ಕ್ಯಾಮೆರಾ ಹಿಂದಿನ ಚಮತ್ಕಾರದ ಕಣ್ಣು

ಭಾನುವಾರ, ಏಪ್ರಿಲ್ 21, 2019
32 °C

ಕ್ಯಾಮೆರಾ ಹಿಂದಿನ ಚಮತ್ಕಾರದ ಕಣ್ಣು

Published:
Updated:

‘ಚಲನಚಿತ್ರಕ್ಕೆ ಶೂಟ್ ಮಾಡುವ ಕ್ಯಾಮೆರಾ ಎಂಥದ್ದಾದರೂ ಇರಲಿ. ಆದರೆ ಅದರ ಹಿಂದೆ ಇರುವ ಛಾಯಾಗ್ರಾಹಕ ಕ್ರಿಯೇಟಿವ್, ಉತ್ಸಾಹಿ ಮತ್ತು ವಿಭಿನ್ನ ಆಲೋಚನೆಯುಳ್ಳವರು ಇರಬೇಕು. ಆಗ ಮಾತ್ರ ಸೀಮಿತ ಚೌಕಟ್ಟಿನ ಮಧ್ಯೆಯೂ ಹೊಸತನ ತರಲು ಸಾಧ್ಯ’.

ಹೀಗೆ ಹೇಳುವ ಸಿನಿ ಛಾಯಾಗ್ರಾಹಕ ಎನ್.ಗೋವಿಂದರಾಜ್‌ ಛಾಯಾಗ್ರಹಣ ಕ್ಷೇತ್ರವನ್ನು ನೋಡುವುದೇ ಬೇರೆ ರೀತಿಯಲ್ಲಿ.

‘ಇಲ್ಲಿ ಎಲ್ಲವೂ ಹೇಳಿದೆ. ಎದುರಿಗೆ ವಸ್ತುವನ್ನು ಇತರರಗಿಂತ ಭಿನ್ನವಾಗಿ ನೋಡುವ, ಅದರ ಒಳಿತು-ಕೆಡಕನ್ನು ಸೂಕ್ಷ್ಮವಾಗಿ ಗ್ರಹಿಸಿ ಅದನ್ನು ಚಲನಚಿತ್ರದ ಕಥೆಯನುಸಾರ ಪ್ರಸ್ತುತ ಪಡಿಸುವುದೇ ಛಾಯಾಗ್ರಹಕನ ಎದುರು ಇರುವ ಸವಾಲು’. ಈ ಸಾಲುಗಳನ್ನೇ ಸ್ಫೂರ್ತಿಯಾಗಿಸಿಕೊಂಡು ಬದುಕನ್ನು ರೂಪಿಸಿಕೊಂಡವರು ಅವರು.

ಬೆಂಗಳೂರಿನ ಹೆಸರಘಟ್ಟ ಸಮೀಪದ ಊರಿನವರಾದ ಗೋವಿಂದರಾಜ 15ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಉಳಿದು ಛಾಯಾಗ್ರಹಣ ಕ್ಷೇತ್ರದಲ್ಲಿ ಬಗೆಬಗೆಯ ಪ್ರಯೋಗಗಳನ್ನು ಮಾಡಿದ್ದಾರೆ.

ಒಂದು ಕ್ಯಾಮೆರಾ ಅಥವಾ ಮೂರಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಏಕಕಾಲಕ್ಕೆ ಬಳಸುವುದರಿಂದ ಏನೆಲ್ಲ ಮಾಡಬಹುದು ಮತ್ತು ಯಾವುದೆಲ್ಲ ಸ್ವರೂಪದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬಹುದು ಎಂಬುದು ಅವರು ಆಸಕ್ತಿಕರ ವಿಷಯ. ಕಡಿಮೆ ವೆಚ್ಚದಲ್ಲಿ ಅತ್ಯಲ್ಪ ಸಲಕರಣೆಗಳನ್ನು ಬಳಸಿಕೊಂಡು ಹೇಗೆ ಚಿತ್ರ ನಿರ್ಮಿಸಬಹುದು ಎಂಬುದನ್ನು ತಿಳಿಸಿಕೊಡುವುದು ಅವಗೆ ಖುಷಿ.

ಒಂದೇ ಕ್ಯಾಮೆರಾ ಸಾಕು!

ಬೆಂಗಳೂರಿನ ಯಶವಂತಪುರದ ಬಳಿ ‘ಬಿಎಂಜಿ ಮೇಡಿಯಾ’ ಎಂಬ ಪ್ರೊಡಕ್ಷನ್ ಹೌಸ್ ಹೊಂದಿರುವ ಅವರು ಕಿರುಚಿತ್ರಗಳನ್ನು ಸಿದ್ಧಪಡಿಸುತ್ತಾರೆ. ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ.

ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ತರಬೇತಿ ಕೊಟ್ಟು ದಾರಿ ತೋರುತ್ತಾರೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಲು ಇಚ್ಛೆ ಹೊಂದಿದವರಿಗೆ ಲಭ್ಯವಿರುವ ವಿಪುಲ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಮುನ್ನಡೆಯಲು ಉತ್ಸಾಹ ತುಂಬುತ್ತಾರೆ. ಚಿತ್ರರಂಗ ತರಬೇತಿ ಸಂಸ್ಥೆಗಳಲ್ಲಿ ಅವರು ಉಪನ್ಯಾಸಗಳನ್ನು ಸಹ ನೀಡುತ್ತಾರೆ.

‘ಛಾಯಾಗ್ರಹಣ ಕ್ಷೇತ್ರದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ನಾನು ಕೆಲ ದಿನ ಸುಂದರನಾಥ ಸುವರ್ಣ ಮತ್ತು ಕೆಲ ಹಿರಿಯ ಛಾಯಾಗ್ರಹಕರ ಜೊತೆ ಕೆಲಸ ಮಾಡಿದೆ. ಕೆಲ ವರ್ಷ ಎಂಟಿವಿ ವಾಹಿನಿ ಮತ್ತು ಸುದ್ದಿ ವಾಹಿನಿಯಲ್ಲೂ ಕಾರ್ಯನಿರ್ವಹಿಸಿದೆ. ಎಷ್ಟೇ ಕಷ್ಟ-ನಷ್ಟ ಎದುರಾದರೂ ಚಿತ್ರರಂಗದಲ್ಲೇ ಮುಂದುವರೆಯಬೇಕೆಂದು ನಿರ್ಧರಿಸಿ, ಕನ್ನಡ ಚಲನಚಿತ್ರಗಳಿಗೆ ಛಾಯಾಗ್ರಹಣ ಮಾಡತೊಡಗಿದೆ’ ಎನ್ನುತ್ತಾರೆ ಗೋವಿಂದರಾಜ್. ‘3-ಡಿ ಚಲನಚಿತ್ರವೊಂದಕ್ಕೆ ನಾನು ಮೊದಲ ಬಾರಿಗೆ ಛಾಯಾಗ್ರಹಣ ಮಾಡಿದೆ. ಆದರೆ ಕಾರಣಾಂತರದಿಂದ ತೆರೆ ಕಾಣಲಿಲ್ಲ.

‘ವರ್ತಮಾನ’ದ ವಿಶೇಷ

ನಂತರದ ವರ್ಷಗಳಲ್ಲಿ ನಟ ಸಂಚಾರಿ ವಿಜಯ ಅಭಿನಯದ ‘ವರ್ತಮಾನ’, ‘ರಾಮರಾಜ್ಯ’ ಮುಂತಾದ ಚಲನಚಿತ್ರಗಳಿಗೆ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದೆ. ಇಡೀ ‘ವರ್ತಮಾನ’ ಚಿತ್ರವನ್ನು ಒಂದೇ ಕ್ಯಾಮೆರಾ, ಸ್ಟ್ಯಾಂಡ್ ಮತ್ತು ಲೆನ್ಸ್ ಬಳಸಿಕೊಂಡು ಇಡೀ ಛಾಯಾಗ್ರಹಣ ಮಾಡಿದ್ದು ವಿಶೇಷ' ಎಂದು ನೆನಪಿಸಿಕೊಳ್ಳುತ್ತಾರೆ.

‘ಬಹುರಾಷ್ಟ್ರೀಯ ಕಂಪನಿಗಳು ಒಂದೇ ತೆರನಾದ ಕ್ಯಾಮೆರಾಗಳನ್ನು ಸಿದ್ಧಪಡಿಸುತ್ತವೆ. ಹಾಲಿವುಡ್‌ಗೆ ಅತ್ಯಾಧುನಿಕ, ಬಾಲಿವುಡ್‌ಗೆ ಆಧುನಿಕ ಮತ್ತು ಸ್ಯಾಂಡಲ್‌ವುಡ್‌ಗೆ ಸರಳ ಎಂಬ ಭಾವನೆಯಲ್ಲಿ ಕ್ಯಾಮೆರಾ ಸಿದ್ಧಪಡಿಸುವುದಿಲ್ಲ. ಆದರೆ ನಮ್ಮೊಳಗಿನ ಮನೋಸ್ಥಿತಿ ಕ್ಯಾಮೆರಾವನ್ನು ಬೇರೆ ರೀತಿಯಲ್ಲಿ ನೋಡುವಂತೆ ಮಾಡುತ್ತದೆ. ಅಂತಹ ಯೋಚನೆಯಿಂದ ಹೊರಬರಬೇಕಿದೆ. ಲಭ್ಯ ಸಲಕರಣೆ, ಅವಕಾಶ ಸದ್ಬಳಕೆ ಮಾಡಬೇಕಿದೆ' ಎಂಬುದು ಗೋವಿಂದರಾಜರ ಧೋರಣೆ.

ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಆಗಿರುವ ಮನರೂಪ ಚಿತ್ರದಲ್ಲೂ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಿಸರ್ಗದ ಬೆಳಕನ್ನೇ ಆಧರಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಅವರ ಛಾಯಾಗ್ರಹಣದ ಇನ್ನೊಂದು ಚಿತ್ರ ಅಂತಿಮ ಹಂತದಲ್ಲಿದ್ದು ತೆರೆ ಕಾಣಬೇಕಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !