ಸೋಮವಾರ, ಜುಲೈ 26, 2021
21 °C

ಮತ್ತೆ ಕಿರುತೆರೆಗೆ ತೇಜಸ್ವಿನಿ ಪಯಣ

ರೇಷ್ಮಾ Updated:

ಅಕ್ಷರ ಗಾತ್ರ : | |

‘ನನಗೆ ಮದುವೆಯಾಗಿ, ಮಕ್ಕಳಾಗಿ, ಮುದುಕಿಯಾದರೂ ನಟಿಸುತ್ತಲೇ ಇರುತ್ತೇನೆ’ ಎನ್ನುವ ಮೂಲಕ ನಟನೆಯ ಮೇಲಿನ ಒಲವು ವ್ಯಕ್ತಪಡಿಸುವ ನಟಿ ತೇಜಸ್ವಿನಿ ಪ್ರಕಾಶ್, ದರ್ಶನ್‌ ಅಭಿನಯದ ‘ಗಜ’ ಸಿನಿಮಾ ಮೂಲಕ ಖ್ಯಾತಿ ಗಳಿಸಿದವರು. ‘ಮಾತಾಡ್ ಮಾತಾಡ್‌ ಮಲ್ಲಿಗೆ’, ‘ಸವಿಸವಿ ನೆನಪು’, ‘ಅರಮನೆ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತೇಜಸ್ವಿನಿ ಈಗ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್‌ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಮೊದಲು ನಟಿಸಿದ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ನಿಹಾರಿಕಾ’. ಈಗ ಕಲರ್ಸ್‌ ಕನ್ನಡ ವಾಹಿನಿಯ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ತೇಜಸ್ವಿನಿ ಅವರ ತಂದೆ ಸಿನಿಮಾ ರಂಗದಲ್ಲಿ ಕೆಲಸ ಮಾಡಿದವರು. ತಾಯಿ ಕಿರುತೆರೆ ನಟಿ. ಆ ಕಾರಣಕ್ಕೆ ನಟನೆ ಅವರಿಗೆ ಬಳುವಳಿಯಾಗಿ ಬಂದಿದೆ. ಇದು ನಟನೆಯ ಅಭಿರುಚಿ ಹುಟ್ಟಲು ಕಾರಣವೂ ಆಗಿತ್ತು. ಜೊತೆಗೆ ಬಾಲ್ಯದಿಂದಲೂ ಇವರಿಗೆ ನೃತ್ಯದ ಮೇಲೆ ವಿಪರೀತ ಒಲವು. ನೃತ್ಯ ಕಲಿಕೆಯಲ್ಲಿ ತೊಡಗಿರುವಾಗಲೇ ನಟನೆಯ ಅವಕಾಶ ಸಿಕ್ಕಿತ್ತು. ಹಾಗಾಗಿ 16ನೇ ವಯಸ್ಸಿಗೆ ಸಿನಿರಂಗಕ್ಕೆ ಕಾಲಿಟ್ಟರು.

‘ಮಸಣದ ಮಕ್ಕಳು’ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಸಿನಿಮಾಕ್ಕೆ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದರು. ಆ ಕಾರಣಕ್ಕೆ ನಟನೆಯ ಮೇಲೆ ಇನ್ನಷ್ಟು ಪ್ರೀತಿ ಹಾಗೂ ನಟಿಸುವ ಹುಮಸ್ಸು
ಮೂಡಿತ್ತು. 

ಚಿತ್ರರಂಗದಿಂದ ಮತ್ತೆ ಕಿರುತೆರೆಗೆ ಮರಳಿದ ಬಗ್ಗೆ ತೇಜಸ್ವಿನಿ ಹೇಳುವುದು ಹೀಗೆ: ‘ನಿಹಾರಿಕಾದಲ್ಲಿ ಮಾಡಿದ ಮೇಲೆ ಮತ್ತೆ ಧಾರಾವಾಹಿಯಲ್ಲಿ ನಟಿಸುವುದರ ಬಗ್ಗೆ ಗೊಂದಲದಲ್ಲಿದ್ದೆ. ಹಾಗಿರುವಾಗಲೇ ‘ನನ್ನರಸಿ ರಾಧೆ’ಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಅದರಲ್ಲೂ ನೆಗೆಟಿವ್ ಪಾತ್ರ ಎಂದಾಕ್ಷಣ ಎಲ್ಲೋ ಒಂದು ಕಡೆ ಮಾಡುವ ಮನಸ್ಸಾಯಿತು. ಭಿನ್ನಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಇದ್ದಿದ್ದು ಅದಕ್ಕೆ ಕಾರಣವಿರಬಹುದು. ಸದಾ ಪಾಸಿಟಿವ್‌ ಪಾತ್ರಗಳನ್ನೇ ಮಾಡಿದ್ದ ನನಗೆ ಈ ಪಾತ್ರ ಚಾಲೆಂಜಿಂಗ್‌ ಅನ್ನಿಸಿತ್ತು. ಆ ಕಾರಣಕ್ಕೆ ಮರಳಿ ಧಾರಾವಾಹಿಯಲ್ಲಿ ನಟಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ.

