ಶುಕ್ರವಾರ, ಜೂನ್ 18, 2021
27 °C

ಚಲನಚಿತ್ರೋದ್ಯಮದ ಕಾರ್ಮಿಕರಿಗೂ ವಿಶೇಷ ಪ್ಯಾಕೆಜ್‌ಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದ ಚಿತ್ರೋದ್ಯಮ ಹಾಗೂ ಕಿರುತೆರೆ ಸ್ತಬ್ಧವಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಚಲನಚಿತ್ರೋದ್ಯಮದ ಕಾರ್ಮಿಕರು, ಕಲಾವಿದರುಗಳಿಗೆ ವಿಶೇಷ ಪ್ಯಾಕೆಜ್‌ ಘೋಷಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

‘ಕಳೆದ ವರ್ಷ ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಪದಾರ್ಥಗಳ ಕಿಟ್‌ ಪಡೆಯಲು ₹3,000 ಮೌಲ್ಯದ 6,000 ರಿಲಯನ್ಸ್‌ ಕೂಪನ್‌ಗಳನ್ನು ನೀಡಿ ನೆರವಾಗಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ಎರಡನೇ ಅಲೆಯಿಂದಾಗಿ ಇಡೀ ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಪ್ರತಿ ದಿನದ ಸಂಭಾವನೆಗಾಗಿ ದುಡಿಯುವ ಕನ್ನಡ ಚಲನಚಿತ್ರೋದ್ಯಮ ಹಾಗೂ ಕಿರುತೆರೆಯ ಹಲವು ಕಾರ್ಮಿಕರು, ಕಲಾವಿದರು ಕೋವಿಡ್‌ನಿಂದ ನಿಧನರಾಗಿದ್ದಾರೆ. ಇನ್ನೂ ಹಲವರು ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಕುಟುಂಬದ ನಿತ್ಯದ ಜೀವನ ನಿರ್ವಹಣೆ ದುಸ್ತರವಾಗಿದೆ. ಸರ್ಕಾರವು, ಕಳೆದ ಬಾರಿಯಂತೆ ಈ ಬಾರಿಯೂ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರುಗಳಿಗೆ ದಿನಸಿ ಪದಾರ್ಥಗಳನ್ನು ಖರೀದಿಸಲು ₹5 ಸಾವಿರ ಮೌಲ್ಯದ 6 ಸಾವಿರ ಕೂಪನ್‌ಗಳನ್ನು ವಿತರಿಸುವ ಯೋಜನೆ ಘೋಷಿಸಬೇಕು’ ಎಂದು ಪತ್ರದಲ್ಲಿ ಸುನೀಲ್‌ ಪುರಾಣಿಕ್‌ ಉಲ್ಲೇಖಿಸಿದ್ದಾರೆ.

‘ವಿಶೇಷ ಪ್ಯಾಕೆಜ್‌ನಲ್ಲಿ ನೆರವು ನೀಡಿ’: ಲಾಕ್‌ಡೌನ್‌ನಿಂದಾಗಿ ಜನಜೀವನ ದುಸ್ತರವಾಗಿದ್ದು, ಚಲನಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಕಾರ್ಮಿಕರಿಗೂ ವಿಶೇಷ ಪ್ಯಾಕೆಜ್‌ನಲ್ಲಿ ನೆರವು ನೀಡಿ ಕನ್ನಡ ಚಿತ್ರರಂಗದ ಸದಸ್ಯರ ಕುಟುಂಬಕ್ಕೆ ಆಸರೆಯಾಗಬೇಕು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್‌ ಅವರೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು