ಬುಧವಾರ, ಸೆಪ್ಟೆಂಬರ್ 18, 2019
25 °C

ಸೆಕ್ಷನ್‌ 375: ಅಕ್ಷಯ್‌ ಭವಿಷ್ಯ

Published:
Updated:
Prajavani

ವೈಯಕ್ತಿಕ ಜೀವನದ ಜಂಜಾಟದಲ್ಲಿ ಕಳೆದು ಹೋಗಿದ್ದ ನಟ ಅಕ್ಷಯ್‌ ಖನ್ನಾ ಬಹಳ ದಿನಗಳ ನಂತರ ‘ಸೆಕ್ಷನ್‌ 375‘ ಚಿತ್ರದಲ್ಲಿ ನಟಿಸಿದ್ದಾರೆ. ಅದೂ, ಅತ್ಯಾಚಾರಿ ಪರ ವಕಾಲತ್ತು ವಹಿಸುವ ವಕೀಲನ ಪಾತ್ರದಲ್ಲಿ. ಇದು ಖಳನ ಛಾಯೆ ಹೊಂದಿರುವ ಪಾತ್ರ. 

ಅಜಯ್‌ ಬಹ್ಲ ನಿರ್ದೇಶನ ಚಿತ್ರ ಸೆಪ್ಟೆಂಬರ್‌ 13ರಂದು ಬಿಡುಗಡೆಯಾಗಲಿದ್ದು ಅಕ್ಷಯ್‌ ಖನ್ನಾ ಜತೆ ರಿಚಾ ಛಡ್ಡಾ ನಟಿಸಿದ್ದಾರೆ. ಚಿತ್ರದ ಪ್ರೊಮೊ, ಟೀಸರ್‌ ಬಿಡುಗಡೆಯಾಗಿವೆ. ಅತ್ಯಾಚಾರ ಪ್ರಕರಣವೊಂದರ ಸುತ್ತ ಸುತ್ತುವ ಚಿತ್ರಕತೆ ದೇಶದ ನ್ಯಾಯಾಂಗ ವ್ಯವಸ್ಥೆ, ಕಾನೂನು, ಸಾಕ್ಷಿಗಳು, ವಕೀಲಿ ವೃತ್ತಿ, ಮಾನವೀಯ ಸಂಬಧಗಳ ವಿವಿಧ ಮಜಲುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಎದುರಾಳಿ ವಕೀಲರಾಗಿ ಅಕ್ಷಯ್‌ ಮತ್ತು ರೀಚಾ ಅದ್ಭುತವಾಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಸತತ ಸೋಲುಗಳಿಂದ ಕಂಗೆಟ್ಟಿರುವ ಅಕ್ಷಯ್‌ ಖನ್ನಾ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಿಂದಾದರೂ ವೃತ್ತಿ ಜೀವನದ ಗ್ರಾಫ್‌ ಮೇಲೇರಬಹುದು ಎಂಬ ಆಶಯ ಹೊಂದಿದ್ದಾರೆ.  

ಆಮೀರ್‌ ಖಾನ್‌, ಸೈಫ್‌ ಅಲಿ ಖಾನ್‌ ಜತೆ ಅಕ್ಷಯ್‌ ಖನ್ನಾ ನಟಿಸಿದ್ದ ‘ದಿಲ್‌ ಚಾಹ್ತಾ ಹೈ’ ದೊಡ್ಡ ಹಿಟ್‌ ಆಗಿತ್ತು. ಅದು ಮಲ್ಟಿ ಸ್ಟಾರರ್‌ ಚಿತ್ರವಾಗಿತ್ತು. ಅದಾದ ನಂತರ ಅಕ್ಷಯ್‌ ಸೋಲೊ ಹೀರೊ ಆಗಿ ನಟಿಸಿದ್ದ ‘ಮಾಮ್‌‘ ಮತ್ತು ‘ಇತ್ತೆಫಾಕ್‌‘ ದಯನೀಯವಾಗಿ ಸೋಲು ಕಂಡವು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ರಾಜಕೀಯ ಜೀವನದ ಸುತ್ತ ಹೆಣೆಯಲಾಗಿದ್ದ ‘ದಿ ಆ್ಯಕ್ಸಿಂಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಕೂಡ ನೆಲಕಚ್ಚಿತು. ವೃತ್ತಿ ಜೀವನಕ್ಕೆ ತಿರುವು ನೀಡುವ ದೊಡ್ಡ ಹಿಟ್‌ ಚಿತ್ರದ ನಿರೀಕ್ಷೆಯಲ್ಲಿರುವ ಅಕ್ಷಯ್‌ ಖನ್ನಾಗೆ ‘ಸೆಕ್ಷನ್‌ 375’ ಆಸರೆಯಾಗಬಹುದೇ ಎಂಬ ಪ್ರಶ್ನೆಗೆ ಸೆ.13ರಂದು ಉತ್ತರ ಸಿಗಲಿದೆ.

Post Comments (+)