‘ನನ್ನರಸಿ ರಾಧೆಯ ಲಾವಣ್ಯ ಪಾತ್ರ ನನಗೆ ತೃಪ್ತಿ ನೀಡಿದೆ. ನಾನು ಇಷ್ಟು ದಿನ ನಟಿಸಿದ್ದಕ್ಕೂ, ಈ ಪಾತ್ರಕ್ಕೂ ತುಂಬಾನೇ ವ್ಯತ್ಯಾಸವಿದೆ. ಒಳ್ಳೆಯ ಹುಡುಗಿ ಪಾತ್ರಕ್ಕೆ ಸೀಮಿತವಾಗಿದ್ದ ನಾನು ಮೊದಲ ಬಾರಿ ಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ಜೀವನದಲ್ಲಿ ಒಮ್ಮೆಯಾದರೂ ನೆಗೆಟಿವ್ ಪಾತ್ರ ಮಾಡಬೇಕೆಂಬ ಆಸೆಯಿತ್ತು. ಈಗ ಅದು ನೆರವೇರಿದೆ’ ಎನ್ನುವ ಸಂಭ್ರಮ ಅವರದ್ದು.

‘ಸಿನಿಮಾ ಅಥವಾ ಧಾರಾವಾಹಿಯಾಗಲಿ ನಟನೆಗೆ ಹೆಚ್ಚು ಪ್ರಾಮುಖ್ಯ ಇರುವ ಪಾತ್ರಗಳಲ್ಲಿ ನಟಿಸಲು ಇಷ್ಟ’ ಎನ್ನುವ ಅವರು, ನಿಜಜೀವನದಲ್ಲಿ ನಮ್ಮದಲ್ಲದಂತಹ ಪಾತ್ರದಲ್ಲಿ ನಟಿಸುವುದು ಇಷ್ಟವಾಗುತ್ತದೆ ಎನ್ನುತ್ತಾರೆ.

ನಟಿಯರಾದ ಕಲ್ಪನಾ ಹಾಗೂ ಸೌಂದರ್ಯ ಬಹಳ ಇಷ್ಟ ಎನ್ನುವ ತೇಜಸ್ವಿನಿ, ‘ಅವರು ಮಾಡಿರುವಂತಹ ಪಾತ್ರಗಳನ್ನು ಮಾಡಲು ಇಷ್ಟ’ ಎನ್ನುತ್ತಾರೆ.

‘ಜನರು ಸಿನಿಮಾಗಿಂತ ಧಾರಾವಾಹಿಯ ನಟ–ನಟಿಯರನ್ನೇ ಹೆಚ್ಚು ನೆನಪಿನಲ್ಲಿರಿಸಿಕೊಳ್ಳುತ್ತಾರೆ. ಟಿ.ವಿ.ಯಲ್ಲಿ ‍‍ಪ್ರತಿದಿನ ಧಾರಾವಾಹಿ ನೋಡಿ ನೋಡಿ ನಾವು ಅವರ ಮನೆಯವರಂತೆ ಆಗಿರುತ್ತೇವೆ. ಸಿನಿಮಾದ ವಿಷಯಕ್ಕೆ ಬಂದರೆ ಹೆಚ್ಚು ಖ್ಯಾತಿ ಇರುವ ನಟ–ನಟಿಯರ ಸಿನಿಮಾವನ್ನಷ್ಟೇ ಥಿಯೇಟರ್‌ನಲ್ಲಿ ನೋಡುತ್ತಾರೆ. ಧಾರಾವಾಹಿ ಹಾಗಲ್ಲ. ಒಂದು ಮನೆಯಲ್ಲಿ ಕನಿಷ್ಠ ಇಬ್ಬರಾದರೂ ಧಾರಾವಾಹಿ ನೋಡುತ್ತಾರೆ. ಆ ಕಾರಣಕ್ಕೆ ನಾವು ಮಾಡಿದ ಪಾತ್ರ ಅವರ ಮನಸ್ಸಿನಲ್ಲಿ ಹೆಚ್ಚು ಉಳಿದಿರುತ್ತದೆ’ ಎನ್ನುವ ಮೂಲಕ ಸಿನಿಮಾ ಹಾಗೂ ಧಾರಾವಾಹಿ ಪಾತ್ರಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ. 

‘ಮುಂದಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿ ಎನ್ನುವುದಕ್ಕಿಂತ ಮನಸ್ಸಿಗೆ ಖುಷಿ ಕೊಡುವ ಪಾತ್ರಗಳಲ್ಲಿ ನಟಿಸುವ ಆಸೆ. ಜನ ಮೆಚ್ಚುವ ಪಾತ್ರಗಳನ್ನು ಮಾಡಬೇಕು. ನನಗೆ ಹೀರೊಯಿನ್ ಆಗಬೇಕು ಎನ್ನುವುದಕ್ಕಿಂತ ಒಳ್ಳೆಯ ನಟಿ ಎನ್ನಿಸಿಕೊಳ್ಳಬೇಕು. ಆ ಕಾರಣಕ್ಕೆ ಪೋಷಕ ಪಾತ್ರದಲ್ಲೂ ನಟಿಸಲು ಸಿದ್ಧ’ ಎನ್ನುತ್ತಾರೆ. 

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳ ಸಿನಿಮಾಗಳಲ್ಲೂ ನಟಿಸಿದ್ದಾರೆ ತೇಜಸ್ವಿನಿ. ಸದ್ಯ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು