ಶುಕ್ರವಾರ, ಅಕ್ಟೋಬರ್ 2, 2020
21 °C

ಮತ್ತೊಂದು ಹೊಸ ಚಿತ್ರಕ್ಕೆ ಅಣಿಯಾದ ದರ್ಶನ್‌

. Updated:

ಅಕ್ಷರ ಗಾತ್ರ : | |

Prajavani

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ದುರ್ಯೋಧನನಂತಹ ಐತಿಹಾಸಿಕ, ಪುರಾಣ ಪ್ರಸಿದ್ಧ ಪಾತ್ರಗಳಲ್ಲಿ ಮಿಂಚಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ದರ್ಶನ್‌ ಈ ಬಾರಿ ಬಣ್ಣ ಹಚ್ಚಲಿರುವುದು ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ. ಚಿತ್ರಕ್ಕೆ ಇನ್ನೂ ಟೈಟಲ್‌ ಅಂತಿಮವಾಗಿಲ್ಲ. ‘ಸಿಂಧೂರ ಲಕ್ಷ್ಮಣ’ ಹೆಸರು ಅಂತಿಮವಾಗುವ ನಿರೀಕ್ಷೆ ಇದ್ದು, ಸದ್ಯಕ್ಕೆ ‘ಪ್ರೊಡಕ್ಷನ್ ನಂಬರ್ 4’ ಹೆಸರಿನೊಂದಿಗೆ ಚಿತ್ರದ ಕೆಲಸಗಳನ್ನು ಚಿತ್ರತಂಡ ಕೈಗೆತ್ತಿಕೊಂಡಿದೆ.

ಈಗಾಗಲೇ ಸಿಂಧೂರ ಲಕ್ಷ್ಮಣನ ಕಥೆ ಹೇಳಿರುವ ತರುಣ್‌ ವರಮಹಾಲಕ್ಷ್ಮಿ ಹಬ್ಬಂದು ಸ್ಕ್ರಿಪ್ಟ್ಗೆ ಪೂಜೆ ಸಲ್ಲಿಸಿ, ಚಿತ್ರದ ಕೆಲಸಗಳನ್ನು ಶುರು ಮಾಡಿದ್ದಾರಂತೆ. ಈ ಚಿತ್ರಕ್ಕೂ ‘ರಾಬರ್ಟ್‌’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರೇ ಬಂಡವಾಳ ಹೂಡುತ್ತಿರುವುದು.

ತರುಣ್‌ ಅವರ ತಂದೆ, ಖಳನಟ ಸುಧೀರ್‌ ಅವರು ರಂಗಭೂಮಿಯಲ್ಲಿ ಸಾವಿರಾರು ಬಾರಿ ಬಣ್ಣ ಹಚ್ಚಿರುವ ಪಾತ್ರ ಸಿಂಧೂರ ಲಕ್ಷ್ಮಣನದು. ಉತ್ತರ ಕರ್ನಾಟಕದ ಮಂದಿ ಸುಧೀರ್‌ ಅವರನ್ನು ಲಕ್ಷ್ಮಣನನ್ನಾಗಿಯೇ ನೋಡುತ್ತಿದ್ದರಂತೆ. ತಮ್ಮ ತಂದೆ ಹೆಚ್ಚು ಬಾರಿ ರಂಗಪ್ರಯೋಗದಲ್ಲಿ ಕಾಣಿಸಿಕೊಂಡ ಪಾತ್ರವನ್ನು ಅದರಲ್ಲೂ ತಮ್ಮ ನೆಚ್ಚಿನ ನಟ, ಸ್ನೇಹಿತ ದರ್ಶನ್‌ ಅವರ ಮೂಲಕ ತೆರೆಗೆ ತರಲು ತರುಣ್‌ಗೆ ತುಂಬಾ ಖುಷಿ ಇದೆಯಂತೆ.

ದರ್ಶನ್‌ ಅಭಿನಯ ಮತ್ತು ತರುಣ್‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್‌’ ಬಿಡುಗಡೆಯ ಹೊಸ್ತಿನಲ್ಲಿದೆ. ಕೊರೊನಾ ಲಾಕ್‌ಡೌನ್‌ ಕಾರಣಕ್ಕಾಗಿ ಈ ಚಿತ್ರ ಬಿಡುಗಡೆ ವಿಳಂಬವಾಗಿದೆ. ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಳ್ಳದಿದ್ದರೆ ಇಷ್ಟರ ವೇಳೆಗಾಗಲೇ ‘ರಾಬರ್ಟ್‌’ ಅಬ್ಬರ ಶುರುವಾಗಿರುತ್ತಿತ್ತು. ರಾಬರ್ಟ್‌ ಪೂರ್ಣಗೊಳಿಸಿರುವ ದರ್ಶನ್‌– ತರುಣ್‌ ಜೋಡಿ ಮತ್ತೊಂದು ಬಹುನಿರೀಕ್ಷೆಯ ಚಿತ್ರಕ್ಕೆ ರೆಡಿಯಾಗಿದೆ. ಈ ನಡುವೆ ದರ್ಶನ್‌ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನ ಮತ್ತು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದು, ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು