ಶನಿವಾರ, ಡಿಸೆಂಬರ್ 14, 2019
23 °C

‘ಗಂಡುಗಲಿ ಮದಕರಿನಾಯಕ’ನಿಗೆ ಮೋಹಕ ತಾರೆ ರಮ್ಯಾ ನಾಯಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದತ್ತ ಚಿತ್ರದಲ್ಲಿ ದರ್ಶನ್‌ ಮತ್ತು ರಮ್ಯಾ

ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ಬಹುನಿರೀಕ್ಷಿತ ಐತಿಹಾಸಿಕ ‘ಗಂಡುಗಲಿ ಮದಕರಿನಾಯಕ’ ಚಿತ್ರದ ಮುಹೂರ್ತ ಡಿಸೆಂಬರ್‌ 2ರಂದು ನಡೆಯುವುದು ಖಾತ್ರಿಯಾಗಿದೆ. ಮದಕರಿನಾಯಕನಾಗಿ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯಿಸಲಿದ್ದಾರೆ. ಅಂದಹಾಗೆ ಅವರಿಗೆ ‘ಮೋಹಕ ತಾರೆ’ ರಮ್ಯಾ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಮತ್ತೊಂದೆಡೆ ದರ್ಶನ್‌ ಅವರ ಅಭಿಮಾನಿಗಳು ಈ ಚಿತ್ರದಲ್ಲಿ ದಚ್ಚುಗೆ ರಮ್ಯಾ ಅವರೇ ನಾಯಕಿ ಎಂದು ಇಬ್ಬರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದು ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

2006ರಲ್ಲಿ ತೆರೆಕಂಡ ‘ದತ್ತ’ ಚಿತ್ರದಲ್ಲಿ ರಮ್ಯಾ ಮತ್ತು ದರ್ಶನ್‌ ಒಟ್ಟಾಗಿ ನಟಿಸಿದ್ದರು. ಬಳಿಕ ರಮ್ಯಾ ನಟಿಸಿದ ‘ಅರಸು’, ‘ಜೊತೆ ಜೊತೆಯಲಿ’, ನಾಗರಹಾವು’ ಚಿತ್ರಗಳಲ್ಲಿ ದರ್ಶನ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಆ ನಂತರ ಇಬ್ಬರೂ ತೆರೆಯ ಮೇಲೆ ಒಟ್ಟಾಗಿ ನಟಿಸಿಲ್ಲ. ಹನ್ನೆರಡು ವರ್ಷದ ಬಳಿಕ ಇಬ್ಬರೂ ಒಟ್ಟಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ.

‘ಗಂಡುಗಲಿ ಮದಕರಿನಾಯಕ’ ಬಿ.ಎಲ್‌.ವೇಣು ಅವರ ಕಾದಂಬರಿ ಆಧಾರಿತ ಚಿತ್ರ. ಇದಕ್ಕೆ ಆರ್ಥಿಕ ಇಂಧನ ಒದಗಿಸುತ್ತಿರುವುದು ರಾಕ್‌ಲೈನ್‌ ವೆಂಕಟೇಶ್‌. ಚಿತ್ರದುರ್ಗ, ರಾಜಸ್ಥಾನ, ಮುಂಬೈನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲು ಸಿದ್ಧತೆ ನಡೆದಿದೆ.

ಎಂ.ಡಿ. ಶ್ರೀಧರ್ ನಿರ್ದೇಶನದ ದರ್ಶನ್‌ ನಟನೆಯ ‘ಒಡೆಯ’ ಚಿತ್ರ ಡಿಸೆಂಬರ್‌ 12ರಂದು ತೆರೆ ಕಾಣಲಿದೆ. ಜೊತೆಗೆ, ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ ಕೂಡ ಮುಗಿಯುವ ಹಂತದಲ್ಲಿದೆ. ಆನಂತರ ದರ್ಶನ್‌ ಅವರು ‘ಗಂಡುಗಲಿ ಮದಕರಿನಾಯಕ’ ಚಿತ್ರದಲ್ಲಿ ನಟಿಸಲಿದ್ದಾರೆ. ‘ಗಂಡುಗಲಿ ಮದಕರಿನಾಯಕ’ ಚಿತ್ರಕ್ಕೆ ಹಂಸಲೇಖ ಅವರ ಸಂಗೀತವಿದೆ. ಛಾಯಾಗ್ರಹಣ ಅಶೋಕ್‌ ಕಶ್ಯಪ್‌ ಅವರದು.

ದರ್ಶನ್‌ ನಟನೆಯ ಐತಿಹಾಸಿಕ ಚಿತ್ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡಿವೆ. ಹಾಗಾಗಿ, ‘ಗಂಡುಗಲಿ ಮದಕರಿನಾಯಕ’ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು