ಶನಿವಾರ, ಮೇ 15, 2021
26 °C

ಪ್ರಜ್ವಲ್‌ ‘ಲಾಲ್‌ ಸಲಾಂ!’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಆರು ತಿಂಗಳ ಹಿಂದೆ ಫಣೀಶ್ ನಿರ್ದೇಶನದ ಒಂದು ಸಿನಿಮಾ ಮುಹೂರ್ತವಾಗಿತ್ತು. ಅದರಲ್ಲಿ ವಸಿಷ್ಠ ಸಿಂಹ ನಾಯಕ ನಟ ಎಂದೂ ನಿರ್ಧಾರವಾಗಿತ್ತು. ಆದರೆ ಕೆಲವು ಕಾರಣಗಳಿಂದ ಚಿತ್ರ ಪ್ರಾರಂಭವಾಗಿರಲಿಲ್ಲ. ನಂತರ ಚಿತ್ರ ಪ್ರಾರಂಭಿಸುವ ಸಮಯದಲ್ಲಿ ವಸಿಷ್ಠ ಸಿಂಹ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಅದೇ ಚಿತ್ರ ಪ್ರಜ್ವಲ್ ದೇವರಾಜ್‌ ನಟನೆಯಲ್ಲಿ ನಿರ್ಮಾಣವಾಗುತ್ತಿದೆ.

ಆ ಚಿತ್ರದ ಹೆಸರು ‘ರುದಿರ’. ಇತ್ತೀಚೆಗೆ ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. 

ಪ್ರಜ್ವಲ್‌ ದೇವರಾಜ್‌ ಅವರ ಇಮೇಜ್‌ ಮತ್ತು ಅವರ ಮ್ಯಾನರಿಸಂಗಳನ್ನು ಗಮನದಲ್ಲಿಟ್ಟುಕೊಂಡು ಫಣೀಶ್‌ ಈ ಚಿತ್ರದ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರಂತೆ. ನಿರ್ದೇಶಕರೇ ‘ಭಾಗ್ಯತನಯ ಪ್ರೊಡಕ್ಷನ್‌’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅವರಿಗೆ ಶೋಭಾ ಕೃಷ್ಣಪ್ಪ ಆರ್ಥಿಕ ಬೆಂಬಲ ನೀಡಿದ್ದಾರಂತೆ.

‘ಇದೊಂದು ರೊಮ್ಯಾಂಟಿಕ್‌ ಥ್ರಿಲ್ಲರ್. ಆದರೆ ಅಷ್ಟೇ ಅಲ್ಲ, ಹಲವು ವಿಶೇಷತೆಗಳು ಈ ಚಿತ್ರದಲ್ಲಿವೆ’ ಎನ್ನುತ್ತಾರೆ ನಿರ್ದೇಶಕರು.

ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್‌ ಅವರ ಗೆಟಪ್‌ ಕೂಡ ತುಂಬ ಭಿನ್ನವಾಗಿರುತ್ತದಂತೆ. ‘ಇಡೀ ಚಿತ್ರ ಕಾಡಿನ ಬ್ಯಾಕ್‌ಡ್ರಾಪ್‌ನಲ್ಲಿಯೇ ಘಟಿಸುತ್ತದೆ. ಛತ್ತೀಸಗಡದ ದಂಡಕಾರಣ್ಯದಲ್ಲಿ ಕಥೆ ನಡೆಯುತ್ತದೆ. ಹಾಗಾಗಿ ಹಸಿರು ಮತ್ತು ಮಂಜಿನ ಹಿನ್ನೆಲೆ ಬೇಕಾಗುತ್ತದೆ. ಆದ್ದರಿಂದ ಮೈಸೂರು ಮತ್ತು ಚಿಕ್ಕಮಗಳೂರು, ಕೇರಳಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಕೆಲವು ಭಾಗದ ಚಿತ್ರೀಕರಣ ಮಾಡಲು ಛತ್ತೀಸಗಡಕ್ಕೂ ಹೋಗುವ ಆಲೋಚನೆ ಇದೆ’ ಎಂದು ಫಣೀಶ್ ವಿವರಿಸಿದರು. ಡಿಸೆಂಬರ್ 4ರಿಂದ ಮೊದಲ ಹಂತದ ಚಿತ್ರೀಕರಣ ಆರಂಭಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ.

ನಕ್ಸಲ್‌ ಚಳವಳಿಯ ಛಾಯೆಯೂ ಈ ಚಿತ್ರದಲ್ಲಿದೆ. ‘ಈಗ ಎಡಪಂಥ ಬಲಪಂಥ ಎಂದು ವಿಭಾಗಿಸಿಕೊಂಡು ಜಗಳ ಜೋರು ನಡೆಯುತ್ತಿದೆ. ಯಾವ ಐಡಿಯಾಲಜಿಗಳೂ ಶಾಶ್ವತ ಅಲ್ಲ. ಒಂದು ಕಾಲಕ್ಕೆ ಪ್ರಸ್ತುತವಾಗಿದ್ದ ಐಡಿಯಾಲಜಿ ಮುಂದೆ ಅಪ್ರಸ್ತುತ ಆಗಬಹುದು ಎಂಬುದನ್ನೇ ಈ ಚಿತ್ರದಲ್ಲಿ ಹೇಳಹೊರಟಿದ್ದೇವೆ’ ಎಂದು ಫಣೀಶ್ ವಿವರಣೆ ನೀಡಿದರು.

‘ಗೆಳೆಯ ಸಿನಿಮಾ ನಂತರ ಒಂದು ನೆಗೆಟಿವ್ ಛಾಯೆ ಇರುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜನರಿಗಾಗಿ ಹೋರಾಡುವ ನಾಯಕ ಇವನು. ಇಡೀ ಚಿತ್ರ ಆ್ಯಕ್ಷನ್‌ ಟೆಂಪೊದಲ್ಲಿಯೇ ಬೆಳೆಯುತ್ತ ಹೋಗುತ್ತದೆ. ಅದಕ್ಕೆ ತಕ್ಕ ಹಾಗೆಯೇ ಹಾಸ್ಯ, ಪ್ರೇಮ ಎಲ್ಲವೂ ಇದೆ’ ಎಂದರು ಪ್ರಜ್ವಲ್ ದೇವರಾಜ್‌. ‘ಈ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುವ ಗೆಟಪ್‌ನಲ್ಲಿ ನೀವು ನನ್ನನ್ನು ಗುರ್ತು ಹಿಡಿಯುವುದೂ ಕಷ್ಟ ಆಗಬಹುದು’ ಎಂದೂ ಅವರು ಹೇಳಿದರು. 

ಪ್ರಜ್ವಲ್‌ ತಂದೆ ದೇವರಾಜ್‌ ಕೂಡ ಈ ಚಿತ್ರದ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಅವರದು ಸಿಆರ್‌ಪಿಎಫ್‌ ಅಧಿಕಾರಿಯ ಪಾತ್ರ. 

‘ರುದಿರ’ಕ್ಕೆ ನಾಯಕಿ ಯಾರು ಎಂದು ಅಂತಿಮಗೊಂಡಿಲ್ಲ. ಈ ಚಿತ್ರದ ನಾಯಕಿ ಡಾಕ್ಟರ್. ಆ ಹೊಸ ಡಾಕ್ಟರ್‌ಗೆ ಹಳೆ ಕಾಂಪೌಂಡರ್ ಆಗಿ ತಬಲಾ ನಾಣಿ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ದೀಪಕ್ ಸುಬ್ರಹ್ಮಣ್ಯ ಎಂಬ ಹೊಸ ಹುಡುಗ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. 

ವಿಜಯ್ ಪ್ರಕಾಶ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು