‘ದಂಡುಪಾಳ್ಯಂ 4'ಗೆ ಸೆನ್ಸಾರ್‌ ಅಡ್ಡಿ

7
ಅನುಮತಿ ನಿರಾಕರಿಸಿದ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ

‘ದಂಡುಪಾಳ್ಯಂ 4'ಗೆ ಸೆನ್ಸಾರ್‌ ಅಡ್ಡಿ

Published:
Updated:

ಬೆಂಗಳೂರು: ಕೊಡವ ಭಾಷೆಯ ‘ಪಾರಣೆ’ ಚಿತ್ರವನ್ನು ತಿರಸ್ಕರಿಸಿದ ಬೆನ್ನಲ್ಲೇ ನಟಿ ಸುಮನ್‌ ರಂಗನಾಥ್‌ ಮುಖ್ಯಭೂಮಿಕೆಯಲ್ಲಿರುವ ಕನ್ನಡದ ‘ದಂಡುಪಾಳ್ಯಂ 4’ ಚಿತ್ರವನ್ನೂ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ ತಿರಸ್ಕರಿಸಿದೆ.

ಕಳೆದ ನವೆಂಬರ್‌ 9ರಂದು ಮಂಡಳಿ ಮುಂದೆ ಸಿನಿಮಾದ ಪ್ರಮಾಣೀಕರಣಕ್ಕಾಗಿ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಆದರೆ, ಯಾವುದೇ ಸ್ಪಷ್ಟ ಕಾರಣ ನೀಡದೆ ಚಿತ್ರವನ್ನು ತಿರಸ್ಕರಿಸಲಾಗಿದೆ. ಮರುಪರಿಶೀಲನಾ ಸಮಿತಿ ಮುಂದೆ ಅರ್ಜಿ ಸಲ್ಲಿಸುವಂತೆ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಿ.ಎನ್. ಶ್ರೀನಿವಾಸಪ್ಪ ಸೂಚಿಸಿದ್ದಾರೆ. ಅವರ ಈ ನಿರ್ಧಾರ ಖಂಡಿಸಿ ಕೇಂದ್ರ ನ್ಯಾಯಮಂಡಳಿಯ ಮೊರೆ ಹೋಗಲು ಚಿತ್ರದ ನಿರ್ಮಾಪಕ ವೆಂಕಟ್‌ ನಿರ್ಧರಿಸಿದ್ದಾರೆ.

‘ಒಂದು ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಕನ್ನಡ, ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದೇನೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯ ಆಲೋಚನೆಯಿದೆ. ಆದರೆ, ಮಂಡಳಿಯ ಅವೈಜ್ಞಾನಿಕ ನಿಲುವಿನಿಂದ ತೊಂದರೆ ಅನುಭವಿಸುವಂತಾಗಿದೆ‘ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

ಇದನ್ನೂ ಓದಿ... ‘ಪಾರಣೆ’ಗೆ ಸೆನ್ಸಾರ್ ತೊಂದರೆ: ರಾಷ್ಟ್ರ, ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಲು ಅನರ್ಹ

‘ಸಿನಿಮಾದ ಅವಧಿ 2 ಗಂಟೆ 15 ನಿಮಿಷ. ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದರೆ ನನ್ನ ಅಭ್ಯಂತರವಿಲ್ಲ. ಸಿನಿಮಾ ಅವಧಿಯನ್ನು ಒಂದು ಗಂಟೆಗೆ ಇಳಿಸಿದರೂ ನಾನು ಪ್ರದರ್ಶನಕ್ಕೆ ಸಿದ್ಧ. ಮಂಡಳಿಯ ಸದಸ್ಯರು ಕೇವಲ ಪ್ರದರ್ಶನ ಗೊಂಬೆಗಳಷ್ಟೇ. ನನ್ನ ಪ್ರಶ್ನೆಗಳಿಗೆ ಪ್ರಾದೇಶಿಕ ಅಧಿಕಾರಿಯು ಉತ್ತರ ನೀಡಲು ಸಿದ್ಧರಿಲ್ಲ. ನ್ಯಾಯಮಂಡಳಿಗೆ ಹೋಗುವುದರಿಂದ ಸಿನಿಮಾ ಬಿಡುಗಡೆಯು ಮೂರ್ನಾಲ್ಕು ತಿಂಗಳು ಮುಂದಕ್ಕೆ ಹೋಗಲಿದೆ. ಸಾಲ ಮಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ. ನನಗಾಗುವ ನಷ್ಟವನ್ನು ಮಂಡಳಿ ಭರಿಸುತ್ತದೆಯೇ?’ ಎಂದು ಪ್ರಶ್ನಿಸಿದರು.


ನಿರ್ಮಾಪಕ ವೆಂಕಟ್‌

‘ಸಿನಿಮಾದ ಪ್ರಮಾಣೀಕರಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿಯೇ ನಡೆಯಬೇಕು. ಆ ಮೂಲಕವೇ ಸಂದೇಶ ರವಾನಿಸಲಾಗುತ್ತದೆ ಎಂದು ಪ್ರಾದೇಶಿಕ ಅಧಿಕಾರಿ ಹೇಳುತ್ತಾರೆ. ಕೆಲವು ಚಿತ್ರಗಳಿಗೆ ಎರಡು, ಮೂರು ದಿನದೊಳಗೆ ಮಂಡಳಿ ಅನುಮತಿ ನೀಡಿದ ಉದಾಹರಣೆಯಿದೆ. ಆದರೆ, ನಮ್ಮ ಸಿನಿಮಾಕ್ಕೆ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಈ ಸಂಬಂಧ ಅರ್ಜಿ ಸಲ್ಲಿಸಿರುವೆ. ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರ ನಿರ್ಮಾಣಕ್ಕೆ ಹಣವನ್ನೇನೂ ನೀಡುವುದಿಲ್ಲ. ಆದರೂ, ನಿರ್ಮಾಪಕರಿಗೆ ಸಾಕಷ್ಟು ತೊಂದರೆ ಕೊಡುತ್ತಿದೆ ಎಂದು ಟೀಕಿಸಿದರು.

‘ದಂಡುಪಾಳ್ಯಂ 4 ಚಿತ್ರವನ್ನು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ತಮಿಳಿನಲ್ಲಿ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದೆ. ಒಂದು ವಾರದೊಳಗೆ ಅಲ್ಲಿನ ಪ್ರಾದೇಶಿಕ ಮಂಡಳಿಯಿಂದ ಅನುಮತಿ ದೊರೆಯಲಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !