ಭಾನುವಾರ, ಏಪ್ರಿಲ್ 18, 2021
33 °C

'ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್‌ ಅಣ್ಣ': ಸಂಚಲನ ಸೃಷ್ಟಿಸಿದ ದರ್ಶನ್‌ ಶುಭಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದರ್ಶನ್‌ ಅಭಿಮಾನಿಗಳು ಮತ್ತು ನಟ ಜಗ್ಗೇಶ್‌ ನಡುವೆ ತಿಕ್ಕಾಟ ನಡೆದು ಸುಮಾರು ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಇಬ್ಬರ ನಡುವೆಯೂ ಸಾಮರಸ್ಯದ ಬಾಂಧವ್ಯ ಗಟ್ಟಿಯಾಗಿದೆ. 

ಜಗ್ಗೇಶ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ದರ್ಶನ್‌ ಅವರು ಫೇಸ್‌ಬುಕ್‌ನಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್‌ ಅಣ್ಣ ಎಂದು ಬರೆದು ಶುಭ ಕೋರಿದ್ದಾರೆ. ದರ್ಶನ್‌ ಅವರ ಒಂದು ಸಾಲಿಗೆ 708 ಮಂದಿ ಪ್ರತಿಕ್ರಿಯಿಸಿದ್ದಾರೆ. 208 ಮಂದಿ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸಿದ್ದಾರೆ.

ದರ್ಶನ್‌ ಅಭಿಮಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದೆ ಬನ್ನೂರು ಸಮೀಪ ಜಗ್ಗೇಶ್ ಅವರನ್ನು ದರ್ಶನ್‌ ಅಭಿಮಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ದರ್ಶನ್‌ ಅವರು ಅಲ್ಲಿಂದಲೇ ಅಭಿಮಾನಿಗಳ ಪರವಾಗಿ ಜಗ್ಗೇಶ್‌ ಅವರ ಬಳಿ ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದಿದ್ದರು.

‘ದರ್ಶನ್‌ ನಡವಳಿಕೆಯಿಂದ ನನ್ನ ಮನಸ್ಸು ಹಗುರವಾಯಿತು’ ಎಂದು ಜಗ್ಗೇಶ್‌ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದರು. ಇದಾದ ಕೆಲ ದಿನಗಳ ಅಂತರದ ಬಳಿಕ ದರ್ಶನ್‌ ಜಗ್ಗೇಶ್‌ ಅವರಿಗೆ ಶುಭ ಕೋರಿದ್ದು ಚಿತ್ರರಂಗದಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜಗ್ಗೇಶ್‌ ಅವರು ಇಂದು ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು. ಹುಟ್ಟುಹಬ್ಬದ ಸಲುವಾಗಿ ಮನೆಯಲ್ಲೇ ಗುರು ರಾಘವೇಂದ್ರ ರಾಯರಿಗೆ ಪೂಜೆ ಸಲ್ಲಿಸಿ ಕುಟುಂಬದವರೊಂದಿಗೆ ಕಾಲ ಕಳೆದರು. ಅಭಿಮಾನಿಗಳ ಶುಭಾಶಯ ಸ್ವೀಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು