ಶನಿವಾರ, ಡಿಸೆಂಬರ್ 4, 2021
26 °C

‘ಕ್ರಾಂತಿ’ಯಲ್ಲಿ ಮತ್ತೆ ಒಂದಾದ ‘ಬುಲ್‌ಬುಲ್‌’ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ 55ನೇ ಸಿನಿಮಾ ‘ಕ್ರಾಂತಿ’ಯಲ್ಲಿ ‘ಬುಲ್‌ಬುಲ್‌’ ಜೋಡಿ ಮತ್ತೆ ಒಂದಾಗುತ್ತಿದೆ. ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್‌ ನಟಿಸಲಿದ್ದು, ವಿಜಯದಶಮಿಯ ಶುಭಸಂದರ್ಭದಲ್ಲಿ ಚಿತ್ರದ ಮುಹೂರ್ತ ನಡೆಯಿತು.

ನಟಿ, ಸಂಸದೆ ಸುಮಲತಾ ಅಂಬರೀಷ್‌ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ನಟರಾದ ರವಿಚಂದ್ರನ್‌, ಅಭಿಷೇಕ್‌ ಅಂಬರೀಷ್‌ ಉಪಸ್ಥಿತರಿದ್ದರು. ಕ್ರಾಂತಿ ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ತೆರೆಕಾಣಲಿದೆ. 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ ‘ಯಜಮಾನ’ ಚಿತ್ರತಂಡವು ‘ಕ್ರಾಂತಿ’ ಸಿನಿಮಾದ ಮೂಲಕ ಇದೀಗ ಮತ್ತೆ ಒಂದಾಗುತ್ತಿದೆ. ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಮೀಡಿಯಾ ಹೌಸ್‌ ಸ್ಟುಡಿಯೋ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಚಿತ್ರಕಥೆ, ನಿರ್ದೇಶನ ಹಾಗೂ ದರ್ಶನ್‌ ಅವರ ಭರ್ಜರಿ ಡೈಲಾಗ್‌ಗಳು ಹಾಗೂ ಸಾಹಸ ದೃಶ್ಯಗಳಿಂದ ‘ಯಜಮಾನ’ ಚಿತ್ರ ಯಶಸ್ಸು ಕಂಡಿತ್ತು. ನಿರ್ದೇಶನದ ಜೊತೆಗೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದ್ದ ಈ ಚಿತ್ರದ ಎಲ್ಲಾ ಹಾಡುಗಳು ಹಿಟ್‌ ಆಗಿದ್ದವು. ಇತ್ತೀಚೆಗೆ ನಡೆದ ಸೈಮಾದಲ್ಲಿ 8 ಪ್ರಶಸ್ತಿಗಳನ್ನು ‘ಯಜಮಾನ’ ಚಿತ್ರವು ಪಡೆದಿತ್ತು. ದರ್ಶನ್‌ ಈ ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆದಿದ್ದರು. 2019ರಲ್ಲಿ ದರ್ಶನ್ ಅಭಿನಯದ ‘ಯಜಮಾನ’, ‘ಕುರುಕ್ಷೇತ್ರ’ ಮತ್ತು ‘ಒಡೆಯ’ ಸಿನಿಮಾಗಳು ತೆರೆಕಂಡಿದ್ದವು. 2021ರ ಮಾರ್ಚ್‌ನಲ್ಲಿ ತೆರೆಕಂಡ ‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಸಿನಿಮಾ. ಪ್ರಸ್ತುತ ದರ್ಶನ್, ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು