ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚನ್‌ ನಿವಾಸದ ಮುಖ್ಯ ದ್ವಾರಕ್ಕೆ ಕಂಟೈನ್‌ಮೆಂಟ್‌ ಬ್ಯಾನರ್‌ ಹಾಕಿದ ಅಧಿಕಾರಿಗಳು

Last Updated 12 ಜುಲೈ 2020, 7:15 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್‌ ಬಚ್ಚನ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಬಚ್ಚನ್‌ ನಿವಾಸವನ್ನು ಕಂಟೈನ್‌ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿದೆ.

ಅಮಿತಾಬ್ ಬಚ್ಚನ್ ಅವರ ನಿವಾಸ ಜಲ್ಸಾದ ಮುಖ್ಯದ್ವಾರಕ್ಕೆ ಕಂಟೈನ್‌ಮೆಂಟ್‌ ಪ್ರದೇಶವೆಂದು ಬರೆಯಲಾಗಿರುವ ಬ್ಯಾನರ್‌ ಅನ್ನು ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಭಾನುವಾರ ಅಂಟಿಸಿದ್ದಾರೆ. ಆ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಅಮಿತಾಬ್ ಬಚ್ಚನ್ (77) ಮತ್ತು ಪುತ್ರ ಅಭಿಷೇಕ್ (44) ಅವರನ್ನು ಶನಿವಾರ ಸಂಜೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಅಮಿತಾಬ್ ಪತ್ನಿ, ನಟಿ ಜಯಾ ಬಚ್ಚನ್‌ ಮತ್ತು ಸೊಸೆ ಐಶ್ವರ್ಯಾ ರೈ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

'ನನಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬಸ್ಥರು ಮತ್ತು ಸಿಬ್ಬಂದಿಗೂ ಪರೀಕ್ಷೆ ಮಾಡಿಸಲಾಗಿದ್ದು, ವರದಿಗಾಗಿ‌ ಕಾಯುತ್ತಿದ್ದೇವೆ. ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ,' ಎಂದು ಅಮಿತಾಬ್‌ ಬಚ್ಚನ್‌ ಶನಿವಾರ ಟ್ವೀಟ್ ಮಾಡಿದ್ದರು.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಅಭಿಷೇಕ್‌ ಬಚ್ಚನ್‌, 'ಇಂದು (ಶನಿವಾರ) ಮುಂಜಾನೆ ನಾನು ಮತ್ತು ನನ್ನ ತಂದೆ ಇಬ್ಬರಿಗೂ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್‌ ಪೊಸಿಟಿವ್‌ ವರದಿ ಬಂದಿದೆ. ನಾವಿಬ್ಬರೂ ಕಡಿಮೆ ರೋಗಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇವೆ. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ನಮ್ಮ ಕುಟುಂಬ ಮತ್ತು ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಎಲ್ಲರೂ ಶಾಂತವಾಗಿರಿ ಮತ್ತು ಆತಂಕ ಪಡಬೇಡಿ' ಎಂದು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT