆ ಸರ್ಕಾರಸ್ಪಂದಿಸುವವರೆಗೂ ಬಾಗಿಲು ತೆರೆಯದಿರಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ನಾನೂ ಬಾಗಿಲು ತೆರೆಯಲು ನಿರ್ಧರಿಸಿಲ್ಲ. ಬಾಗಿಲು ತೆರೆಯುವ ಒಂದು ದಿನ ಮುಂಚಿತವಾಗಿ ಸ್ಯಾನಿಟೈಸ್‌‌ ಮಾಡಿಸಲಿದ್ದೇನೆ’ ಎನ್ನುವುದು ನರ್ತಕಿ ಮತ್ತು ಗೋವರ್ಧನ್‌ ಚಿತ್ರಮಂದಿರಗಳ ಮಾಲೀಕ ಹಾಗೂ ಚಿತ್ರ ವಿತರಕ ಬಿ.ಎಚ್. ಬಾಷಾ ಅಭಿಪ್ರಾಯ.

ಬಿ.ಎಚ್. ಬಾಷಾ

ಟಿಕೆಟ್‌ ದರದಲ್ಲಿ ರಿಯಾಯ್ತಿ

ಹಳೆಯ ಚಿತ್ರಗಳನ್ನು ಪುನಃ ಬಿಡುಗಡೆ ಮಾಡುತ್ತಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುವುದು ಮೊದಲ ಆದ್ಯತೆ. ಹಾಗಾಗಿ ಚಿತ್ರಮಂದಿರಗಳಲ್ಲಿ ₹40 ಮತ್ತು ₹50 ಟಿಕೆಟ್ ದರ ನಿಗದಿಪಡಿಸಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ₹99 ಮತ್ತು ₹149 ದರ ನಿಗದಿಪಡಿಸಿದ್ದಾರೆ ಎನ್ನುತ್ತಾರೆ ಚಿತ್ರವಿತರಕ ಮತ್ತು ನಿರ್ಮಾಪಕ ಜಾಕ್ ಮಂಜು.

ಜಾಕ್ ಮಂಜು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಎಲ್ಲೆಲ್ಲಿ ಪ್ರದರ್ಶನ?

ಪಿವಿಆರ್‌ ಸಿನಿಮಾಸ್: ‘ಬೆಂಗಳೂರಿನಲ್ಲಿ ಪಿವಿಆರ್‌ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಆರು ಮಾಲ್‌ಗಳಲ್ಲಿದ್ದು, ಆರೂ ಕಡೆಯೂ ನಾಳೆ (ಅ.15ರಿಂದ)ಯಿಂದಲೇ ಪುನರಾರಂಭವಾಗಲಿವೆ. ದಿನದಲ್ಲಿಎರಡರಿಂದ ಮೂರು ಪ್ರದರ್ಶನಗಳು ಮಾತ್ರ ಇರಲಿದೆ. ಅ.16ಕ್ಕೆ ಮರು ಬಿಡುಗಡೆಯಾಗಲಿರುವ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಟಿಕೆಟ್ ದರದಲ್ಲಿ ಶೇ 50 ರಿಯಾಯಿತಿ ಘೋಷಿಸಿದ್ದೇವೆ’ ಎನ್ನುವುದು ಪಿವಿಆರ್‌ ಸಿನಿಮಾಸ್‌ ಪ್ರೋಗ್ರಾಮ್‌ ಮ್ಯಾನೇಜರ್‌ ಜ್ಯೋತಿಕುಮಾರ್‌ ಪ್ರತಿಕ್ರಿಯೆ.

ಐನಾಕ್ಸ್‌: ‘ಬೆಂಗಳೂರಿನಲ್ಲಿ ಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳು ಒಂಬತ್ತು ಮಾಲ್‌ಗಳಲ್ಲಿ ಇವೆ. ಸದ್ಯ ಎಂ.ಜಿ. ರಸ್ತೆ ಮತ್ತು ವೈಟ್‌ಫೀಲ್ಡ್‌‌ನಲ್ಲಿರುವಐನಾಕ್ಸ್‌ ಮಲ್ಟಿಪ್ಲೆಕ್ಸ್‌ಗಳುಮಾತ್ರ ನಾಳೆಯಿಂದ ಪ್ರದರ್ಶನಕ್ಕೆ ಸಜ್ಜಾಗಿವೆ. ಒಂದೆರಡು ವಾರಗಳಲ್ಲಿ ಉಳಿದ ಏಳು ಮಾಲ್‌ಗಳಲ್ಲಿ ಕೂಡ ಪುನರಾರಂಭವಾಗಲಿವೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಬೇಕು. ಕೌಂಟರ್‌ನಲ್ಲೂ ಡಿಜಿಟಲ್‌ ಪಾವತಿಯಿಂದ ಮಾತ್ರ ಟಿಕೆಟ್‌ ಪಡೆಯಬಹುದು’ ಎನ್ನುತ್ತಾರೆ ಐನಾಕ್ಸ್‌ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ದಕ್ಷಿಣ ಭಾರತದ ಪ್ರತಿನಿಧಿಯೊಬ್ಬರು.

ಸಿನಿಪೋಲ್‌: ‘ಬೆಂಗಳೂರಿನಲ್ಲಿ ಬಿನ್ನಿಪೇಟೆಯ ಇಟಿಎ, ಬನ್ನೇರುಘಟ್ಟ ರಸ್ತೆಯ ರಾಯಲ್‌ ಮೀನಾಕ್ಷಿ ಹಾಗೂ ಕನ್ನಿಂಗ್‌ಹ್ಯಾಮ್‌ ರಸ್ತೆಯ ಫನ್‌ ಸಿನಿಮಾಸ್‌ನಲ್ಲಿ ಸಿನಿಪೋಲ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ನಾಳೆಯಿಂದಲೇ ಹಳೆಯ ಸಿನಿಮಾಗಳ ಪ್ರದರ್ಶನ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’ ಎಂದು ಸಿನಿಪೋಲ್‌ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ನಿರ್ವಹಣೆಯ ಉಸ್ತುವಾರಿ ಪ್ರತಿನಿಧಿ ತಿಳಿಸಿದ್ದಾರೆ.

ಮಾರ್ಗಸೂಚಿಗಳೇನು?

* ಕಂಟೈನ್‌ಮೆಂಟ್‌ ವಲಯದ ಚಿತ್ರಮಂದಿರ ತೆರೆಯುವಂತಿಲ್ಲ

*ಚಿತ್ರಮಂದಿರಗಳಲ್ಲಿ ಶೇ 50 ಆಸನಗಳ ಭರ್ತಿಗೆಮಾತ್ರ ಅವಕಾಶ

*ಪ್ರೇಕ್ಷಕರು ಮಾಸ್ಕ್‌ ಧರಿಸುವುದು ಮತ್ತು 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

*ಪ್ರವೇಶ ದ್ವಾರಗಳಲ್ಲಿ ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯ

*ಪ್ರತಿ ಪ್ರದರ್ಶನಕ್ಕೆ ಚಿತ್ರಮಂದಿರವನ್ನುಸ್ಯಾನಿಟೈಸ್ ಮತ್ತು ಸ್ವಚ್ಛ ಮಾಡುವುದು‌ ಕಡ್ಡಾಯ.

*ಚಿತ್ರಮಂದಿರದಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಸದಾ 24ರಿಂದ 30 ಡಿಗ್ರಿ ಸೆಂಟಿಗ್ರೇಡ್‌ನಲ್ಲಿರಬೇಕು

*ಚಿತ್ರಮಂದಿರದಲ್ಲಿ ವಯಸ್ಸಾದವರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವ ಸಿಬ್ಬಂದಿ ಸಾರ್ವಜನಿಕ ಸಂಪರ್ಕಕ್ಕೆ ಬರುವಂತಹ ಮುನ್ನೆಲೆಯ ಕೆಲಸಗಳಲ್ಲಿ ತೊಡಗುವಂತಿಲ್ಲ.

ಹುಬ್ಬಳ್ಳಿಯಲ್ಲಿ ಚಿತ್ರಮಂದಿರ ಆರಂಭ ಇಲ್ಲ

ಹುಬ್ಬಳ್ಳಿ: ಲಾಕ್ ಡೌನ್ ಅವಧಿಯಲ್ಲಿ ಸರ್ಕಾರ ನಮ್ಮ ನೆರವಿಗೆ ಬಂದಿಲ್ಲ, ಈ ಅವಧಿಯಲ್ಲಿ ವಿದ್ಯುತ್ ಬಿಲ್ ಸಾಕಷ್ಟು ಬಂದಿದೆ. ಪರವಾನಗಿ ಶುಲ್ಕವನ್ನು ಬಹಳಷ್ಟು ಹೆಚ್ಚಳ ಮಾಡಲಾಗಿದೆ. ಈ ಬೇಡಿಕೆಗಳು ಈಡೇರುವ ತನಕ ಚಿತ್ರಮಂದಿರಗಳನ್ನು ಆರಂಭಿಸುವುದಿಲ್ಲ ಎಂದು ಹುಬ್ಬಳ್ಳಿಯ ಶ್ರೀನಿವಾಸ ಚಿತ್ರಮಂದಿರದ ಮಾಲೀಕ ರಾಜು ಕುಲಕರ್ಣಿ, ಸುಜಾತ ಥಿಯೇಟರ್ ಮಾಲೀಕ ಶ್ರೇಯಸ್ ಹೇಳಿದರು. ಪ್ರದರ್ಶನ ಮಂಡಳಿ ಈ ತೀರ್ಮಾನ ಕೈಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT